ಮಸ್ಕಿ: ಶಿವಯೋಗಿ ಸಿದ್ಧರಾಮೇಶ್ವರರ ಜಯಂತಿ ಹಾಗೂ ಸಿದ್ಧರಾಮೇಶ್ವರ ದೇವಸ್ಥಾನದ 24ನೇ ವರ್ಷದ ವಾರ್ಷಿಕೋತ್ಸವವನ್ನು ಫೆ.16 ರಂದು ಹಮ್ಮಿಕೊಳ್ಳಲಾಗಿದೆ ಎಂದು ಭೋವಿ (ವಡ್ಡರ್) ಸಮಾಜದ ಮುಖಂಡ ಆನಂದ ಬನಗಲ್ ತಿಳಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಫೆ.16 ರಂದು ಬೆಳಿಗ್ಗೆ ಸಿದ್ಧರಾಮೇಶ್ವರ ದೇವರ ಮೂರ್ತಿಗೆ ರುದ್ರಾಭಿಷೇಕ, ವಿಶೇಷ ಪೂಜೆ ನಡೆಯಲಿದೆ. ನಂತರ ಕವಿತಾಳ ಕ್ರಾಸ ಹತ್ತಿರದ ಸಿದ್ಧರಾಮೇಶ್ವರ ವೃತ್ತದಿಂದ ವಾದ್ಯಮೇಳ ಹಾಗೂ ಮಹಿಳೆಯರ ಕಳಸ ಕನ್ನಡಿಯೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಿದ್ಧರಾಮೇಶ್ವರರ ಭಾವಚಿತ್ರದ ಮೆರವಣಿಗೆ ಅದ್ಧೂರಿಯಾಗಿ ನಡೆಯಲಿದೆ ಎಂದರು.
ಈ ಕಾರ್ಯಕ್ರಮಕ್ಕೆ ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಅಂಕಲಿಮಠದ ವೀರಭದ್ರ ಮಹಾಸ್ವಾಮೀಜಿ, ಗಚ್ಚಿನಮಠದ ವರರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಇರಕಲ್‌ಮಠದ ಬಸವಪ್ರಸಾದ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ. ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಎರಡು ಸಾವಿರ ಸಮಾಜದ ಬಂಧುಗಳ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.
ಮುಖಂಡರಾದ ಸಾರಪ್ಪ ಬಂಗಾಲಿ, ರಮೇಶ ಗುಡಿಸಲಿ, ಶಿವರಾಜ ಬುಕ್ಕಣ್ಣ, ದುರುಗಪ್ಪ ಗೋನ್ವಾರ, ಮಲ್ಲಯ್ಯ ಛಾವಣಿ, ಜಿ.ಎಸ್.ಆನಂದ, ವೀರೇಶ ಬಡಿಗಿ, ಆಂಜನೇಯ ಆನೆಹೊಸೂರು, ಅಮರೇಶ ಸಾನಬಾಳ, ನಾಗರಾಜ ಸೇರಿದಂತೆ ಇತರರಿದ್ದರು. ಮಸ್ಕಿ ಪಟ್ಟಣದ ಪತ್ರಿಕಾ ಭವನದಲ್ಲಿ ಶಿವಯೋಗಿ ಸಿದ್ಧರಾಮೇಶ್ವರರ ಜಯಂತಿ ಹಾಗೂ 24ನೇ ವರ್ಷದ ವಾರ್ಷಿಕೋತ್ಸವದ ಪೋಸ್ಟರ್ ಬಿಡುಗಡೆಗೊಳಿಸಿದರು.

Leave a Reply

Your email address will not be published. Required fields are marked *