ರಾಯಚೂರು ಫೆಬ್ರವರಿ 13 (ಕರ್ನಾಟಕ ವಾರ್ತೆ): ರಾಯಚೂರು ಜಿಲ್ಲಾ ಪ್ರವಾಸದಲ್ಲಿದ್ದ ರಾಯಚೂರು ಮಹಾನಗರ ಪಾಲಿಕೆಯ ಆಡಳಿತಾಧಿಕಾರಿಗಳು ಆಗಿರುವ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಜಹೀರಾ ನಸೀಮ್ ಅವರು ಫೆ.11ರಂದು ಯಕ್ಲಸಾಪೂರ ಬಳಿಯಲ್ಲಿರುವ ರಾಯಚೂರಿನ ಘನತ್ಯಾಜ್ಯ ಸಂಪನ್ಮೂಲ ಪುನರ್ಬಳಕೆ ನಿರ್ವಹಣಾ ಘಟಕಕ್ಕೆ ಭೇಟಿ ನೀಡಿದರು.
ಜೆಸಿಬಿ ಮತ್ತು ಇನ್ನೀತರ ಯಂತ್ರಗಳ ಮೂಲಕ ಬಿರುಸಿನಿಂದ ನಡೆದ ಘನತ್ಯಾಜ್ಯ ಸಂಪನ್ಮೂಲ ಪುನರ್ಬಳಕೆ ನಿರ್ವಹಣಾ ಕಾರ್ಯದ ವೀಕ್ಷಣೆ ನಡೆಸಿದ ಆಯುಕ್ತರು, ಪಾಲಿಕೆಯು ಘಟಕದ ಆವರಣದಲ್ಲಿ ಕೈಗೊಂಡ ಬೇರೆ ಬೇರೆ ಕಾರ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಕೆಲ ತಿಂಗಳುಗಳ ಹಿಂದಷ್ಟೇ ಉಪ ಲೋಕಾಯುಕ್ತರಾದ ಬಿ ವೀರಪ್ಪ ಅವರು ಇಲ್ಲಿಗೆ ಭೇಟಿ ನೀಡಿ ಘಟಕದ ನಿರ್ವಹಣಾ ಕಾರ್ಯದ ಬಗ್ಗೆ ಪರಿಶೀಲಿಸಿ, ಕಾರ್ಯಚುರುಕುಗೊಳಿಸಲು ಸೂಚನೆ ನೀಡಿದ್ದರು. ಅದರಂತೆ ಪಾಲಿಕೆಯು ಈ ಕಾರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಸಾಕಷ್ಟು ಪ್ರಮಾಣದಲ್ಲಿ ಹಾಕಲಾಗಿದ್ದ ಘನತಾಜ್ಯ ಸಂಪನ್ಮೂಲ ಪುನರ್ಬಳಕೆ ನಿರ್ವಹಣಾ ಕಾರ್ಯ ನಡೆಸಿ ಅರ್ಧದಷ್ಟು ತಾಜ್ಯವನ್ನು ವಿಲೆ ಮಾಡಿ ಈಗ ಮೊದಲಿಗಿಂತ ನಿರ್ವಹಣಾ ಕಾರ್ಯ ಚುರುಕಾಗಿ ನಡೆದಿದೆ. ಇನ್ನು ಕೆಲವೇ ತಿಂಗಳಲ್ಲಿ ಇಲ್ಲಿನ ಎಲ್ಲ ಘನತಾಜ್ಯವನ್ನು ಪುನರ್ಬಳಕೆ ಪ್ರಕ್ರಿಯೆಗೊಳಪಡಿಸಿ ಖಾಲಿ ಮಾಡುವುದಾಗಿ ಆಯುಕ್ತರಾದ ಜುಬಿನ್ ಮೊಹಪಾತ್ರ ಅವರು ಆಯುಕ್ತರಿಗೆ ತಿಳಿಸಿದರು.
ಪಾಲಿಕೆಯ ವಾಹನಗಳ ವೀಕ್ಷಣೆ: ರಾಯಚೂರು ಮಹಾನಗರ ಪಾಲಿಕೆಯಿಂದ ನಗರದ ಸ್ವಚ್ಛತೆಗಾಗಿ ಖರೀದಿಸಿರುವ ಸ್ವೀಪಿಂಗ್ ಯಂತ್ರ, ಒಳಚರಂಡಿ ಶುಚಿಗೊಳಿಸುವ ಮೌಂಟೇಡ್ ರೋಬೋಟಿಕ್ ಯಂತ್ರದ ಕಾರ್ಯವನ್ನು ಆಯುಕ್ತರು ವೀಕ್ಷಣೆ ನಡೆಸಿದರು. ನಗರದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಎರಡೂ ವಾಹನಗಳ ಕಾರ್ಯಗಳ ವೀಕ್ಷಣೆ ನಡೆಸಿದರು.
ಮಾವಿನ ಕೆರೆ ಪ್ರದೇಶಕ್ಕೆ ಭೇಟಿ: ರಾಯಚೂರು ಪ್ರವಾಸದಲ್ಲಿದ್ದ ಪ್ರಾದೇಶಿಕ ಆಯುಕ್ತರು, ಮಾವಿನ ಕೆರೆ ಪ್ರದೇಶಕ್ಕೆ ಭೇಟಿ ನೀಡಿದರು. ಮಾವಿನಕೆರೆ ಕೆರೆ ದಡದ ಮೇಲೆ ಕೈಗೊಂಡ ಕಾಮಗಾರಿ, ಉದ್ಯಾನ ನಿರ್ಮಾಣ, ಪುಟ್ ಪಾತ್ ನಿರ್ಮಾಣದ ಕಾಮಗಾರಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಕೆರೆಗೆ ನೀರು ಕಡಿಮೆಯಾದಾಗಲು ಸಹ ಉದ್ಯಾನ ನಿರ್ವಹಣೆಯು ಸಮರ್ಪಕವಾಗಿ ನಡೆಯುವಂತೆ ನೋಡಿಕೊಳ್ಳಲು ಆಯುಕ್ತರು ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ಪಾಲಿಕೆಯ ಸಮಿತಿಯ ಕಾರ್ಯದರ್ಶಿ ಕೃಷ್ಣ ಶಾವಂತಗೇರಿ, ಉಪ ಆಯುಕ್ತರಾದ ಶರಣಪ್ಪ ಸತ್ಯಂಪೇಟೆ, ಸಂತೋಷ ರಾಣಿ ಸೇರಿದಂತೆ ಪಾಲಿಕೆಯ ಇನ್ನೀತರ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *