ರಾಯಚೂರು ಫೆಬ್ರವರಿ 13 (ಕರ್ನಾಟಕ ವಾರ್ತೆ): ಸಾರ್ವಜನಿಕರ ಅನುಕೂಲಕ್ಕಾಗಿ, ಭಾರತೀಯ ಅಂಚೆ ಇಲಾಖೆಯಿಂದ ಎಲ್ಲಾ ಇಲಾಖಾ ಅಂಚೆ ಕಚೇರಿಗಳಲ್ಲಿ ಕಚೇರಿ ಕಾರ್ಯ ಸಮಯ ಮುಕ್ತಾಯವಾಗುವ ಮೊದಲು ಕೊನೆಯ 30 ನಿಮಿಷಗಳವರೆಗೆ ಅಂಚೆ ವಸ್ತುಗಳನ್ನು ಬುಕ್ ಮಾಡುವ ಸೌಲಭ್ಯವನ್ನು ಒದಗಿಸಲಾಗುತ್ತಿದೆ ಎಂಬುದನ್ನು ಸಾರ್ವಜನಿಕರಿಗೆ ತಿಳಿಸಲಾಗುತ್ತಿದೆ.
ಈ ವ್ಯವಸ್ಥೆಯಡಿ, ಕಾರ್ಯದಿನಗಳಲ್ಲಿ ಇಲಾಖಾ ಅಂಚೆ ಕಚೇರಿಗಳ ನಿಗದಿತ ಕಾರ್ಯಾವಧಿ ಮುಕ್ತಾಯಕ್ಕೆ ಮುಂಚಿತವಾಗಿ 30 ನಿಮಿಷಗಳವರೆಗೆ ಸ್ಪೀಡ್ ಪೋಸ್ಟ್, ಪಾರ್ಸೆಲ್ ಹಾಗೂ ಅಂತಾರಾಷ್ಟ್ರೀಯ ಸ್ಪೀಡ್ ಪೋಸ್ಟ್, ಪಾರ್ಸೆಲ್‌ಗಳನ್ನು ಬುಕ್ ಮಾಡಬಹುದಾಗಿದೆ. ಇದರಿಂದ ಕಚೇರಿ ಸಮಯದ ಅಂತ್ಯದಲ್ಲಿ ಅಂಚೆ ಕಚೇರಿಗೆ ಬರುವ ಗ್ರಾಹಕರಿಗೂ ತಮ್ಮ ಅಂಚೆ ವಸ್ತುಗಳನ್ನು ಸುಲಭವಾಗಿ ಬುಕ್ ಮಾಡುವ ಅವಕಾಶ ದೊರೆಯುತ್ತದೆ.
ಮನೆಯಲ್ಲಿಯೇ ಕುಳಿತು ಪತ್ರ, ಪಾರ್ಸೆಲ್‌ಗಳ ಬುಕ್ಕಿಂಗ್ ಸೌಲಭ್ಯ (ಅusಣomeಡಿ Seಟಜಿ Seಡಿviಛಿe Poಡಿಣಚಿಟ): ಸಾರ್ವಜನಿಕರ ಸೌಕರ್ಯಕ್ಕಾಗಿ ಭಾರತೀಯ ಅಂಚೆ ಇಲಾಖೆಯ ಗ್ರಾಹಕ ಸ್ವಯಂ ಸೇವಾ ಪೋರ್ಟಲ್ https://app.indiapost.gov.in/customer-selfservice/login) ಲಭ್ಯವಿದ್ದು, ಇದರ ಮೂಲಕ ಅಂಚೆ ವಸ್ತುಗಳ ಬುಕ್ಕಿಂಗ್, ಟ್ರ‍್ಯಾಕಿಂಗ್, ದೂರು ಸಲ್ಲಿಕೆ, ಸೇವೆಗಳ ವಿವರಗಳು ಹಾಗೂ ಇತರೆ ಅನೇಕ ಸೇವೆಗಳನ್ನು ಆನ್‌ಲೈನ್‌ನಲ್ಲೇ ಪಡೆಯಬಹುದು. ಸಾರ್ವಜನಿಕರು ಈ ಡಿಜಿಟಲ್ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬಹುದು.
ಡಾಕ್ ಸೇವಾ ಆಪ್: ಅಂಚೆ ಸೇವೆಗಳನ್ನು ಇನ್ನಷ್ಟು ಸುಲಭವಾಗಿ ಪಡೆಯುವ ಉದ್ದೇಶದಿಂದ ಭಾರತೀಯ ಅಂಚೆ ಇಲಾಖೆ ಡಾಕ್ ಸೇವಾ ಆಪ್ ಅನ್ನು ಬಿಡುಗಡೆ ಮಾಡಿದೆ. ಈ ಮೊಬೈಲ್ ಆಪ್ ಮೂಲಕ ಅಂಚೆ ವಸ್ತುಗಳ ಬುಕ್ಕಿಂಗ್, ಟ್ರ‍್ಯಾಕಿಂಗ್, ದೂರು ನೋಂದಣಿ, ಸೇವಾ ಮಾಹಿತಿ ಸೇರಿದಂತೆ ವಿವಿಧ ಗ್ರಾಹಕ ಸೇವೆಗಳು ಮೊಬೈಲ್‌ನಲ್ಲೇ ಲಭ್ಯವಿರುತ್ತವೆ.
ಸಾರ್ವಜನಿಕರು ಈ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಬಳಸಬಹುದು. ಡೌನ್‌ಲೋಡ್ ಮಾಡಲು ಅಗತ್ಯವಾದ ಕ್ಯೂಆರ್ ಕೋಡ್ ಭಾರತೀಯ ಅಂಚೆ ಇಲಾಖೆಯ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ತಮ್ಮ ಸಮೀಪದ ಇಲಾಖಾ ಅಂಚೆ ಕಚೇರಿಯನ್ನು ಸಂಪರ್ಕಿಸಬಹುದು ಎಂದು ರಾಯಚೂರು ಅಂಚೆ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

