ರಾಯಚೂರು ಫೆಬ್ರವರಿ 12 (ಕರ್ನಾಟಕ ವಾರ್ತೆ): ಪ್ರಸ್ತುತ ಸನ್ನಿವೇಶದಲ್ಲಿ ಬಹುತೇಕ ಎಲ್ಲ ವಲಯಗಳಲ್ಲಿ ಅಂತರ್ಜಾಲ ಬಳಕೆಯಾಗುತ್ತಿದೆ. ಸುರಕ್ಷಿತ ಮತ್ತು ಜವಾಬ್ದಾರಿಯುತ ಬಳಕೆಯ ಬಗ್ಗೆ ಪ್ರತಿಯೊಬ್ಬರು ಎಚ್ಚರ ವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳಾದ ಹಾಲಸಿದ್ದಪ್ಪ ಪೂಜಾರಿ ಅವರು ಹೇಳಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಮಾಹಿತಿ ತಂತ್ರಜ್ಞಾನ (ಎನ್‌ಐಸಿ) ರಾಯಚೂರು ಇವರ ಸಹಯೋಗದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ಸುರಕ್ಷಿತ ಅಂತರ್ಜಾಲ ದಿನ-2026ರ ಕಾರ್ಯಾಗಾರದಲ್ಲಿ ಸಸಿಗೆ ನೀರುಣಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಸೈಬರ್ ಸುರಕ್ಷತೆಯನ್ನು ತಮ್ಮ ದಿನನಿತ್ಯದ ಕಾರ್ಯಗಳಲ್ಲಿ ಅಳವಡಿಸಿಕೊಳ್ಳಬೇಕು. ಬ್ಯಾಂಕಿAಗ್, ಇ-ಆಫೀಸ್, ಆನ್‌ಲೈನ್ ತರಗತಿ, ಮೀಟಿಂಗ್‌ಗಳು ಹೀಗೆ ಎಲ್ಲೆಡೆ ಅಂತರ್ಜಾಲ ಬಳಕೆ ವ್ಯಾಪಕವಾಗಿದೆ. ಅದೇ ರೀತಿ ಸೈಬರ್ ಅಪರಾಧಗಳೂ ಹೆಚ್ಚುತ್ತಿವೆ ಎಂದರು.
ಅಕ್ಷರಸ್ಥರೇ ಹೆಚ್ಚಿನ ಸಂಖ್ಯೆಯಲ್ಲಿ ಸೈಬರ್ ಅಪರಾಧಗಳಲ್ಲಿ ಭಾಗಿಯಾಗುತ್ತಿದ್ದಾರೆ. ಸೈಬರ್ ವಂಚನೆಯ ಮೂಲಕ ಕೋಟಿಗಟ್ಟಲೆ ಹಣವನ್ನು ಖಾತೆಗಳಿಂದ ಕಬಳಿಸಲಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಸುರಕ್ಷಿತ ಅಂತರ್ಜಾಲ ಬಳಕೆ ಬಗ್ಗೆ ತಿಳಿದುಕೊಳ್ಳಬೇಕು. ವಂಚನೆಗೆ ಒಳಗಾದಲ್ಲಿ ತಕ್ಷಣ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ನೀಡಬೇಕು ಎಂದರು.
ಈ ವೇಳೆ ವೈರ್‌ಲೆಸ್ ಪಿಎಸ್‌ಐ ಮಹೇಶ ಅವರು ಮಾತನಾಡಿ, ಕಚೇರಿಗಳಲ್ಲಿ ಲಾಗಿನ್ ಮಾಹಿತಿಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು. ಬಳಕೆ ನಂತರ ಕಡ್ಡಾಯವಾಗಿ ಲಾಗ್‌ಔಟ್ ಮಾಡಬೇಕು. ಮಕ್ಕಳು, ಹದಿಹರೆಯದವರು ಕಲಿಕೆ, ಮನರಂಜನೆಗಾಗಿ ಇಂದು ಹೆಚ್ಚಾಗಿ ಅಂತರ್ಜಾಲ ಬಳಸುತ್ತಿದ್ದಾರೆ. ವಂಚಕರು ಮೊಬೈಲ್‌ಗೆ ಕರೆ ಮಾಡಿ ನೀವು ಕಳುಹಿಸಿದ ಕೋರಿಯರ್ ಪಾರ್ಸಲ್‌ಗಳಲ್ಲಿ ಮಾದಕ ವಸ್ತು, ನಕಲಿ ಪಾಸ್‌ಪೋರ್ಟ್ ಇದೆ. ನಿಮ್ಮ ವಿರುದ್ಧ ಬೇರೆ ರಾಜ್ಯಗಳಲ್ಲಿ ದೂರು ದಾಖಲಾಗಿದೆ ಎಂದು ಬೆದರಿಸಿ ಡಿಜಿಟಲ್ ಅರೆಸ್ಟ್ ಮಾಡಿ ತಮ್ಮ ಖಾತೆಗೆ ಹಣ ಹಾಕಿಸಿಕೊಳ್ಳುವ ವಂಚಕರಿದ್ದಾರೆ ಎಂದು ಎಚ್ಚರಿಸಿದರು.
ಇ-ಕೆವೈಸಿ ಅಪ್‌ಡೇಟ್ ಹೆಸರಿನಲ್ಲಿ ನೈಜ ಬ್ಯಾಂಕಿಂಗ್ ಅಪ್ಲಿಕೇಶನ್‌ಗಳಂತೆ ಕಾಣುವ ಎಪಿಕೆ ಫೈಲ್ ಕಳುಹಿಸಿ ವಂಚಿಸುವುದು, ನಕಲಿ ಹೂಡಿಕೆ ಅಪ್ಲಿಕೇಷನ್ ಬಳಸಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಆದಾಯ ನೀಡುವ ಭರವಸೆ ನೀಡಿ ವಂಚಿಸಲಾಗುತ್ತಿದೆ ಎಂದರು.
ಈ ವೇಳೆ ಎನ್‌ಐಸಿನ ಹಿರಿಯ ನಿರ್ದೇಶಕರು ಹಾಗೂ ಜಿಲ್ಲಾ ಸಂಯೋಜಕರಾದ ಟಿ.ಕೆ.ರಾಘವೇಂದ್ರ ಅವರು ಮಾತನಾಡಿ, ಚತುರ ತಂತ್ರಜ್ಞಾನ, ಸುರಕ್ಷಿತ ಆಯ್ಕೆಗಳು, ಎಐನ ಸುರಕ್ಷಿತ ಮತ್ತು ಜವಾಬ್ದಾರಿಯುತ ಬಳಕೆಯನ್ನು ಅನ್ವೇಷಿಸುವುದು ಎಂಬುದು ಈ ವರ್ಷದ ಸುರಕ್ಷಿತ ಅಂತರ್ಜಾಲ ಬಳಕೆ ದಿನದ ಘೋಷವಾಕ್ಯ. ಅಂತರ್ಜಾಲ ವಂಚನೆ ಕುರಿತು ಜಾಗೃತಿ ಮೂಡಿಸುವುದು ಹಾಗೂ ಸುರಕ್ಷಿತ ಅಂತರ್ಜಾಲ ಬಳಕೆ ಬಗ್ಗೆ ತಿಳಿವಳಿಕೆ ಮೂಡಿಸುವುದು ಈ ದಿನದ ಮುಖ್ಯ ಉದ್ದೇಶ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಡಾ.ವಿಜಯಶಂಕರ್, ಜಿಲ್ಲಾಧಿಕಾರಿಗಳ ಕಚೇರಿಯ ತಹಶೀಲ್ದಾರ್ ಜಗದ್ದೀಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಇದ್ದರು. ನರೇಗಾ ಜಿಲ್ಲಾ ಸಮನ್ವಯ ಅಧಿಕಾರಿ ಮಲ್ಲಮ್ಮ ನಿರೂಪಿಸಿದರು.
ಸಚಿವರಾದ ಎನ್.ಎಸ್.ಭೋಸರಾಜು ರಾಯಚೂರು ಜಿಲ್ಲಾ ಪ್ರವಾಸ
ರಾಯಚೂರು ಫೆಬ್ರವರಿ 12 (ಕರ್ನಾಟಕ ವಾರ್ತೆ): ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಹಾಗೂ ಕರ್ನಾಟಕ ವಿಧಾನ ಪರಿಷತ್ತು ಸಭಾ ನಾಯಕರಾದ ಎನ್.ಎಸ್.ಭೋಸರಾಜು ಅವರು ಫೆ.13ರಿಂದ ರಾಯಚೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ.
ಫೆ.13ರಂದು ಬೆಳಿಗ್ಗೆ 9 ಗಂಟೆಗೆ ರಾಯಚೂರಿನಿಂದ ನಿರ್ಗಮಿಸಿ ಸಿರವಾರ ತಾಲೂಕಿನ ಕವಿತಾಳ ಹಾಗೂ ಮಸ್ಕಿ ತಾಲೂಕಿನ ವಟಗಲ್ ಗ್ರಾಮಗಳಿಗೆ ತೆರಳಿ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗಿಯಾಗುವರು. ಬೆಳಿಗ್ಗೆ 11 ಗಂಟೆಗೆ ವಟಗಲ್‌ನಿಂದ ನಿರ್ಗಮಿಸಿ ಮಧ್ಯಾಹ್ನ 12 ಗಂಟೆಗೆ ಮಾನ್ವಿ ತಾಲೂಕಿನ ಪೋತ್ನಾಳ ಗ್ರಾಮಕ್ಕೆ ತೆರಳಿ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗಿಯಾಗುವರು. ಮಧ್ಯಾಹ್ನ 12.30ಕ್ಕೆ ಪೋತ್ನಾಳ ಗ್ರಾಮದಿಂದ ನಿರ್ಗಮಿಸಿ ಮಧ್ಯಾಹ್ನ 1 ಗಂಟೆಗೆ ನೀರಮಾನ್ವಿಗೆ ತೆರಳಿ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗಿಯಾಗುವರು. ಮಧ್ಯಾಹ್ನ 2 ಗಂಟೆಗೆ ನೀರಮಾನ್ವಿಯಿಂದ ನಿರ್ಗಮಿಸಿ ಮಧ್ಯಾಹ್ನ 3 ಗಂಟೆಗೆ ರಾಯಚೂರಿಗೆ ತೆರಳಿ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗಿಯಾಗಿ ರಾತ್ರಿ 9.40ಕ್ಕೆ ರೈಲಿನ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಸಚಿವರ ಆಪ್ತ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



