ರಾಯಚೂರು ಫೆಬ್ರವರಿ 12 (ಕರ್ನಾಟಕ ವಾರ್ತೆ): ರಾಯಚೂರು ತಾಲ್ಲೂಕಿನ ಚಿಕ್ಕಸೂಗೂರು ಗ್ರಾಮ ಪಂಚಾಯತಿಯ ವ್ಯಾಪ್ತಿಯ ಇಕೋ ಪಾರ್ಕ್ ಹಾಗೂ ಅಂಗನವಾಡಿ ಕೇಂದ್ರಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಈಶ್ವರ್ ಕುಮಾರ್ ಕಾಂದೂ ಅವರು ಫೆ.12ರಂದು ಭೇಟಿ ನೀಡಿ ಪರಿಶೀಲನೆ ಮಾಡಿದರು.
ಚಿಕ್ಕಸೂಗೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರಗತಿ ಹಂತದಲ್ಲಿರುವ ಇಕೋ ಪಾರ್ಕ್ಗೆ ಭೇಟಿ ನೀಡಿ ಕಾಮಗಾರಿಯನ್ನು ಶೀಘ್ರದಲ್ಲೇ ಗುಣಮಟ್ಟದೊಂದಿಗೆ ಪೂರ್ಣಗೊಳಿಸಲು ನಿರ್ಮಿತಿ ಕೇಂದ್ರದ ಜೆಇ ಸಂತೋಷ ಅವರಿಗೆ ಸೂಚನೆ ನೀಡಿದರು.
ನಂತರ ಪಾರ್ಕ್ನಲ್ಲಿರುವ ವೀರಗಲ್ಲುಗಳ ಮಾಹಿತಿ ಸಂಗ್ರಹಿಸುವುದು ಮತ್ತು ಒಂದೆಡೆ ಅವುಗಳನ್ನು ಸುವ್ಯವಸ್ಥಿತವಾಗಿ ಜೋಡಿಸಿ ಸುರಕ್ಷಿತವಾಗಿ ಸಂರಕ್ಷಣೆ ಮಾಡಲು ಸಂಬಂಧಿಸಿದ ಅಧಿಕಾರಿ ಸಿಬ್ಬಂದಿಗೆ ಸೂಚನೆ ನೀಡಿದರು.
ನಂತರ ಅಂಗನವಾಡಿ ಕೇಂದ್ರಕ್ಕೆ ತೆರಳಿದಾಗ ಕೇಂದ್ರವು ಮುಚ್ಚಿರುವುದನ್ನು ಕಂಡು ಸಿಇಓ ಅವರು ಅಸಮಾಧಾನ ವ್ಯಕ್ತಪಡಿಸಿದರು. ಇನ್ನು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು. ಅಂಗನವಾಡಿಗೆ ದಾಖಲಾಗುವ ಪ್ರತಿ ಮಗುವಿಗೂ ಪೂರ್ಣ ಪ್ರಮಾಣದಲ್ಲಿ ಪೌಷ್ಠಿಕ ಆಹಾರ ಸಿಗುವಂತಾಗಬೇಕು. ಪ್ರತಿದಿನವೂ ಮಕ್ಕಳ ಹಾಜರಾತಿಯನ್ನು ಪರಿಶೀಲಿಸಬೇಕು. ಹಾಜರಾತಿಯ ಪ್ರಮಾಣ ಹೆಚ್ಚಳದ ಬಗ್ಗೆ ಗಮನ ಕೊಡಬೇಕು ಎಂದು ಕಾರ್ಯಕರ್ತೆಯರಿಗೆ ಸಿಇಓ ಅವರು ಸೂಚನೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ನಡೆಸುತ್ತಿರುವ ಅಂಗನವಾಡಿ ಕೇಂದ್ರಗಳು ಗ್ರಾಮೀಣ ಮತ್ತು ಅವಕಾಶ ವಂಚಿತ ಮಕ್ಕಳ ಶೈಕ್ಷಣಿಕ ಬುನಾದಿಯ ಕೇಂದ್ರಗಳು. ಇಲ್ಲಿ ಮಕ್ಕಳಿಗೆ ನೀಡುವ ಆರೈಕೆ, ಶಿಕ್ಷಣ ಮತ್ತು ಆಹಾರ ಎಲ್ಲವೂ ಮುಖ್ಯವಾಗುತ್ತದೆ. ಪ್ರತಿ ಅಂಗನವಾಡಿ ಕೇಂದ್ರವು ಮಾದರಿಯಾಗಿ ಕಾರ್ಯ ನಿರ್ವಹಿಸುವ ಹಾಗೆ ಅಂಗನವಾಡಿ ಕೇಂದ್ರಗಳ ಬಲವರ್ಧನೆಗೆ ಒತ್ತು ಕೊಡಬೇಕು ಎಂದು ಸಿಇಓ ಅವರು ಇದೆ ವೇಳೆ ಹಾಜರಿದ್ದ ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ರಾಯಚೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಪವಾರ್, ಸಹಾಯಕ ನಿರ್ದೇಶಕ ಶಿವಪ್ಪ, ಚಿಕ್ಕಸುಗೂರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸರೋಜಮ್ಮ, ನಿರ್ಮಿತ ಕೇಂದ್ರ ಸಹಾಯಕ ಅಭಿಯಂತರ ಸಂತೋಷ ಸೇರಿದಂತೆ ಇತರರು ಇದ್ದರು.

