ರಾಯಚೂರು ಫೆಬ್ರವರಿ 11 (ಕರ್ನಾಟಕ ವಾರ್ತೆ): ಜೀತ ಪದ್ಧತಿಯು ದೊಡ್ಡದಾದ ಸಾಮಾಜಿಕ ಪಿಡುಗಾಗಿದ್ದು, ಇದರ ನಿರ್ಮೂಲನೆಗಾಗಿ ಎಲ್ಲರು ಕೈಜೋಡಿಸಬೇಕೆಂದು ಗೌರವಾನ್ವಿತ ಹಿರಿಯ ಶ್ರೇಣಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಹೆಚ್.ಎ.ಸಾತ್ವಿಕ್ ಅವರು ಹೇಳಿದರು.
ಫೆ.10ರ ಮಂಗಳವಾರ ದಂದು ತಾಲೂಕಿನ ಚಂದ್ರಬಂಡ ರಸ್ತೆಯ ಕಡ್ಗಂದೊಡ್ಡಿ ವ್ಯಾಪ್ತಿಯ ವಿ.ಬಿ.ಎಸ್ ಇಟ್ಟಿಗೆ ಭಟ್ಟಿಯಲ್ಲಿ ಜೀತ ಪದ್ಧತಿ ನಿರ್ಮೂಲನೆ ದಿನಾಚರಣೆ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮಕ್ಕೆ ಸಸಿಗೆ ನೀರು ಎರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಜೀತ ಪದ್ಧತಿಗೆ ಬಡತನವೇ ಮೂಲ ಕಾರಣವಾಗಿದೆ. ಕಾರ್ಮಿಕರಿಗಾಗಿಯೇ ಇರುವ ಕಾಯ್ದೆ ಕಾನೂನುಗಳನ್ನು ಅರಿಯುವುದು ಅತ್ಯಂತ ಮಹತ್ವವಾಗಿದ್ದು, ಕಾರ್ಮಿಕರಿಗಾಗಿಯೇ ಲಭ್ಯವಿರುವ ಉಚಿತ ಕಾನೂನು ಸಲಹೆ ಮತ್ತು ಸೇವೆಗಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಂಪರ್ಕಿಸಬೇಕು. ಹಾಗೂ ತೊಂದರೆಯಾದಲ್ಲಿ ಸಹಾಯವಾಣಿ ಸಂಖ್ಯೆ 15100ಗೆ ಕರೆ ಮಾಡಿ ಕಾನೂನು ಸೇವೆಗಳನ್ನು ಪಡೆದುಕೊಳ್ಳಬಹುದು ಎಂದರು.
ಕಾರ್ಮಿಕ ಇಲಾಖೆಯ ಜಿಲ್ಲಾ ಅಧಿಕಾರಿ ಆರತಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾರಾದರೂ ಎಲ್ಲಿಯಾದರೂ ಉದ್ಯೋಗ ಅವಕಾಶ ಪಡೆಯಲು ನಮಗೆ ಸಂವಿಧಾನಬದ್ಧ ಹಕ್ಕು ಇರುತ್ತದೆ. ಕೆಲಸ ಅರಸಿ ಬರುವ ಪ್ರತಿಯೊಬ್ಬರಿಗೂ ಉತ್ತಮ ಜೀವನ ಕಲ್ಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಓಡಿಸ್ಸಾ, ಬಿಹಾರ, ಆಂಧ್ರ, ಮಹಾರಾಷ್ಟç ಮತ್ತು ಇತರೆ ಹೊರ ರಾಜ್ಯಗಳಿಂದ ವಲಸೆ ಕಾರ್ಮಿಕರು ವಲಸೆ ಬಂದು ಇಟ್ಟಿಗೆ ಭಟ್ಟಿಗಳಲ್ಲಿ, ಬೀದಿ ಬದಿಯಲ್ಲಿ, ಕಟ್ಟಡ ಮತ್ತು ಇತರೆ ನಿರ್ಮಾಣ ಕೆಲಸಗಳಲ್ಲಿ ಹತ್ತಿ ಮಿಲ್, ರೈಸ್ ಮಿಲ್ ಕೆಲಸದಲ್ಲಿ ತೊಡಗಿಸಿಕೊಂಡಿರುವುದು ಕಂಡುಬರುತ್ತಿದೆ. ಈ ಜನೆತೆಗೆ ಕಾನೂನಾತ್ಮಕ ಹಕ್ಕುಗಳು ಹಾಗೂ ಸೌಲಭ್ಯಗಳನ್ನು ಪಡೆಯುವಂತೆ ಸಲಹೆ ನೀಡಿ, ಮಾಲೀಕರಿಗೆ ಕಾರ್ಮಿಕರನ್ನು ಜೀತಪದ್ಧತಿಯಲ್ಲಿ ತೊಡಗಿಸಿಕೊಳ್ಳದಂತೆ ಹಾಗೂ ಮಕ್ಕಳನ್ನು ಬಾಲ ಹಾಗೂ ಕಿಶೋರ ಕಾರ್ಮಿಕರನ್ನಾಗಿಸದೇ ಹತ್ತಿರದ ಅಂಗನವಾಡಿ ಮತ್ತು ಶಾಲೆಗೆ ಸೇರಿಸಿ ಕಡ್ಡಾಯವಾಗಿ ಶಿಕ್ಷಣವನ್ನು ನೀಡುವಂತೆ ಸೂಚಿಸಿದರು.
ಈ ವೇಳೆ ರಾಯಚೂರು 1 ಹಾಗೂ 2ನೇ ಕಾರ್ಮಿಕ ವೃತ್ತ ನಿರೀಕ್ಷಕರಾದ ಕುಮಾರಿ ಪ್ರಿಯಾಂಕ ಅವರು ಮಾತನಾಡಿ, ಜೀತ ಪದ್ಧತಿ ನಿರ್ಮೂಲನೆಗಾಗಿ 1976ರಲ್ಲಿ ಕಾಯ್ದೆ ಜಾರಿ ಬಂದಿರುವ ಕುರಿತು ಜೀತ ಪದ್ಧತಿ ನಿರ್ಮೂಲನೆ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ರಿಯಾಜ್ ಪಟೇಲ್ ವರ್ಕನಳ್ಳಿ, ಇಟ್ಟಿಗೆ ಭಟ್ಟಿ ಮಾಲೀಕರಾದ ಈರಣ್ಣ ಸೇರಿದಂತೆ ಕಾರ್ಮಿಕ ಇಲಾಖೆಯ ಸಿಬ್ಬಂದಿ ಹಾಗೂ ಸ್ಥಳೀಯ ವಿವಿಧ ಇಟ್ಟಿಗೆ ಭಟ್ಟಿಗೆಗಳ ಮಾಲೀಕರು ಮತ್ತು ಕಾರ್ಮಿಕರು ಇದ್ದರು.



