ರಾಯಚೂರು ಫೆಬ್ರವರಿ 11 (ಕರ್ನಾಟಕ ವಾರ್ತೆ): ಕಂದಾಯ ಇಲಾಖೆಯಲ್ಲಿ ಅನೇಕ ಸುಧಾರಣೆಗಳನ್ನು ತರಲಾಗಿದ್ದು, ಇಲಾಖೆಯಲ್ಲಿನ ಸಾರ್ವಜನಿಕ ಸ್ನೇಹಿ ಎಲ್ಲ ಕಾರ್ಯಕ್ರಮಗಳ ಸರಿಯಾದ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ಕೊಡಬೇಕು ಎಂದು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಜಹೀರಾ ನಸೀಮ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಫೆ.11ರಂದು ನಡೆದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಂದಾಯ ಇಲಾಖೆಯಲ್ಲಿ ಮೊದಗಿಲಿಗಿಂತ ಅತೀ ಹೆಚ್ಚು ಬದಲಾವಣೆಯಾಗಿದೆ. ಮಹತ್ವದ ಎಲ್ಲ ಕಡತಗಳನ್ನು ಡಿಜಿಟಲ್ ವ್ಯವಸ್ಥೆಗೆ ಮಾರ್ಪಡಿಸಲಾಗುತ್ತಿದೆ. ಇದರಿಂದಾಗಿ ಸಾರ್ವಜನಿಕರಿಗೆ ಪ್ರತಿಯೊಂದು ಮಾಹಿತಿಯು ಕ್ಷಣಾರ್ಧದಲ್ಲಿ ದೊರೆಯುವಂತಾಗಿದೆ. ಅದರಂತೆ ಕಂದಾಯ ಇಲಾಖೆಯ ಯೋಜನೆಗಳು, ಕಾರ್ಯಕ್ರಮಗಳ ಕುರಿತು ಮಾಹಿತಿಯನ್ನು ಕಂದಾಯ ಇಲಾಖೆಯ ಕಚೇರಿಗಳಲ್ಲಿ ಪ್ರದರ್ಶನ ಮಾಡಬೇಕು. ಮೃತರ ಹೆಸರಲ್ಲಿರುವ ಜಮೀನುಗಳನ್ನು ವಾರಸುದಾರರಿಗೆ ನೋಂದಣಿ ಮಾಡಿಕೊಡಲು ಕಂದಾಯ ಇಲಾಖೆಯಿಂದ ರೈತರ ಮನೆ ಬಾಗಿಲಿಗೇ ಇ-ಪೌತಿ ಆಂದೋಲನದಡಿ ಜಿಲ್ಲೆಯಲ್ಲಿ ಬಾಕಿ ಇರುವ ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ಈ ಬಗ್ಗೆ ಪ್ರತಿಯೊಂದು ಗ್ರಾಮಗಳಲ್ಲಿ ಮಾಹಿತಿ ನೀಡಿ ಜಾಗೃತಿ ಮೂಡಿಸಬೇಕು ಎಂದು ಅವರು ಸೂಚನೆ ನೀಡಿದರು.
ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ದಾಖಲಾದ ಅರೆ ನ್ಯಾಯಿಕ ಪ್ರಕರಣಗಳನ್ನು ಬೇಗನೇ ಇತ್ಯರ್ಥಪಡಿಸಬೇಕು. ಕಂದಾಯ ದಾಖಲೆಗಳ ಡಿಜಿಟಲೀಕರಣಕ್ಕಾಗಿ ಜಿಲ್ಲೆಯಲ್ಲಿ ಈಗಾಗಲೇ ಲಕ್ಷಕ್ಕೂ ಹೆಚ್ಚು ಫೈಲುಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಲಾಗಿದೆ. ಈ ಕಾರ್ಯ ಇನ್ನಷ್ಟು ವೇಗವಾಗಬೇಕು ಎಂದು ಅವರು ನಿರ್ದೇಶನ ನೀಡಿದರು.
ಆಯಾ ತಾಲೂಕುಗಳ ತಹಶೀಲ್ದಾರರು ಸಾರ್ವಜನಿಕರ ದಾಖಲೆಗಳನ್ನು ಸಂರಕ್ಷಿಸುವಲ್ಲಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಸಾರ್ವಜನಿಕರ ಎಲ್ಲಾ ದಾಖಲೆಗಳನ್ನು ಡಿಜಿಟಲೀಕರಣ ಮಾಡುವುದು ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿದ್ದು, ಇದರಿಂದ ಕುಳಿತಲ್ಲಿಯೇ ಬೆರಳ ತುದಿಯಲ್ಲಿ ಸಾರ್ವಜನಿಕರ ಆಕಾರ ಬಂದಿ, ಮ್ಯೂಟೇಷನ್, ಪಹಣಿ ಸೇರಿದಂತೆ ಎಲ್ಲವನ್ನೂ ಪಡೆಯಬಹುದಾಗಿದೆ. ಆದ್ದರಿಂದ ಜನರ ದಾಖಲೆಗಳ ಸಂರಕ್ಷಣೆಗೆ ಅಧಿಕಾರಿಗಳು ಹೆಚ್ಚಿನ ಒತ್ತು ಕೊಡಬೇಕು ಎಂದು ತಿಳಿಸಿದರು.
ರೆಕಾರ್ಡ್ ರೂಮ್‌ಗಳ ನಿರ್ವಹಣೆ ಸರಿಯಾಗಿ ಇರಬೇಕು. ಅನುಪಯುಕ್ತ ಮತ್ತು ಅನಗತ್ಯ ವಸ್ತುಗಳನ್ನು ಬೇಗನೇ ವಿಲೇ ಮಾಡಬೇಕು. ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಹಾಗೂ ಸೂಕ್ಷ್ಮವಾಗಿ ನಿರ್ವಹಣೆ ಮಾಡುವ ಜವಾಬ್ದಾರಿ ಪ್ರತಿಯೊಬ್ಬ ಅಧಿಕಾರಿ ಮೇಲಿದೆ. ಯಾವ ಯಾವ ದಾಖಲೆಗಳಿಗೆ ಯಾವ ಯಾವ ಬಣ್ಣ ಬಳಸಬೇಕೆಂದು ಸರ್ಕಾರದಿಂದ ಇರುವ ಮಾರ್ಗಸೂಚಿ ಪಾಲನೆಯಾಗಬೇಕು ಎಂದು ಸೂಚನೆ ನೀಡಿದರು.
ಈ ವೇಳೆ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು, ರಾಯಚೂರು ಜಿಲ್ಲೆಯ ಕಂದಾಯ ಇಲಾಖೆಯ ವಿವಿಧ ನ್ಯಾಯಾಲಯಗಳಲ್ಲಿ ದಾಖಲಾದ ಅರೇ ನ್ಯಾಯಿಕ ಪ್ರಕರಣಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಸಹಾಯಕ ಆಯುಕ್ತರಾದ ಡಾ.ಹಂಪಣ್ಣ ಸಜ್ಜನ್, ಬಸವಣೆಪ್ಪ ಕಲಶೆಟ್ಟಿ, ಜಿಲ್ಲಾಧಿಕಾರಿ ಕಚೇರಿಯ ತಹಶೀಲ್ದಾರ್ ಜಗದೀಶ್, ಜಿಲ್ಲೆಯ ವಿವಿಧ ತಾಲೂಕು ತಹಶೀಲ್ದಾರರು, ಶಿರಸ್ತೇದಾರರು, ಉಪ ತಹಶೀಲ್ದಾರರು ಸೇರಿದಂತೆ ಹಾಗೂ ಕಂದಾಯ ಮತ್ತು ಭೂಮಾಪನಾ ಇಲಾಖೆಯ ಅಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *