ರಾಯಚೂರು : ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ಅಂಗವಾಗಿ ಪ್ರಾರಂಭಿಸಿರುವ ಹೆಲಿಕಾಪ್ಟರ್ ರೈಡ್‌ಗೆ ಒಂದು ವಾರ ಆಗಿದೆ. ತಂದೆ-ತಾಯಿ, ಹೆಂಡತಿ-ಮಕ್ಕಳು ಹಾಗೂ ಗೆಳತಿಯರನ್ನು ಹೆಲಿಕಾಪ್ಟರ್‌ನಲ್ಲಿ ಕೂರಿಸಿ ಖುಷಿ ಹಂಚಿಕೊಳ್ಳುವುದು ಮುಂದುವರಿದಿದೆ.ಕೆಲ ಮೊಮ್ಮಕ್ಕಳು ತಮ್ಮ ಅಜ್ಜ-ಅಜ್ಜಿಯರನ್ನೂ ಹೆಲಿಕಾಪ್ಟರ್‌ನಲ್ಲಿ ಕೂರಿಸಿ ಹಿರಿಯ ಜೀವಿಗಳ ಖುಷಿ ಹೆಚ್ಚಿಸಿದ್ದಾರೆ.ಹೆಲಿಕಾಪ್ಟರ್‌ನಲ್ಲಿ ಸಂಚರಿಸಿ ನೆಲದ ಮೇಲೆ ಬಂದಿಳಿದ ತಕ್ಷಣ ಎಲ್ಲರೂ ಗುಂಪು ಫೋಟೊಗಳನ್ನು ತೆಗೆಸಿಕೊಂಡು ತಮ್ಮ ಬಂಧುಗಳು ಹಾಗೂ ಆಪ್ತ ವಲಯದವರಿಗೆ ಕಳುಹಿಸಿ ಸಂತಸ ಹಂಚಿಕೊಳ್ಳುತ್ತಿದ್ದಾರೆ.

ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ಪ್ರಯುಕ್ತ ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಫೆಬ್ರುವರಿ 4ರಿಂದ ಹೆಲಿಕಾಪ್ಟರ್ ರೈಡ್ ಆರಂಭವಾಗಿದೆ. ಮೊದಲ ದಿನದಿಂದಲೂ ಉತ್ತಮ ಸ್ಪಂದನೆ ದೊರೆಯುತ್ತಿದೆ. ಫೆಬ್ರುವರಿ 2ರಂದು ಆನ್‌ಲೈನ್‌ನಲ್ಲಿ ಬುಕ್‌ ಮಾಡಿರುವ ಗ್ರಾಹಕರು ಸೋಮವಾರ ಪ್ರಯಾಣ ಮಾಡಿದರು.

ಜಿಲ್ಲಾ ಕ್ರೀಡಾಂಗಣದಲ್ಲಿ ಟಿಕೆಟ್ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಜನ ಕುಟುಂಬದ ಸದಸ್ಯರೊಂದಿಗೆ ತಂಡೋಪ ತಂಡವಾಗಿ ಇಲ್ಲಿಗೆ ಬಂದು ಬುಕ್‌ ಮಾಡುತ್ತಿದ್ದಾರೆ. ಬುಕ್ಕಿಂಗ್‌ ಕೌಂಟರ್‌ನಲ್ಲಿ ಭಾರಿ ಜನ ದಟ್ಟಣೆ ಇದೆ. ಹೀಗಾಗಿ ಬಂದೋಬಸ್ತ್‌ಗೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಮೊದಲ ದಿನವೇ ಬುಕ್‌ ಮಾಡಿ ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿ‌ವೀರ ಶಿವಾಚಾರ್ಯ ಸ್ವಾಮೀಜಿ ಹಾಗೂ ಕಿಲ್ಲೆ ಬೃಹನ್ಮಠದ ಶಾಂತಮಲ್ಲಾ ಶಿವಾಚಾರ್ಯ ಸ್ವಾಮೀಜಿ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಿದ್ದಾರೆ. ದಾನಿಗಳ ನೆರವಿನಿಂದ ಫಾದರ್ ಯುವರಾಜ, ಜಾಮಿಯಾ ಮಸೀದಿಯ ಇಮಾಂ ಮಹಮ್ಮದ್ ಹಾಫಿಜ್‌ ಮೊಹಮ್ಮದ್ ಅನ್ವರಿ, ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಬಿ.ಕೆ.ಸ್ಮಿತಾ ಅವರು ಸಹ ಹೆಲಿಕಾಪ್ಟರ್‌ನಲ್ಲಿ ಸಂಚರಿಸಿದ್ದಾರೆ.

ರಾಯಚೂರು ಜಿಲ್ಲೆ ಹಿಂದುಳಿದಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕಾರಣ ಸ್ವಾತಂತ್ರ್ಯ ಬಂದು 77 ವರ್ಷಗಳ ನಂತರ ನಗರ ಹೊರವಲಯದಲ್ಲಿ ವಿಮಾನ ನಿಲ್ದಾಣ ಸಿದ್ಧವಾಗುತ್ತಿದೆ. ಅದು ಪೂರ್ಣಗೊಳ್ಳಲು ಕನಿಷ್ಠ ಎರಡು ವರ್ಷಗಳಾದರೂ ಬೇಕು. ಬಿಸಿಲೂರಿನ ಜನ ಇತ್ತೀಚಿನ ವರ್ಷಗಳಲ್ಲಿ ಹೆಲಿಕಾಪ್ಟರ್‌ಗಳನ್ನು ತಮ್ಮೂರಲ್ಲಿ ನೋಡುತ್ತಿದ್ದಾರೆ. ಹೀಗಾಗಿ ಅದರಲ್ಲಿ ಪ್ರಯಾಣಿಸುವ ಇಚ್ಚೆ ಹೊಂದಿದ್ದರು. ಜಿಲ್ಲಾಡಳಿತ ಅಂಥವರಿಗೆ ಅವಕಾಶ ಮಾಡಿಕೊಟ್ಟಿದೆ.

ಮಕ್ಕಳು ಹಾಗೂ ಜನ ಸಾಮಾನ್ಯರು ಕ್ರೀಡಾಂಗಣದ ಸುತ್ತ ಭಾರಿ ಸಂಖ್ಯೆಯಲ್ಲಿ ನೆರೆದು ಹೆಲಿಕಾಪ್ಟರ್‌ ಹಾರಾಡುವುದನ್ನು ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ.

‘ಹೆಲಿಕಾಪ್ಟರ್‌ ರೈಡಿಂಗ್‌ಗೆ ಜಿಲ್ಲೆಯ ಜನರಿಂದ ಉತ್ತಮ ಸ್ಪಂದನೆ ದೊರೆತಿದೆ. ಹೆಚ್ಚುತ್ತಿರುವ ಗ್ರಾಹಕರ ಸಂಖ್ಯೆಯನ್ನು ಗಮನಿಸಿ ಇನ್ನೊಂದೆರಡು ದಿನ ವಿಸ್ತರಿಸುವ ಕುರಿತು ಚಂತನೆ ನಡೆದಿದೆ’ ಎನ್ನುತ್ತಾರೆ ಜಿಲ್ಲಾಧಿಕಾರಿ ನಿತೀಶ್‌.

‘ಹೆಲಿಕಾಪ್ಟರ್‌ ರೈಡಿಂಗ್‌ಗೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ಬೆಳಿಗ್ಗೆ 9ಗಂಟೆಯಿಂದ ಸಂಜೆಯವರೆಗೂ ಜನ ಹೆಲಿಕಾಪ್ಟರ್‌ನಲ್ಲಿ ಸಂಚರಿಸಿ ಸಂಭ್ರಮಿಸಿದ್ದಾರೆ’ ಎಂದು ರಾಯವೂರು ಅವರು ಹೇಳಿದರು.

Leave a Reply

Your email address will not be published. Required fields are marked *