ಮಾನ್ವಿ : ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ಜಾತ್ರೆಗಳು ಜನರಲ್ಲಿ ಸಾಮಾಜಿಕ ಸಾಮರಸ್ಯ ಹಾಗೂ ಧಾರ್ಮಿಕ ಭಕ್ತಿಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ನೀಲಗಲ್ ಬೃಹನ್ಮಠದ ಡಾ. ಪಂಚಾಕ್ಷರಿ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು. ಮಂಗಳವಾರ ಪಟ್ಟಣದ ಕಲ್ಮಠದ ಧ್ಯಾನ ಮಂದಿರದಲ್ಲಿ ಗಾರಿಗೆ ಜಾತ್ರೆಯ ಅಂಗವಾಗಿ ಧರ್ಮ ಧ್ವಜಾರೋಹಣ ನೆರವೇರಿಸಿ ಜಾತ್ರೆಗೆ ಚಾಲನೆ ನೀಡಿ ಆಶೀರ್ವಚನ ನೀಡಿದ ಅವರು, ಜಾತ್ರೆಗಳು ಕೇವಲ ಆಚರಣೆಗಳಲ್ಲ, ಸಮಾಜವನ್ನು ಒಗ್ಗೂಡಿಸುವ ಸಾಂಸ್ಕೃತಿಕ ಶಕ್ತಿಕೇಂದ್ರಗಳಾಗಿವೆ ಎಂದು ಅಭಿಪ್ರಾಯಪಟ್ಟರು.
ಕಲ್ಮಠದ ಹಿರಿಯ ಪೂಜ್ಯರಾಗಿದ್ದ ಲಿಂ. ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಗಾರಿಗೆ ಜಾತ್ರೆಯ ಪರಿಕಲ್ಪನೆಯ ರೂವಾರಿಗಳಾಗಿದ್ದು, ಸುಮಾರು ಹನ್ನೆರಡು ವರ್ಷಗಳ ಹಿಂದೆ ಆರಂಭಿಸಿದ ಈ ಜಾತ್ರೆ ಇಂದು ಐದು ದಿನಗಳ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ವಿಶಿಷ್ಟ ಸ್ಥಾನ ಪಡೆದುಕೊಂಡಿದೆ. ಇಂದಿನಿಂದ ಆರಂಭವಾದ ಜಾತ್ರೆಯಲ್ಲಿ ಪ್ರಭುಲಿಂಗ ಲೀಲೆ ಪ್ರವಚನ, ಕೃಷಿಮೇಳ, ಮಹಿಳಾ ದೇಶಿ ಕ್ರೀಡಾ ಸ್ಪರ್ಧೆಗಳು, ಸಾಮೂಹಿಕ ವಿವಾಹ, ಸಾಂಸ್ಕೃತಿಕ ಸ್ಪರ್ಧೆಗಳು ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳು ನಡೆಯಲಿರುವುದು ನಮಗೆಲ್ಲ ಸಂತಸ ತಂದಿದೆ ಎಂದು ಅವರು ಹೇಳಿದರು.
ಮಹಾಶಿವರಾತ್ರಿ ದಿನದಂದು ಲಿಂ. ವಿರೂಪಾಕ್ಷ ಶ್ರೀಗಳ ಉತ್ಸವ ಮೂರ್ತಿಯ ಮೆರವಣಿಗೆಯೊಂದಿಗೆ ರಥೋತ್ಸವ ಭವ್ಯವಾಗಿ ಜರುಗಲಿದ್ದು, ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಲಿ ಎಂದು ನೀಲಗಲ್ ಶ್ರೀಗಳು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕಲ್ಮಠದ ಪೀಠಾಧ್ಯಕ್ಷರಾದ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಧರ್ಮ ಧ್ವಜಾರೋಹಣ ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯ ವಹಿಸಿದ್ದರು. ಕಲ್ಮಠದ ಅನೇಕ ಸದ್ಭಕ್ತರು ಹಾಗೂ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಿಕ್ಷಕ ಶಾಂತಸ್ವಾಮಿ ಹಿರೇಮಠ ಕೋಟ್ನೆಕಲ್ ಕಾರ್ಯಕ್ರಮ ನಿರೂಪಿಸಿದರು.

