ಮಾನ್ವಿ : ಪಟ್ಟಣದ ಕಲ್ಮಠ ವತಿಯಿಂದ ಮಹಾಶಿವರಾತ್ರಿ ಅಂಗವಾಗಿ ಧ್ಯಾನ ಮಂದಿರದ ಆವರಣದಲ್ಲಿ ನಡೆಯುವ ಗಾರಿಗೆ ಜಾತ್ರಾ ಮಹೋತ್ಸವ ಕಾರ್ಯಕ್ರಮಕ್ಕೆ ಇಂದು ಬೆಳಿಗ್ಗೆ 8.30ಕ್ಕೆ ಬೃಹನ್ಮಠ ನೀಲಗಲ್‌ನ ಡಾ. ಪಂಚಾಕ್ಷರಿ ಶಿವಾಚಾರ್ಯ ಮಹಾಸ್ವಾಮಿಗಳು ಧರ್ಮ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಲಿದ್ದಾರೆ ಎಂದು ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಧಾರ್ಮಿಕ ಆಚರಣೆಗಳ ಮೂಲಕ ಸಮಾಜದಲ್ಲಿ ಶಾಂತಿ, ಸದಾಚಾರ ಹಾಗೂ ಭಕ್ತಿ ಚೇತನೆಯನ್ನು ವೃದ್ಧಿಸಬೇಕೆಂಬ ಉದ್ದೇಶದಿಂದ ಈ ಜಾತ್ರೆಯನ್ನು ಆಯೋಜಿಸಲಾಗಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆಶೀರ್ವಾದ ಪಡೆಯಬೇಕೆಂದು ಅವರು ಕೋರಿದ್ದಾರೆ.

ಇಂದಿನಿಂದ ಫೆ 14ರವರೆಗೆ ಪ್ರತಿದಿನ ಸಂಜೆ 6.30ರಿಂದ ಶ್ರೀ ರುದ್ರಯ್ಯಸ್ವಾಮಿ ಮದ್ಲಾಪುರ ಅವರಿಂದ ಪ್ರಭುಲಿಂಗ ಲೀಲೆ ಪ್ರವಚನ ನಡೆಯಲಿದ್ದು, ರಾತ್ರಿ 8 ಗಂಟೆಯಿಂದ ತಾಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಫೆ.11ರಂದು ದಿ. ಮಂಜುಳಾ ಸಂಗಮೇಶ ಕಾಯಣ್ಣೋರ್ ಅವರ ಸ್ಮರಣಾರ್ಥ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ದತ್ತಿ ಬಹುಮಾನ ವಿತರಣ ಕಾರ್ಯಕ್ರಮ ನಡೆಯಲಿದೆ. ಫೆ.12ರಂದು ಬೆಳಿಗ್ಗೆ 10.30ರಿಂದ ಜಿಲ್ಲಾ ಮಟ್ಟದ ರೈತ ಸಮಾವೇಶ ಹಾಗೂ ಉಪನ್ಯಾಸ ಕಾರ್ಯಕ್ರಮ, ಕೃಷಿ ವಸ್ತು ಪ್ರದರ್ಶನ, ಪ್ರಗತಿ ಪರ ರೈತರಿಗೆ ಸನ್ಮಾನ ಮತ್ತು ಉಚಿತ ಆರೋಗ್ಯ ತಪಾಸಣ ಶಿಬಿರ ಏರ್ಪಡಿಸಲಾಗಿದೆ. ಫೆ.13ರಂದು ಬೆಳಿಗ್ಗೆ ಮಹಿಳಾ ದೇಶಿ ಕ್ರೀಡಾ ಸ್ಪರ್ಧೆಗಳು ನಡೆಯಲಿವೆ. ಫೆ.14ರಂದು ಸಂಜೆ 6.30ಕ್ಕೆ ಪ್ರಭುಲಿಂಗ ಲೀಲೆ ಪ್ರವಚನ ಸಮಾರೋಪ ಸಮಾರಂಭ ಜರುಗಲಿದ್ದು, ಬಳ್ಳಾರಿಯ ಚಿಂತಕರಾದ ಅನುರಾಧ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ 2024–25ನೇ ಸಾಲಿನ ರಾಜ್ಯ ಮಟ್ಟದ ಸದ್ಗುರು ಶ್ರೀ ವಿರೂಪಾಕ್ಷೇಶ್ವರ ಕೃಪಾ ಭೂಷಣ ಪ್ರಶಸ್ತಿಯನ್ನು ಸಿಂಧನೂರಿನ ಕಾರುಣ್ಯಾಶ್ರಮಕ್ಕೆ ನೀಡಲಾಗುತ್ತಿದ್ದು, ನಗದು ಪುರಸ್ಕಾರ ಹಾಗೂ ಗೌರವ ಸನ್ಮಾನ ನಡೆಯಲಿದೆ.
ಫೆ.15ರಂದು ಮಹಾಶಿವರಾತ್ರಿ ಅಂಗವಾಗಿ ಧ್ಯಾನ ಮಂದಿರದಲ್ಲಿನ ಕೋಟಿಲಿಂಗಗಳಿಗೆ ವಿಶೇಷ ಅಭಿಷೇಕ, ಮಹಾಮಂಗಳಾರತಿ ಮತ್ತು ಬಿಲ್ವಾರ್ಚನೆ ನಡೆಯಲಿದ್ದು, ಗಾರಿಗೆ ವಿಶೇಷ ನೈವೇದ್ಯ ಸಮರ್ಪಣೆ ಮಾಡಲಾಗುತ್ತದೆ. ಬೆಳಿಗ್ಗೆ 9.30ಕ್ಕೆ ಸಾಮೂಹಿಕ ವಿವಾಹಗಳು ಜರುಗಲಿವೆ. ಸಂಜೆ 4.30ರಿಂದ ಶ್ರೀ ಕಲ್ಮಠದಿಂದ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಲಿಂ. ಶ್ರೀ ಗುರು ವಿರೂಪಾಕ್ಷೇಶ್ವರ ಪಲ್ಲಕ್ಕಿ ಉತ್ಸವ ಧ್ಯಾನ ಮಂದಿರದವರೆಗೆ ನಡೆಯಲಿದೆ. ಸಂಜೆ 6.30ಕ್ಕೆ ಸುಮಂಗಲಿಯರಿಂದ ರಥೋತ್ಸವ ನಡೆಯಲಿದ್ದು, ಲಿಂಗಸೂಗುರು ತಹಶೀಲ್ದಾರ್ ಸತ್ಯಮ್ಮ ಗಿಣಿವಾರ ಚಾಲನೆ ನೀಡಲಿದ್ದಾರೆ. ನಂತರ ಜಿಲ್ಲಾ ಮಟ್ಟದ ನೃತ್ಯ ಸ್ಪರ್ಧೆ ‘ನಾಟ್ಯ ವೈಭವ’ ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರತಿಭಾವಂತ ಕಲಾವಿದರಿಂದ ನೃತ್ಯ ಪ್ರದರ್ಶನ ಹಾಗೂ ಗಬ್ಬೂರಿನ ಹಾಸ್ಯ ಕಲಾವಿದ ದೇವರಾಜ ಎಲಿ ಅವರಿಂದ ಹಾಸ್ಯ ಕಾರ್ಯಕ್ರಮ ನಡೆಯಲಿದೆ. ರಾಜ್ಯ ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು, ಶಾಸಕ ಹಂಪಯ್ಯ ನಾಯಕ, ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ, ರಾಯಚೂರು ಶಾಸಕ ಶಿವರಾಜ್ ಪಾಟೀಲ್, ಮಾಜಿ ಸಂಸದ ಬಿ.ವಿ. ನಾಯಕ, ಮಾಜಿ ಶಾಸಕರಾದ ಬಸನವಗೌಡ ಬ್ಯಾಗವಾಟ, ಗಂಗಾಧರ ನಾಯಕ, ವಿಧಾನಪರಿಷತ್ ಸದಸ್ಯರಾದ ಬಸವಗೌಡ ಬಾದರ್ಲಿ ಹಾಗೂ ಎ. ವಸಂತಕುಮಾರ ಸೇರಿದಂತೆ ನಾಡಿನ ವಿವಿಧ ಮಠಗಳ ಸ್ವಾಮಿಗಳು, ಸಾಧಕರು, ಗಣ್ಯರು ಮತ್ತು ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *