ಸಿಂಧನೂರು: ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ರಾಯಚೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ ಸಿಂಧನೂರು, ಪ್ರಾಥಮಿಕ ಆರೋಗ್ಯ ಕೇಂದ್ರ R.H. No.2 ಹಾಗೂ ಸರ್ಕಾರಿ ಪ್ರೌಢಶಾಲೆ R.H. No.1 ಇವರ ಸಂಯುಕ್ತ ಆಶ್ರಯದಲ್ಲಿ ಆರ್.ಹೆಚ್.ನಂ.1 ಕ್ಯಾಂಪಿನ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ದಿನಾಂಕ 10-02-2026 ರಂದು ರಾಷ್ಟ್ರೀಯ ಜಂತುಹುಳು ನಿವಾರಣ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಜಂತುಹುಳು ನಿವಾರಣ ದಿನದ ಮಹತ್ವವನ್ನು ವಿವರಿಸಿದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಗೀತಾ ಹಿರೇಮಠ ಅವರು, ಮಕ್ಕಳಲ್ಲಿ ಜಂತುಹುಳಗಳ ಬಾಧೆಯಿಂದ ಉಂಟಾಗುವ ಅಪೌಷ್ಟಿಕತೆ, ರಕ್ತಹೀನತೆ, ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯ ಕುಂಠಿತತೆಯ ಕುರಿತು ಮಾಹಿತಿ ನೀಡಿದರು. 1 ರಿಂದ 19 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಜಂತುಹುಳು ಮಾತ್ರೆಗಳನ್ನು ತಪ್ಪದೇ ನೀಡಬೇಕು, ಕೈ ತೊಳೆಯುವ ವಿಧಾನವನ್ನು ಅನುಸರಿಸಬೇಕು ಹಾಗೂ ಗರ್ಭಿಣಿಯರಿಗೆ 6 ತಿಂಗಳ ನಂತರ ಮಾತ್ರೆ ನೀಡಬೇಕು ಎಂದು ತಿಳಿಸಿದರು.
ನಂತರ ಆರ್.ಕೆ.ಎಸ್.ಕೆ (RKSK) ಆಪ್ತಸಮಾಲೋಚಕ ರಾಮಾಂಜನ್ ಕುಮಾರ್ ಅವರು ಹದಿಹರೆಯದ ಮಕ್ಕಳ ಸಮಸ್ಯೆಗಳು, ಭಾವನಾತ್ಮಕ ಆರೋಗ್ಯ, ಅಪೌಷ್ಟಿಕತೆ ಹಾಗೂ ವಿವಿಧ ಆರೋಗ್ಯ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಜೊತೆಗೆ ಸ್ಪರ್ಶ್ ಕುಷ್ಠರೋಗ ಆಂದೋಲನ, ವೈಯಕ್ತಿಕ ಸ್ವಚ್ಛತೆ ಹಾಗೂ ಋತುಚಕ್ರ ನೈರ್ಮಲ್ಯ ನಿರ್ವಹಣೆ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಸರಸ್ವತಿ (PHCO), ಶೇಖರ್ ನಾಯಕ್ (CHO), ಅಂಜಮ್ಮ (ಆಶಾ ಕಾರ್ಯಕರ್ತೆ), ಈರಣ್ಣ ಎಲ್. ಕಮ್ಮಾರ (ಹೆಡ್ ಮಾಸ್ಟರ್), ವಿಕ್ರಂ ಎಸ್., ಅಮರೇಶ್, ರಾಜಲಕ್ಷ್ಮಿ, ಎಂ.ಎಫ್. ತೋಟದ, ಹನುಮಂತ್ ಸೇರಿದಂತೆ ಸಹಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಆರೋಗ್ಯ ಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿತು ಎಂದು ಆಯೋಜಕರು ಅಭಿಪ್ರಾಯ ವ್ಯಕ್ತಪಡಿಸಿದರು.

