ಸಾಧಿಸುವ ಛಲವಿದ್ದರೆ, ನಿತ್ಯ ಶ್ರಮಪಡಲು ತಯಾರಿದ್ದರೆ ಕಡಿಮೆ ಭೂಮಿಯಲ್ಲೂ ಚಿನ್ನದಂತಹ ಬೆಳೆ ತೆಗೆಯಬಹುದು ಎಂಬುದಕ್ಕೆ ನಗರದ ಹೊರವಲಯದ ಖಾಜಾ ಕೋಟನೂರ ಗ್ರಾಮದಲ್ಲಿ ಜಮೀನು ಹೊಂದಿರುವ ಶಾಂತವೀರ ದಂಗಾಪುರ ಅವರೇ ಉದಾಹರಣೆ.ಒಂದು ಕಡೆ ಬೃಹತ್ ಖಾಜಾ ಕೋಟನೂರ ಕೆರೆ, ಮತ್ತೊಂದು ಕಡೆ ರಸ್ತೆಯನ್ನು ಹೊಂದಿರುವ ಜಮೀನಿನಲ್ಲಿ ಶಾಂತವೀರ ಅವರು ಅನಾದಿಕಾಲದಿಂದಲೂ ಪುಷ್ಪಕೃಷಿಯನ್ನು ಮಾಡುತ್ತಾ ಬಂದಿದ್ದಾರೆ.ಕಲಬುರಗಿ ನಗರಕ್ಕೆ ಸಮೀಪದಲ್ಲೇ ಇರುವುದರಿಂದ ಮಾರುಕಟ್ಟೆಗೆ ಬರುವುದು ಇನ್ನೂ ಸುಲಭ. ಅವರ ತಂದೆ ವಿಠ್ಠಲ ದಂಗಾಪುರ ಅವರೂ ಹಿಂದೆ ಗುಲಾಬಿ ಹೂ ಬೆಳೆಯುತ್ತಿದ್ದರು. ಅದರಿಂದಲೇ ₹ 3 ಲಕ್ಷ ವರಮಾನ ಬಂದಿತ್ತು. ಇದೀಗ 10 ಗುಂಟೆ ಗುಲಾಬಿ ಜೊತೆಗೆ ಸೇವಂತಿಗೆ ಹೂ ಬೆಳೆಯುತ್ತಿದ್ದು, ಶಾಂತವೀರ ಹಾಗೂ ಅವರ ಪತ್ನಿ ಸುಮಂಗಲಾ ಅವರು ಬೆಳಿಗ್ಗೆ 5ರಿಂದ 8ರವರೆಗೆ ಹೂಗಳನ್ನು ಬಿಡಿಸುತ್ತಾರೆ. ನಂತರ ಹೂಗಳನ್ನು ತೆಗೆದುಕೊಂಡು ಮಾರುಕಟ್ಟೆಗೆ ಹೋಗಿ ಮಾರಾಟ ಮಾಡುತ್ತಾರೆ. ಅತಿ ಬೇಡಿಕೆ ಇದ್ದ ಸಂದರ್ಭದಲ್ಲಿ ಪ್ರತಿ ಕೆ.ಜಿ.ಗೆ ₹ 60 ದರ ಸಿಕ್ಕಿದೆ. ತೀರಾ ಕನಿಷ್ಠವೆಂದರೂ ₹ 40 ದರ ಸಿಕ್ಕೇ ಸಿಗುತ್ತದೆ. ಒಂದಾ ಅಂದಾಜಿನ ಪ್ರಕಾರ ಪ್ರತಿ ತಿಂಗಳು ಸೇವಂತಿಗೆ ಹೂ ಮಾರಾಟದಿಂದಲೇ ₹ 80 ಸಾವಿರದವರೆಗೂ ಲಾಭ ಸಿಗುತ್ತಿದೆ.

ಇದರ ಜೊತೆಗೆ ಇತ್ತೀಚೆಗೆ ನಗರ ಪ್ರದೇಶದಲ್ಲಿ ಹೆಚ್ಚಾಗಿ ಮಾರಾಟವಾಗುತ್ತಿರುವ ಗೋಬಿಯ 2000 ಸಸಿಗಳನ್ನು ನಾಟಿ ಮಾಡಿದ್ದು, ಅವೂ ಈಗ ಕಟಾವಿಗೆ ಬಂದಿವೆ. ಒಂದೊಂದು ಗೋಬಿಗೆ ₹ 30ರಿಂದ ₹ 40ರವರೆಗೆ ದರ ಇದೆ. ‘ಎಷ್ಟು ಬೇಕೋ ಅಷ್ಟು ಮಾತ್ರ ಕಟಾವು ಮಾಡಿಕೊಂಡು ಮಾರಾಟ ಮಾಡುತ್ತೇವೆ. ಅದನ್ನೂ 10 ಗುಂಟೆಯಲ್ಲಿ ಬೆಳೆದಿದ್ದು, ಬೆಳೆ ಉತ್ತಮವಾಗಿದೆ’ ಎನ್ನುತ್ತಾರೆ ಶಾಂತವೀರ.

‘ಪುಷ್ಪ ಕೃಷಿಯು ನಿರಂತರ ಶ್ರಮವನ್ನು ಬೇಡುತ್ತದೆ. ಪ್ರತಿನಿತ್ಯವೂ ಹೂಗಳನ್ನು ಕಟಾವು ಮಾಡಲೇಬೇಕು. ಒಮ್ಮೊಮ್ಮೆ ಕಾರ್ಮಿಕರ ಸಮಸ್ಯೆಯೂ ಕಾಡುತ್ತದೆ. ಬಹುತೇಕ ಸಂದರ್ಭದಲ್ಲಿ ನಮ್ಮ ಕುಟುಂಬ ಸದಸ್ಯರೇ ಹೂ ಹಾಗೂ ಗೋಬಿಯನ್ನು ಕಟಾವು ಮಾಡುತ್ತೇವೆ. ಹೊಲದ ಬಳಿಯೇ ಆಟೊ ರಿಕ್ಷಾ ತಂದು ಅದರಲ್ಲಿ ಹೂ ಹಾಗೂ ಗೋಬಿಯನ್ನು ಕಲಬುರಗಿಯ ಮಾರುಕಟ್ಟೆಗೆ ಕೊಂಡೊಯ್ದು ಮಾರಾಟ ಮಾಡುತ್ತೇವೆ. ಹಲವು ವರ್ಷಗಳಿಂದ ಪುಷ್ಪ ಕೃಷಿಯಲ್ಲಿ ತೊಡಗಿದ್ದರಿಂದ ಹೂವಿನ ವ್ಯಾಪಾರಿಗಳ ಪರಿಚಯವೂ ಆಗಿದೆ. ಹೀಗಾಗಿ, ಅಗತ್ಯವಿದ್ದಷ್ಟು ಒಯ್ದು ಕೊಡುತ್ತೇವೆ. ಬೆಳೆಯುವ ಹೂವಿನ ಪ್ರಮಾಣವೂ ಕಡಿಮೆ ಇರುವುದರಿಂದ ಬಹುತೇಕ ಹೂ ಸ್ಥಳೀಯ ಮಾರುಕಟ್ಟೆಯಲ್ಲಿಯೇ ಮಾರಾಟವಾಗುತ್ತದೆ’ ಎನ್ನುತ್ತಾರೆ ಅವರು.

‘ನಗರದಿಂದ ಖಾಜಾ ಕೋಟನೂರು ಕೆರೆ ನೋಡಲೆಂದು ಬರುವವರು ಹೊಲಕ್ಕೆ ಭೇಟಿ ನೀಡಿ ಪುಷ್ಪ ಕೃಷಿಯನ್ನು ನೋಡಿ ಮಾಹಿತಿ ಪಡೆಯುತ್ತಾರೆ. ಕೆಲವರು ಹೂ ಮತ್ತು ಗೋಬಿಯನ್ನು ಖರೀದಿ ಮಾಡಿಯೂ ಹೋಗುತ್ತಾರೆ. ನಾವು ಹೂವಿನ ಬೀಜಗಳನ್ನು ಹುಮನಾಬಾದ್‌ನ ನರ್ಸರಿಯಿಂದ ತಂದು ನಾಟಿ ಮಾಡಿದ್ದೇವೆ. ನಿರಂತರವಾಗಿ ಸೇವಂತಿಗೆ ಹೂ ಉತ್ತಮ ಇಳುವರಿ ಕೊಡುತ್ತಿದೆ’ ಎನ್ನುತ್ತಾರೆ ಶಾಂತವೀರ ಅವರ ತಂದೆ ವಿಠ್ಠಲ ದಂಗಾಪುರ.

ಎಂಟು ಎಕರೆಯ ಪೈಕಿ ಹತ್ತು ಗುಂಟೆಯಲ್ಲಿ ಸೇವಂತಿಗೆ, ಇನ್ನರ್ಧ ಎಕರೆಯಲ್ಲಿ ಗುಲಾಬಿ, ಮತ್ತೆ 10 ಗುಂಟೆಯಲ್ಲಿ ಗೋಬಿ ಬೆಳೆದಿದ್ದಾರೆ. ಉಳಿದ ಭೂಮಿಯಲ್ಲಿ ಬಾಳೆ, ಕಬ್ಬು, ತೊಗರಿಯನ್ನು ಬೆಳೆದು ವರ್ಷಪೂರ್ತಿ ವರಮಾನ ಪಡೆಯುತ್ತಿದ್ದಾರೆ.

Leave a Reply

Your email address will not be published. Required fields are marked *