ರಾಯಚೂರು ಫೆಬ್ರವರಿ 07 (ಕರ್ನಾಟಕ ವಾರ್ತೆ): ಬೇರೆ ಬೇರೆ ಜಾತಿ ಹಾಗೂ ಧರ್ಮಗಳ ಜನರು ಉತ್ಸವದಲ್ಲಿ ಸೇರಿದ್ದೇವೆ. ಅದರಂತೆ ಕಲಾವಿದರಿಗೂ ಯಾವುದೇ ಜಾತಿ, ಧರ್ಮ ಎಂಬುದಿರುವುದಿಲ್ಲ. ರಾಯಚೂರು ಉತ್ಸವವು ಸರ್ವ ಜನರ, ಸರ್ವಧರ್ಮಿಯರ ಸಂಗಮವಾಗಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಜನ ನೆರೆದು ರಾಯಚೂರು ಜಿಲ್ಲಾ ಉತ್ಸವವು ಯಶಸ್ವಿಯಾಗಿ ಹೊಸ ಇತಿಹಾಸ ನಿರ್ಮಿಸಿದೆ ಎಂದು ರಾಜ್ಯದ ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಆಶ್ರಯದಲ್ಲಿ ಫೆ.7ರಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಧರ್ಮ ಯಾವುದಾದರೇನು ತತ್ತ÷್ವ ಒಂದೇ ಇರಬೇಕು. ಪೂಜೆ ಯಾವುದಾದರೇನು ಭಕ್ತಿ ಒಂದೇ ಇರಬೇಕು. ಈ ನಾಡಿನಲ್ಲಿ ಶಾಂತಿ ನೆಲಸಬೇಕು ಎನ್ನುವ ಮಹತ್ವದ ಸಂದೇಶವನ್ನು ಇಂತಹ ಉತ್ಸವಗಳ ಮೂಲಕ ಜನತೆಗೆ ನೀಡುತ್ತಿದ್ದೇವೆ ಎಂದು ಅವರು ತಿಳಿಸಿದರು.
ಈ ದೇಶದ ಇತಿಹಾಸದಲ್ಲಿ ರಾಯಚೂರು ಜಿಲ್ಲೆ ಕೂಡ ತನ್ನದೇ ವೈಭವ ಹಾಗೂ ಇತಿಹಾಸದ ಮೂಲಕ ರಾಜ್ಯದಲ್ಲಿ ಖ್ಯಾತಿ ಪಡೆದಿದೆ. ಚೋಳರು, ವಿಜಯನಗರದ ಅರಸರು ಸೇರಿದಂತೆ ಅನೇಕ ರಾಜಮಹಾರಾಜರು ಆಳ್ವಿಕೆ ನಡೆಸಿದ ನಾಡು ಇದಾಗಿದೆ. ರಾಜ ಮಹಾರಾಜರ ಕಾಲದಿಂದಲೂ ಈ ನಾಡಲ್ಲಿ ಶಾಂತಿ ಸೌಹಾರ್ದತೆ ನೆಲಿಸಿದೆ. ರಾಯಚೂರು ಉತ್ಸವ ಆಯೋಜನೆಯ ಮೂಲಕ ಇಂತಹ ಐತಿಹಾಸಿಕ ಮಹತ್ವದ ಸಂದೇಶವನ್ನು ನಾವು ಅರಿಯಬೇಕು ಎಂದು ತಿಳಿಸಿದರು.
ರಾಯಚೂರು ಜಿಲ್ಲೆ ಬಿಸಿಲ ನಾಡು ಮಾತ್ರವಲ್ಲ; ರಾಜ್ಯಕ್ಕೆ ವಿದ್ಯುತ್ ಪೂರೈಕೆ ಮಾಡುವ ಏಕೈಕ ಜಿಲ್ಲೆಯಾಗಿದೆ. ಭತ್ತ ಮತ್ತು ಹತ್ತಿ ಸೇರಿದಂತೆ ಯಾವುದೇ ಬೆಳೆ ಬೆಳೆಯುವ ಜಿಲ್ಲೆಯ ರೈತರ ಹಿತ ಅಭಿವೃದ್ಧಿಗೆ ನಾವು ಬದ್ಧರಾಗಿದ್ದೇವೆ. ಈ ಜಿಲ್ಲೆಯ ಕೊನೆಯ ಭಾಗದವರೆಗೆ ಕಾಲುವೆ ನೀರನ್ನು ತಲುಪಿಸುವ ಪ್ರಯತ್ನದ ಕಾರ್ಯಯೋಜನೆಯಲ್ಲಿದ್ದೇವೆ ಎಂದರು.
ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ ಅವರ ಪರಿಶ್ರಮದಿಂದಾಗಿ 371(ಜೆ) ಜಾರಿಯಾಗಿ, ರಾಯಚೂರು ಸೇರಿದಂತೆ ಹಿಂದುಳಿದ ಈ ಭಾಗದ ಬೇರೆ ಬೇರೆ ಜಿಲ್ಲೆಗಳಲ್ಲಿ ಅಭಿವೃದ್ಧಿ ಕಾಣುತ್ತಿದೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲು ಸೌಕರ್ಯ ಕಲ್ಪಿಸಿ ಈ ಭಾಗದ ಕೋಟ್ಯಂತರ ಜನರ ಬಾಳಿನಲ್ಲಿ ಬೆಳಕನ್ನು ಮೂಡಿಸಿದ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಮಹಾತ್ಮ ಗಾಂಧೀಜಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರಂತೆ ಇತಿಹಾಸದಲ್ಲಿ ಸದಾಕಾಲ ಉಳಿಯಲಿದೆ ಎಂದು ಅವರು ತಿಳಿಸಿದರು.
ರಾಜ್ಯ ಸರ್ಕಾರವು ಈಗಾಗಲೇ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಯಶಸ್ವಿಯಾಗಿ ಅನುಷ್ಠಾನ ಮಾಡುತ್ತಿದೆ. ಮುಂದುವರೆದು ನಾವು 6ನೇ ಗ್ಯಾರಂಟಿಯಾಗಿ ಭೂಮಿಯನ್ನು ಜನತೆಗೆ ಕೊಡುತ್ತೇವೆ ಎಂದು ಉಪಮುಖ್ಯಮಂತ್ರಿಗಳು ಘೋಷಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ್ ಎಸ್. ತಂಗಡಗಿ ಅವರು ಮಾತನಾಡಿ, ರಾಯಚೂರು ಜಿಲ್ಲಾ ಉತ್ಸವ ಬಹಳ ದಿನಗಳ ನಂತರ ನಡೆಯುತ್ತಿದೆ. ಗಡಿ ಭಾಗದಲ್ಲಿ ಇಂತಹ ಉತ್ಸವಗಳು ನಡೆದು ಜನತೆಗೆ ಸಂಸ್ಕೃತಿ, ಕಲೆ ಬಗ್ಗೆ ತಿಳಿಸುವ ಕಾರ್ಯವಾಗಬೇಕು. ರಾಯಚೂರು ರಾಜ್ಯದಲ್ಲಿ ವಿಶೇಷ ಜಿಲ್ಲೆಯಾಗಿದ್ದು, ರಾಜ್ಯಕ್ಕೆ ವಿದ್ಯುತ್, ದೇಶಕ್ಕೆ ಬಂಗಾರ ಕೊಡುವ ಜಿಲ್ಲೆಯಾಗಿದೆ. ಅಶೋಕನ ಶಾಸನ ಸಿಕ್ಕಿದ್ದು ಇದೆ ಜಿಲ್ಲೆಯಲ್ಲಿ. ಐತಿಹಾಸಿಕ ರಾಯಚೂರು ಕೋಟೆ, ಮುದಗಲ್ ಮೋಹರಂ, ಜಲದುರ್ಗ ಕೋಟೆ ಸೇರಿದಂತೆ ಇತರೆ ಹಲವಾರು ಐತಿಹಾಸಿಕ ಸ್ಥಳಗಳು ಇಲ್ಲಿವೆ. ಗಡಿಭಾಗದ ರಾಯಚೂರು ಜಿಲ್ಲೆಯಲ್ಲಿ ಪ್ರತಿ ವರ್ಷವೂ ಉತ್ಸವ ನಡೆಸುವ ಕಾರ್ಯಯೋಜನೆ ರೂಪಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ್ ಅವರು ಮಾತನಾಡಿದರು. ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ಸ್ವಾಗತಿಸಿದರು.
ಸಮಾರಂಭದಲ್ಲಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು, ಸಂಸದರಾದ ಜಿ.ಕುಮಾರ ನಾಯಕ, ಶಾಸಕರಾದ ಬಸನಗೌಡ ದದ್ದಲ್, ಹಂಪನಗೌಡ ಬಾದರ್ಲಿ, ಬಸನಗೌಡ ತುರ್ವಿಹಾಳ, ಜೆ.ಟಿ.ಪಾಟೀಲ್, ವಿಧಾನ ಪರಿಷತ್ ಶಾಸಕರಾದ ಎ.ವಸಂತಕುಮಾರ, ಬಸನಗೌಡ ಬಾದರ್ಲಿ, ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠದ ರಾಜ್ಯ ಮಾಹಿತಿ ಆಯುಕ್ತರಾದ ಬಿ ವೆಂಕಟಸಿಂಗ್ , ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಗೌಡ, ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಜಶೇಖರ ರಾಮಸ್ವಾಮಿ, ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ಪವನ್ ಕಿಶೋರ್ ಪಾಟೀಲ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಈಶ್ವರ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅರುಣಾಂಗ್ಷು ಗಿರಿ, ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ, ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ, ಸಹಾಯಕ ಆಯುಕ್ತರಾದ ಡಾ.ಹಂಪಣ್ಣ ಸಜ್ಜನ್ ಸೇರಿದಂತೆ ಇನ್ನೀತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *