ರಾಯಚೂರು ಫೆಬ್ರವರಿ 07 (ಕರ್ನಾಟಕ ವಾರ್ತೆ): ರಾಜ್ಯದ ಜನರ ಅಭಿವೃದ್ಧಿಯನ್ನೇ ಮುಖ್ಯ ಗುರಿಯಾಗಿಸಿಕೊಂಡು ರಾಜ್ಯ ಸರ್ಕಾರವು ಪಂಚ ಗ್ಯಾರಂಟಿ ಯೋಜನೆಗಳನ್ನು
ಜಾರಿ ಮಾಡಿದೆ. ಈ ಬಗ್ಗೆ ಜಾಗೃತಿ ಮೂಡಿಸಲು ರಾಜ್ಯದ ರಾಜ್ಯದ 31 ಜಿಲ್ಲೆಗಳ ಪೈಕಿ ಈಗಾಗಲೇ 21 ಜಿಲ್ಲೆಗಳಲ್ಲಿ ಗ್ಯಾರಂಟಿ ಯೋಜನೆಗಳ ಮಾಹಿತಿಯ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯಾಧ್ಯಕ್ಷರಾದ ಎಚ್.ಎಂ.ರೇವಣ್ಣ ಹೇಳಿದರು.
ಫೆ.07ರ ಶನಿವಾರ ದಂದು ನಗರದ ಕೃಷಿ ತಾಂತ್ರಿಕ ಮಹಾವಿದ್ಯಾಲಯದ ಸಿಲ್ವರ್ ಜುಬ್ಲಿ ಸಭಾಂಗಣದಲ್ಲಿ
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮಾಜಿ ಪ್ರಧಾನಿ ಇಂದಿರಾಗಾಂಧಿಯವರ 20 ಅಂಶಗಳ ಕಾರ್ಯಕ್ರಮವು ದೇಶದ ಬಡವರ ಜೀವನದಲ್ಲಿ ಸಾಕಷ್ಟು ಬದಲಾವಣೆ ತಂದಿತು. ದೇವರಾಜ ಅರಸು ಅವರ ಉಳುವವನೇ ಭೂಮಿಯ ಒಡೆಯ ಎನ್ನುವ ಕಾಯ್ದೆ ಜಾರಿಯಿಂದಲೂ ಕ್ರಾಂತಿ ನಡೆಯಿತು. ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರು ಹಿಂದಿನ ಅವಧಿಯಲ್ಲಿ 150ಕ್ಕೂ ಹೆಚ್ಚು ಭರವಸೆ ನೀಡಿ ಅವುಗಳನ್ನು ಸಾಕಾರಗೊಳಿಸಿದ ಮಹತ್ವದ ಎಲ್ಲ ಕಾರ್ಯಗಳನ್ನು ರಾಜ್ಯ ಸರ್ಕಾರವು ಈಗ ವಿವಿಧ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಮಾಡುತ್ತಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಶಕ್ತಿಯೋಜನೆಯಡಿ 634 ಕೋಟಿ ಉಚಿತ ಪ್ರಯಾಣವು ದಾಖಲೆಯಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರವು 16,369 ಕೋಟಿ ರೂ.ಗಳನ್ನು ಅನುದಾನ ನೀಡಿದೆ. ಶಕ್ತಿ ಯೋಜನೆಗೆ ವಾರ್ಷಿಕ 52 ಕೋಟಿ ರೂ. ವ್ಯಯವಾಗುತ್ತಿದೆ. ಮನೆಯ ಯಜಮಾನಿಗೆ ಪ್ರತಿ ತಿಂಗಳು 2000 ರೂ. ನೀಡುವ ಗೃಹಲಕ್ಷ್ಮಿ ಯೋಜನೆಯಡಿ ರಾಜ್ಯದಲ್ಲಿ 1.24 ಕೋಟಿ ಫಲಾನುಭವಿಗಳು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಈ ಯೋಜನೆಗೆ ಸರ್ಕಾರವು ಈವರೆಗೆ 57,464 ಕೋಟಿ ರೂ.ಗಳನ್ನು ವ್ಯಯಿಸಿದೆ. ಯುವನಿಧಿ ಯೋಜನೆಯಡಿ ರಾಜ್ಯದಲ್ಲಿನ 2,98 ಲಕ್ಷ ಫಲಾನುಭವಿಗಳಿಗೆ ಇದುವರೆಗೆ 874 ಕೋಟಿ ರೂ. ವ್ಯಯ ಮಾಡಿದೆ. ಅನ್ನಭಾಗ್ಯ ಯೋಜನೆಯಡಿ ರಾಜ್ಯದಲ್ಲಿನ 4.08 ಕೋಟಿ ಫಲಾನುಭವಿಗಳಿಗೆ ಇದುವರೆಗೆ 16,574 ಕೋಟಿ ರೂ ವ್ಯಯವಾಗಿದೆ. ಗೃಹಜ್ಯೋತಿ ಯೋಜನೆಯಡಿ ರಾಜ್ಯದಲ್ಲಿನ 1.65 ಕೋಟಿ ಫಲಾನುಭವಿಗಳಿಗೆ ಇದುವರೆಗೆ 21,239 ಕೋಟಿ ರೂ. ವ್ಯಯ ಮಾಡಿದ್ದೇವೆ ಎಂದು ಅವರು ಗ್ಯಾರಂಟಿ ಯೋಜನೆಗಳ ಸಾಧನೆಯ ಬಗ್ಗೆ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಮೈಸೂರು ವಿಭಾಗದ ಉಪಾಧ್ಯಕ್ಷರಾದ ಡಾ.ಪುಷ್ಪಾ ಅಮರನಾಥ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಪಾಮಯ್ಯ ಮುರಾರಿ, ರಾಯಚೂರು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಪವನ್ ಕಿಶೋರ್ ಪಾಟೀಲ್, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾದ ಹನುಮಂತಪ್ಪ ಜಾಲಿಬೆಂಚಿ ಅವರು ಇದ್ದರು.

Leave a Reply

Your email address will not be published. Required fields are marked *