ರಾಯಚೂರು ಫೆಬ್ರವರಿ 07 (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ರಾಯಚೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಫೆ.5 ರಿಂದ ಫೆ.7ರವರೆಗೆ ಮೂರು ದಿನಗಳ ಕಾಲ ನಡೆದ ರಾಯಚೂರು ಜಿಲ್ಲಾ ಉತ್ಸವ ಜನೋತ್ಸವವಾಗಿ ಇತಿಹಾಸದ ಪುಟ ಸೇರಿತು.
ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಫೆ.5 ರಿಂದ 7ರವರೆಗೆ ಮೂರು ದಿನಗಳ ಕಾಲ ನಡೆದ ಕೃಷಿ ಮೇಳದಲ್ಲೂ ಜನವೋ ಜನ ಎನ್ನುವ ಸಂದೇಶ ರವಾನೆಯಾಯಿತು.
ರಾಯಚೂರು ಉತ್ಸವಕ್ಕಾಗಿ ಕೃಷಿ ವಿಶ್ವ ವಿದ್ಯಾಲಯ ಆವರಣವು ಹಬ್ಬದಂತೆ ಸಿದ್ಧಗೊಂಡು ಎಲ್ಲೆಡೆ ಉತ್ಸವದ ಫಲಕಗಳೇ ಕಾಣಿಸಿದವು.
ಭತ್ತದ ಒಣಮೇವಿನಿಂದ ನಿರ್ಮಿಸಿದ್ದ ಕೃಷಿ ಮೇಳದ ಕಮಾನು ವಿಶೇಷ ಆಕರ್ಷಣೆಯಾಗಿತ್ತು. ಉತ್ಸವಕ್ಕೆ ಆಗಮಿಸಿದ್ದ ಬಹುತೇಕ ಜನತೆ ಕೃಷಿ ಮೇಳದ ಕಮಾನಿನ ಮುಂದೆ ನಿಂತು ಸೆಲ್ಫಿ ಪಡೆಯುತ್ತಿದ್ದುದು ಕಂಡು ಬಂದಿತು.
ಜರ್ಮನ್ ಟೆಂಟ್‌ನಲ್ಲಿ ಸಿದ್ಧಪಡಿಸಿದ ಆಹಾರ ಮೇಳದ ಮಳಿಗೆ ರಾಯಚೂರು ಉತ್ಸವ ಮತ್ತು ಕೃಷಿ ಮೇಳದ ವಿಶೇಷ ಆಕರ್ಷಣೆ ಆಗಿತ್ತು. ಇಲ್ಲಿ 100ಕ್ಕೂ ಹೆಚ್ಚು ಆಹಾರ ಮಳಿಗೆಗಳು ಇದ್ದವು.
ಉತ್ಸವದ ನಿಮಿತ್ತ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಅಂಗಳದಲ್ಲಿ ಇರಿವೆಗಳು ಹರಿದಾಡಿದಂತೆ ಜನರ ದಂಡೇ ಸೇರಿತ್ತು.
ಉತ್ಸವದ ನಿಮಿತ್ತ ವಿವಿಧ ಇಲಾಖೆಗಳು ತೆರೆದಿದ ಮತ್ತು ಕೃಷಿ ವಿಶ್ವವಿದ್ಯಾಲಯದ ಕೃಷಿ ಮೇಳದ ನಾನಾ ಮಳಿಗೆಗಳ ಮುಂದೇ ಜನದಟ್ಟಣೆ ಕಾಣಿಸಿತು.
ಉತ್ಸವದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಸೇರಿ ರಾಯಚೂರು ಉತ್ಸವ ಮತ್ತು ಕೃಷಿ ಮೇಳದ ಎರಡೂ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗಿಯಾದರು.
ತಿಂಡಿ ತಿನಿಸುಗಳು, ಬಟ್ಟೆ ಅಂಗಡಿ ಸೇರಿದಂತೆ ಅನೇಕ ಬಗೆಯ ಅಂಗಡಿಗಳ ಮುಂದೆಯೂ ಜನರು ಸೇರಿ ತಮಗೆ ಬೇಕಾದ ವಸ್ತುಗಳನ್ನು ತಿಂಡಿಗಳನ್ನು ಖರೀದಿಸಿ ಸಂಭ್ರಮಿಸಿದರು.
ಕೃಷಿ ವಿವಿಯ ಕೃಷಿ ಮೇಳದ ಆವರಣದಲ್ಲಿ ಪಂಚ ಗ್ಯಾರಂಟಿ ಯೋಜನೆಗಳಾದ ಯುವನಿಧಿ, ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮೀ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.
ಜಿಲ್ಲಾ ಆಯುಷ್ಯ ಇಲಾಖೆಯಿಂದ ಆಯುರ್ವೇದ ಆರೋಗ್ಯ ಸೌಲಭ್ಯಗಳ ಕುರಿತು ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೂರ್ಣಿಮಾ ಆಯುರ್ವೇದ ಮಹಾವಿದ್ಯಾಲಯದ, ಬಸವ ಅಕ್ಯು ಅಕಾಡೆಮಿ ಹಾಗೂ ರಾಯಚೂರು ರಸಾಯನಿಕ ತಯಾರಕರ ಸಂಘದಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರಗಳು ನಡೆದವು.
ರಾಯಚೂರಿನ ಅಂಚೆ ವಿಭಾಗದಿಂದ ಒಂದು ಸೂರು-ಹಲವು ಯೋಜನೆಗಳ ಕುರಿತು ಅರ್ಹ ಫಲಾನುಭüಗಳಿಗೆ ಜಾಗೃತಿ ಮೂಡಿಸಲಾಯಿತು. ರಾಯಚೂರು ಅಕ್ಕಿ ಮಾಲೀಕರ ಸಂಘದಿಂದ ವಿವಿಧ ತಳಿಯ ಅಕ್ಕಿಗಳ ಪ್ರದರ್ಶನ ನಡೆಯಿತು.
ರಾಯಚೂರು ನಗರದ ಸೆಲ್ಕೋ ಫೌಂಡೇಶನ್ ವತಿಯಿಂದ ಸೌರ ಬೆಂಬಲಿತ ಜೀವನೋಪಾಯ ಪರಿಹಾರ ಪ್ರದರ್ಶನ ಹಾಗೂ ರೈತರಿಗೆ ಉತ್ತಮ ಗುಣಮಟ್ಟದ ಬೀಜಗಳ ಕುರಿತು ರಾಷ್ಟ್ರೀಯ ಬೀಜ ನಿಗಮ, ಕರ್ನಾಟಕ ರಾಜ್ಯ ಮತ್ತು ಸಾವಯವ ಪ್ರಮಾಣ ಸಂಸ್ಥೆಯಿಂದ ಜಾಗೃತಿ ಮೂಡಿಸಲಾಯಿತು.
ಖಾದಿ ವಸ್ತು ಪ್ರದರ್ಶನ ಹಾಗೂ ಮಾರಾಟ, ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಜವಳಿ ವಸ್ತು ಪ್ರದರ್ಶನ ಹಾಗೂ ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲಾ ಹಾಲು ಉತ್ಪಾದಕರ ಸಂಘಗಳಿಂದ ನಂದಿನಿ ಉತ್ಪಾದನೆಗಳಾದ ಹಾಲು, ಮೊಸರು, ಮೈಸೂರ್ ಪಾಕ್, ಹಾಲಿನ ಪೇಡ, ಹಾಲಿನ ಕೇಸರ್, ಬೆಲ್ಲದ ಓಟ್ಸ್ ಮತ್ತು ನಟ್ಸ್ ಬರ್ಫಿ, ಗುಡ್ ಲೈಫ್ ಉತ್ಪಾದನೆಗಳ ಪರಿಚಯವನ್ನು ಸಾರ್ವಜನಿಕರಿಗೆ ಮಾಡಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಮಾದರಿ ಅಂಗನವಾಡಿ ಕೇಂದ್ರ ಮತ್ತು ಪೌಷ್ಟಿಕ ಆಹಾರದ ಪ್ರದರ್ಶನ, ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮಗಳ ಕುರಿತು ಜಾಗೃತಿ ಮೂಡಿಸಲಾಯಿತು.
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಜಲಸಮೃದ್ಧ ಕರ್ನಾಟಕದೆಡೆಗೆ ನಮ್ಮ ನಡಿಗೆ, ಜಲಮೂಲಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ ಹಾಗೂ ಅಂತರ್ಜಾಲ ವೃದ್ದಿಗೆ ಕ್ರಾಂತಿಕಾರಿ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು. ಅಲ್ಲದೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಜವಾಹರಲಾಲ್ ನೆಹರು ತಾರಾಲಯದ ಯೋಜನೆ ಹಾಗೂ ಕಾರ್ಯಕ್ರಮಗಳು ಹಾಗೂ ಸಂಜೆ ಆಕಾಶ ವೀಕ್ಷಣೆ ಕಾರ್ಯಕ್ರಮ ಮತ್ತು ಸಂಚಾರಿ ತಾರಾಲಯದಿಂದ ಆಕಾಶ ಕಾಯಗಳನ್ನು ತೋರಿಸಲಾಯಿತು.
ಕೃಷಿ ಇಲಾಖೆಯಿಂದ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ-ಜಲಾನಯನ ಅಭಿವೃದ್ಧಿ ಘಟಕ-2.0ರ ಕಾರ್ಯಕ್ರಮದ ಕುರಿತು ಜಾಗೃತಿ ಮೂಡಿಸಲಾಯಿತು.
ಕಣ್ಮನ ತಣಿಸಿದ ಆಹಾರ ಮಳಿಗೆಗಳು: ಆಹಾರ ಮೇಳದ ಮಳಿಗೆಗಳಲ್ಲಿ ಉತ್ಸವದ ಮೂರು ದಿನಗಳ ಕಾಲ ಮಕ್ಕಳು, ಯುವಕರು, ಯುವತಿಯರು ವಿವಿಧ ಬಗ್ಗೆಯ ತಿಂಡಿ ತಿನಿಸುಗಳನ್ನು ಖರೀದಿಸಿ ಸೇವಿಸಿ ಸಂಭ್ರಮಿಸಿದರು.
ಆಹಾರ ಮೇಳದಲ್ಲಿ ಚಿಕ್ಕಮಗಳೂರು, ಗದಗ, ಮೈಸೂರು, ಬಾಗಲಕೋಟೆ, ಬೆಳಗಾವಿ, ಕಲಬುರಗಿ ಸೇರಿದಂತೆ 12 ಜಿಲ್ಲೆಗಳಿಂದ ಆಗಮಿಸಿದ್ದ ಹಲವು ಬಗೆಯ ತಿಂಡಿ, ಖಾದ್ಯಗಳ ತಯಾರಕರು ತಮ್ಮ ತಮ್ಮ ಮಳಿಗೆಯಲ್ಲಿ ತಾವು ತಯಾರಿಸಿದ ತಿಂಡಿ ತಿನಿಸುಗಳ ಬಗ್ಗೆ ಪರಿಚಯಿಸಿದರು.
ಉತ್ಸವ ಆರಂಭಗೊಂಡ ಮೊದಲ ದಿನದಿಂದ ಮೂರನೇ ದಿನದ ವರೆಗೂ ಆಹಾರ ಮೇಳಕ್ಕೆ ಭಾರಿ ಸಂಖ್ಯೆಯಲ್ಲಿ ಜನರು ಹರಿದು ಬಂದಿದ್ದು ಕಂಡು ಬಂದಿತು.
ಹಲವು ಶಾಲೆಗಳ ಮಕ್ಕಳು ಕೂಡ ಉತ್ಸವದ ಸವಿ ಸವಿಯಲು ಶಾಲಾ ಶಿಕ್ಷಕರುಗಳೊಂದಿಗೆ ಆಹಾರ ಮೇಳಕ್ಕೂ ಭೇಟಿ ನೀಡಿ ತಮಗಿಷ್ಟ ಬಂದ ತಿಂಡಿ ತಿನಿಸುಗಳನ್ನು ತಿಂದು ಸಂಭ್ರಮಿಸಿದರು.
ರಾಯಚೂರಿನ ಕೆನರಾ ಬ್ಯಾಂಕ್, ಎಸ್.ಬಿ.ಐ ಸೇರಿದಂತೆ ಇತರೆ ಬ್ಯಾಂಕುಗಳಿಂದ ದೊರೆಯುವ ಸೌಲಭ್ಯಗಳು ಹಾಗೂ ವಿವಿಧ ಸರ್ಕಾರಿ ಸೌಲಭ್ಯಗಳ ಜನರಿಗೆ ಮಾಹಿತಿ ನೀಡಲಾಯಿತು.

Leave a Reply

Your email address will not be published. Required fields are marked *