ಬೆಂಗಳೂರು : ರೈಲ್ವೆ ಇಲಾಖೆಯಡಿ ಕರ್ನಾಟಕಕ್ಕೆ ಒಟ್ಟು 7,748 ಕೋಟಿ ರೂ.ಮೊತ್ತ ಸಿಗಲಿದ್ದು, ಇದು ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರ ನೀಡಿದ್ದ ಮೊತ್ತಕ್ಕಿಂತ 9 ಪಟ್ಟು ಹೆಚ್ಚು ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಶನಿವಾರ ಮಲ್ಲೇಶ್ವರದಲ್ಲಿನ ಬಿಜೆಪಿ ಕೇಂದ್ರ ಕಚೇರಿ ಜಗನ್ನಾಥ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಆಡಳಿತದಡಿ 800 ಕೋಟಿ ರೂ. ಕರ್ನಾಟಕ ರಾಜ್ಯಕ್ಕೆ ಸಿಗುತ್ತಿತ್ತು. ಇದೀಗ 7,748 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಸೆಮಿ ಕಂಡಕ್ಟರ್ ಕೈಗಾರಿಕೆಯಲ್ಲಿ ಬೆಂಗಳೂರು ಮತ್ತು ಮೈಸೂರು ಮಹತ್ವದ ಪಾತ್ರ ವಹಿಸುತ್ತಿವೆ ಎಂದು ತಿಳಿಸಿದರು.ಈ ವರ್ಷದ ಕೇಂದ್ರ ಬಜೆಟ್ 2047ಕ್ಕೆ ವಿಕಸಿತ ಭಾರತದ ರೋಡ್ ಮ್ಯಾಪ್. 2047ಕ್ಕೆ ನಾವು ವಿಕಸಿತ ಭಾರತ ಮತ್ತು ಅಭಿವೃದ್ಧಿ ಹೊಂದಿದ ದೇಶವಾಗಬೇಕೆಂದು ಸಂಕಲ್ಪ ಮಾಡಿದ್ದೇವೆ. ಅದಕ್ಕೆ ಈ ರೋಡ್ ಮ್ಯಾಪ್ ಪೂರಕ. ಉತ್ಪಾದನಾ ಕ್ಷೇತ್ರದ ನಾವೀನ್ಯತೆ ಹಾಗೂ ದೇಶವನ್ನು ಆಧುನಿಕ ವಿಶ್ವಕ್ಕೆ ಸಿದ್ಧಪಡಿಸುವುದು, ಸಮಾಜದ ಪ್ರತಿವರ್ಗವೂ ಬೆಳವಣಿಗೆಯ ಪ್ರಯೋಜನ ಪಡೆಯುವಂತೆ ಮಾಡುವ ಅಂತರ್ಗತ ಬೆಳವಣಿಗೆ, ನಾವು ಮಾಡಬೇಕಾದ ಕರ್ತವ್ಯಗಳೇ ಈ 3 ಕಂಬಗಳು ಎಂದು ವಿವರಿಸಿದರು.
ಮೇಕ್ ಇನ್ ಇಂಡಿಯವು ಈಗಾಗಲೇ ಉತ್ತಮ ಸಾಧನೆ ಮಾಡಿದೆ. ಈ ಬಜೆಟ್‍ನಲ್ಲಿ ಸೆಮಿ ಕಂಡಕ್ಟರ್ ಉತ್ಪಾದನೆಗೆ ಒತ್ತು ಕೊಡಲಾಗುತ್ತಿದೆ. ಬಯೋಫಾರ್ಮಕ್ಕೆ ಆದ್ಯತೆ ನೀಡಲಿದ್ದೇವೆ. ವಾಯುಯಾನ, ಬಾಹ್ಯಾಕಾಶ, ಕೈಗಾರಿಕೆಯಡಿ ಹೈಟೆಕ್ ಟೂಲ್ ರೂಮ್‍ಗಳು ಪ್ರಿಸಿಶನ್ ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳಲಾಗಿದೆ ಎಂದು ಅವರು ನುಡಿದರು.

