ಎರಡನೇ ಬೆಳೆಗೆ ನೀರು ಬಿಡಬೇಕು ಎನ್ನುವ ಬೇಡಿಕೆ ಜೊತೆಗೆ ವಿವಿಧ ಹಕ್ಕೊತ್ತಾಯಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಸಮಿತಿಯಿಂದ ತಹಶೀಲ್ ಕಚೇರಿಗೆ ಮುತ್ತಿಗೆ ಹಮ್ಮಿಕೊಳ್ಳಲಾಗಿತ್ತು.
ಈ ಪ್ರತಿಭಟನೆ ಪ್ರವಾಸಿಮಂದಿರದಿಂದ ತಹಶೀಲ್ದಾರ್ ಕಚೇರಿಯವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಿ ತಹಶೀಲ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಪ್ರತಿಭಟನಾ ನಿರತರನ್ನು ಬಂಧಿಸಿ ಗ್ರಾಮೀಣ ಠಾಣೆಗೆ ಕರೆದೊಯ್ದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಅಮೀನ್ ಪಾಷಾ ದಿದ್ದಿಗಿ ಮಾತನಾಡಿ, ತುಂಗಭದ್ರಾ ಡ್ಯಾಮ್ ನಿಂದ ಎಡದಂಡೆಯ ಮುಖ್ಯ ನಾಲೆಗೆ ನೀರು ಹರಿಸಬೇಕು. ಡಿ.1 ರಿಂದ ಜೋಳ ಖರೀದಿ ಕೇಂದ್ರಗಳಲ್ಲಿ ನೋಂದಣಿ ಮಾಡುವುದರ ಜೊತೆಗೆ ರೈತರು ಬೆಳೆದ ಎಲ್ಲಾ ಜೋಳವನ್ನು ಖರೀದಿ ಮಾಡಬೇಕು. ರೈತರಿಗೆ ಸಾಲ ಮರುಪಾವತಿಸುವಂತೆ ಬ್ಯಾಂಕುಗಳು ನೀಡುವ ಕಿರುಕುಳ ತಪ್ಪಿಸಬೇಕು.
ಹೊಸದಾಗಿ ರೈತರು ಪಂಪಸೆಟ್ ಗಳಿಗೆ ಅರ್ಜಿ ಸಲ್ಲಿಸದ ಎಲ್ಲಾ ಸಾಮಗ್ರಿಗಳನ್ನು ಉಚಿತವಾಗಿ ಪೂರೈಸಬೇಕು ಎಂದು ಆಗ್ರಹಿಸಿದರು. ಈ ವೇಳೆ: ಜಿಲ್ಲಾಧ್ಯಕ್ಷರಾದ ಬಸವರಾಜ ಹಂಚಿನಾಳ, ತಾಲೂಕು ಅಧ್ಯಕ್ಷ ಶಿವನಗೌಡ ಗುಡುದೂರು, ಗೌರವಾಧ್ಯಕ್ಷ ಅಪ್ಪಣ್ಣ ಹುಡೇದ್, ನಾಗನನೌಡ ಪೋತ್ನಾಳ, ವೀರೇಶ ಮಡಿವಾಳ, ಬಸವರಾಜ ಗೋಡಿಹಾಳ ಸೇರಿದಂತೆ ಅನೇಕ ರೈತರಿದ್ದರು.


