ಬಾಯಲ್ಲಿ ನೀರೂರೀಸುವ ಆಹಾರ ಮೇಳ : ವಿವಿಧ ಬಗೆಯ ತಿನಿಸುಗಳಿಗೆ ಮುಗಿಬಿದ್ದ ಜನ
ಜಿಲೇಬಿ ಸವಿದು ಸಂಭ್ರಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್
ರಾಯಚೂರು ಫೆ. 05 :ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ಅಂಗವಾಗಿ ಇಲ್ಲಿನ ಕೃಷಿ ವಿಶ್ವವಿಶ್ವವಿದ್ಯಾಲಯ ಆವರಣದಲ್ಲಿ ವಿಶಾಲವಾದ ಪ್ರದೇಶದಲ್ಲಿ ಸ್ಥಾಪಿಸಲಾಗಿರುವ ಆಹಾರ ಮೇಳದ ಮಳಿಗೆಯಲ್ಲಿ ಉತ್ಸವದ ಮೊದಲ ದಿನವೇ ಬೆಳಿಗ್ಗೆಯಿಂದಲೇ ಇಲ್ಲಿನ ತಿಂಡಿ ತಿನಿಸುಗಳಿಗೆ ಜನ ಮುಗಿಬಿದ್ದ ಸವಿಯುವುದು ಕಂಡುಬಂದಿತು.
ಆಹಾರ ಮೇಳವನ್ನು ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲರು ಮಳಿಗೆಯಲ್ಲಿ ತೆರೆಯಲಾಗಿದ್ದ ವಿವಿಧ ಬಗೆಯ ತಿಂಡಿ ತಿನಿಸುಗಳ ಮಳಿಗೆಗಳಿಗೆ ಖುದ್ದು ಭೇಟಿ ನೀಡಿ, ಪರಿಶೀಲಿಸಿದರು. ಮಹಿಳಾ ಸ್ವ ಸಹಾಯ ಸಂಘದ ಮಹಿಳೆಯೊಬ್ಬರು ಮಳಿಗೆಯಲ್ಲಿ ಆಗಷ್ಟೇ ತಯಾರಿಸಿದ್ದ ಜಿಲೇಬಿಯನ್ನು ಪಡೆದು, ರುಚಿ ನೋಡಿ, ಖುಷಿ ಪಟ್ಟರು. ಇವರೊಂದಿಗೆ ಮಳಿಗೆಗೆ ಆಗಮಿಸಿದ್ದ ವಿವಿಧ ಗಣ್ಯರು ಕೂಡ ಜಿಲೇಬಿಯ ಸವಿಯನ್ನು ಸವಿದರು. ಬಳಿಕ ಆಹಾರ ಮಳಿಗೆಯಲ್ಲಿಯೇ ವಿಶೇಷವಾಗಿ ತಯಾರಿಸಲಾಗಿದ್ದ ಕೇಕ್ ಅನ್ನು ಕೂಡ ಕತ್ತರಿಸಿ, ಆಹಾರ ಮೇಳದ ಸಂಭ್ರವನ್ನು ಇಮ್ಮಡಿಗೊಳಿಸಿದರು.
ಆಹಾರ ಮೇಳಕ್ಕೆ ಸಚಿವರೊಂದಿಗೆ ವಾಲ್ಮೀಕಿ ಅಭಿವೃದ್ಧಿ ನಿಗಮ ಅಧ್ಯಕ್ಷ ಬಸನಗೌಡ ದದ್ದಲ್, ರಾಯಚೂರು ನಗರ ಶಾಸಕ ಡಾ. ಶಿವರಾಜ ಪಾಟೀಲ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾದಿಕಾರ ಅಧ್ಯಕ್ಷ ಪಾಮಯ್ಯ ಮುರಾರಿ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ಜಿಲ್ಲಾಧಿಕಾರಿ ನಿತೀಶ್ ಕೆ., ಜಿ.ಪಂ. ಸಿಇಒ ಈಶ್ವರ ಕುಮಾರ್ ಕಾಂದು, ಎಸ್‌ಪಿ ಅರುಣಾಂಗ್ಷು ಗಿರಿ, ಕೃಷಿ ವಿವಿ ಕುಲಪತಿ ಡಾ. ಎಂ. ಹನುಮಂತಪ್ಪ, ಮಹಾನಗರಪಾಲಿಕೆ ಆಯುಕ್ತ ಜುಬಿನ್, ಮಹಾಪಾತ್ರ, ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಉಪಾಧ್ಯಕ್ಷ ಬಶೀರ್ ಅಹ್ಮದ್ ಸೇರಿದಂತೆ ಹಲವು ಗಣ್ಯರು ಈ ವೇಳೆ ಉಪಸ್ಥಿತರಿದ್ದು, ವಿವಿಧ ಬಗೆಯ ಆಹಾರ, ತಿಂಡಿ ತಿನಿಸು ಗಳ ಸವಿಯನ್ನು ಸವಿದರು.
ಆಹಾರ ಮೇಳದಲ್ಲಿ ಚಿಕ್ಕಮಗಳೂರು, ಗದಗ, ಮೈಸೂರು, ಬಾಗಲಕೋಟೆ, ಬೆಳಗಾವಿ, ಕಲಬುರ್ಗಿ ಸೇರಿದಂತೆ ಹಲವು ಜಿಲ್ಲೆಗಳಿಂದ ಆಗಮಿಸಿದ್ದ ಹಲವು ಬಗೆಯ ತಿಂಡಿ, ಖಾದ್ಯಗಳ ತಯಾರಕರು, ಮಳಿಗೆಯಲ್ಲಿ ತಮ್ಮ ತಿಂಡಿ ತಿನಿಸುಗಳನ್ನು ಇಲ್ಲಿ ಪರಿಚಯಿಸಿದ್ದಲ್ಲದೆ, ಜನರಿಗೆ ಸವಿಯಲೂ ನೀಡಿದರು. ಉತ್ಸವ ಆರಂಭಗೊಂಡ ಮೊದಲ ದಿನವೇ ಬೆಳಿಗ್ಗೆಯಿಂದಲೇ ಆಹಾರ ಮೇಳಕ್ಕೆ ಸಾಗರೋಪಾದಿ ಹರಿದುಬಂದ ಜನ ವಿವಿಧ ಬಗೆಯ ತಿನಿಸುಗಳನ್ನು ಸವಿದರು. ರಾಯಚೂರು ಜಿಲ್ಲೆಯೂ ಸೇರಿದಂತೆ ಅಕ್ಕಪಕ್ಕದ ಜಿಲ್ಲೆ, ತಾಲ್ಲೂಕುಗಳ ಜನರು ಕೂಡ ರಾಯಚೂರು ಉತ್ಸವವನ್ನು ಕಣ್ಣಾರೆ ಕಂಡು ಸಂಭ್ರಮಿಸಲು ಆಗಮಿಸುತ್ತಿದ್ದುದು ಕಂಡುಬಂದಿತು. ಹಲವು ಶಾಲೆಗಳ ಮಕ್ಕಳು ಕೂಡ ಉತ್ಸವದ ಸವಿ ಸವಿಯಲು ತಮ್ಮ ಶಾಲಾ ಶಿಕ್ಷಕರುಗಳೊಂದಿಗೆ ಆಹಾರ ಮೇಳಕ್ಕೂ ಭೇಟಿ ನೀಡಿ, ತಮಗಿಷ್ಟವಾದ ತಿಂಡಿ ತಿನಿಸುಗಳನ್ನು ಸವಿದರು.
ಆಹಾರ ಮೇಳದಲ್ಲಿ ಫಾಸ್ಟ್ ಫುಡ್ ತಿನಿಸುಗಳಿಂದ ಮೊದಲುಗೊಂಡು, ವಿವಿಧ ಬಗೆಯ ಹಣ್ಣುಗಳ ಜ್ಯೂಸ್ ಅಂಗಡಿಗಳು, ಮಂಡಾಳು ಒಗ್ಗರಣಿ, ಮಿರ್ಚಿ ಬಜ್ಜಿ, ಬದನೆಕಾಯಿ ಬಜ್ಜಿ, ಪಾಪ್ ಕಾರ್ನ್, ಗೋಬಿ ಮಂಚೂರಿ, ನೂಡಲ್ಸ್, ಆಂಧ್ರಾ ಸ್ವೀಟ್ಸ್, ನಾನಾ ಬಗೆಯ ಹಪ್ಪಳ, ಸಂಡಿಗೆ ಸೇರಿದಂತೆ ನಾಡಿನ ನಾನಾ ಭಾಗದಲ್ಲಿನ ತಿಂಡಿ ತಿನಿಸುಗಳು ಒಂದೇ ಸೂರಿನಡಿ ಜನರಿಗೆ ಲಭ್ಯವಾಗುವಂತೆ ಆಹಾರ ಮೇಳದಲ್ಲಿ ವ್ಯವಸ್ಥೆ ಗೊಳಿಸಲಾಗಿತ್ತು.
ಆಹಾರ ಮೇಳದ ಮೊದಲ ದಿನವೇ ತಿಂಡಿ ತಿನಿಸುಗಳ ಮಳಿಗೆಗಳಲ್ಲಿ ಭರ್ಜಿರಿ ಸ್ಪಂದನೆ ದೊರೆತಿದ್ದು, ಒಳ್ಳೆಯ ವ್ಯಾಪಾರವಾಗಿದ್ದು ಕಂಡುಬಂದಿತು. ಉತ್ಸವ ಫೆ. 07 ರವರೆಗೂ ನಡೆಯಲಿದ್ದು, ಆಹಾರ ಮೇಳದಲ್ಲಿ ತಿಂಡಿ ತಿನಿಸುಗಳ ವ್ಯಾಪಾರಸ್ಥರಿಗೆ ಭರ್ಜರಿ ವ್ಯಾಪಾರವಾಗಿ, ಉತ್ತಮ ಲಾಭ ಕಂಡುಕೊಳ್ಳುವ ನಿರೀಕ್ಷೆ ಇದೆ.


