ತಾಳಿಕೋಟಿ: ಗರ್ಭಿಣಿ ಬಾಣಂತಿಯರು ಸಮತೋಲನ ಆಹಾರ ಸೇವನೆ ಮಾಡಬೇಕು ಒಂದೇ ರೀತಿಯ ಆಹಾರ ಪದಾರ್ಥಗಳನ್ನು ಸೇವನೆ ಮಾಡದೆ ವಿವಿಧ ರೀತಿಯ ಆಹಾರ ಪದಾರ್ಥಗಳನ್ನು ಮತ್ತು ಕಾಯಿ ಸೊಪ್ಪು, ತರಕಾರಿಗಳು, ಮೊಳಕೆ ಕಾಳು ಹಾಗೂ ಎಲ್ಲಾ ತರಕಾರಿಗಳನ್ನು ಸೇವನೆ ಮಾಡಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರ ಯೂನಿಯನ್ ಅಧ್ಯಕ್ಷೆ ನೀಲಮ್ಮಗೌಡತಿ ಪಾಟೀಲ ಹೇಳಿದರು. ಬುಧವಾರ ಪಟ್ಟಣದ ಭೋವಿ ವಡ್ಡರ ಓಣಿಯಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಂಡ ಗರ್ಭಿಣಿ ಬಾಣಂತಿಯರಿಗೆ ಮಾರ್ಗದರ್ಶನ ಸಭೆಯಲ್ಲಿ ಮಾತನಾಡಿದರು. ಸದೃಢ ಸಮಾಜದ ನಿರ್ಮಾಣ ಹಾಗೂ ದೇಶದ ಭವಿಷ್ಯವನ್ನು ಉಜ್ವಲ ಗೊಳಿಸಲು ತಾಯಂದಿರು ಸದೃಢ ಮಕ್ಕಳನ್ನು ಸಮಾಜಕ್ಕೆ ನೀಡಬೇಕಾಗಿದೆ ಈ ಉದ್ದೇಶಕ್ಕಾಗಿಯೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ ಇದರ ಸದುಪಯೋಗವನ್ನು ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಅಂಗನವಾಡಿ ಕೇಂದ್ರದ ಮೇಲ್ವಿಚಾರಕಿ ಸರೋಜಿನಿ ಪೂಜಾರಿ ಮಾತನಾಡಿ ಬಾಣಂತಿಯರು ಪ್ರೋಟೀನ್, ವಿಟಾಮಿನ್ ಹಾಗೂ ಕ್ಯಾಲ್ಸಿಯಂ ಇರುವ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು. ಎಣ್ಣೆಯಲ್ಲಿ ಕರೆದ ಪದಾರ್ಥಗಳನ್ನು ಆದಷ್ಟು ವರ್ಜಿಸಬೇಕು, ಪೌಷ್ಟಿಕ ಆಹಾರ ಸೇವನೆಯಿಂದ ಮಾತ್ರ ತಾಯಿ ಮಗು ಆರೋಗ್ಯವಾಗಿರಲು ಸಾಧ್ಯ ಎಂದರು. ನಿವೃತ್ತ ಶಿಕ್ಷಕ ಹುಲಿಗೆಪ್ಪ ಕಟ್ಟಿಮನಿ ಮಾತನಾಡಿ ಒಂದು ಆರೋಗ್ಯಪೂರ್ಣ ಸಮಾಜದ ನಿರ್ಮಾಣದಲ್ಲಿ ತಾಯಂದಿರ ಪಾತ್ರ ಮಹತ್ವದ್ದಾಗಿದೆ ದೇಶದ ಭವಿಷ್ಯ ವಾಗಿರುವ ಮಕ್ಕಳು ಅವರ ಉದರದಲ್ಲಿ ಜನಿಸುತ್ತಾರೆ ಅವರು ತಮ್ಮ ಆರೋಗ್ಯದ ಕುರಿತು ಹೆಚ್ಚು ಕಾಳಜಿ ವಹಿಸಬೇಕು ಎಂದರು. ಗಣ್ಯರಾದ ಹುಸೇನಬಾಷಾ ಜಮಾದಾರ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಚ್.ಕಟ್ಟಿಮನಿ, ನಾಗಪ್ಪ ಬಳವಾಟ, ಲಕ್ಷ್ಮೀಂಬಾಯಿ ಬಳವಾಟ, ಮಂಜುಳಾ ಕಟ್ಟಿಮನಿ, ಕಾಶಿಬಾಯಿ ಶರಣರ, ಗುರುಬಸಮ್ಮ ಮಠ, ಗಂಗು ಢವಳೇಶ್ವರ, ರೇಣುಕಾ ಕಬಾಡೆ, ವಿದ್ಯಾ ನಾಡಕರಣಿ, ದೇವಕ್ಕಿ ಬಡಿಗೇರ, ಅನಸೂಯಾ ಪತ್ತಾರ ಹಾಗೂ ವಾರ್ಡಿನ ಮಹಿಳೆಯರು ಇದ್ದರು.
