ಮುದ್ದೇಬಿಹಾಳ: ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಬಂಜೆತನ ಹಾಗೂ ಲೈಂಗಿಕ ನಿರಾಸಕ್ತಿಯ ಸಮಸ್ಯೆಗಳು ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದ್ದು, ಈ ಸಮಸ್ಯೆಗಳು ಮಹಿಳೆಯರಿಗೆ ಮಾತ್ರ ಸೀಮಿತವಾಗದೆ ಪುರುಷರಲ್ಲಿಯೂ ಹೆಚ್ಚುತ್ತಿರುವುದು ಗಂಭೀರ ವಿಷಯವಾಗಿದೆ ಎಂದು ವೈದ್ಯ ಡಾ. ಎ. ಎ. ಮಾಗಿ ಹೇಳಿದರು.

ಪಟ್ಟಣದ ಮಾಗಿ ಕಾಂಪ್ಲೆಕ್ಸ್‌ನಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಜೆತನ ಹಾಗೂ ಲೈಂಗಿಕ ಆರೋಗ್ಯ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಿ ಪರಿಹಾರ ಒದಗಿಸುವ ಉದ್ದೇಶದಿಂದ ಫೆಬ್ರವರಿ 15ರಂದು ಮಾಗಿ ಕಾಂಪ್ಲೆಕ್ಸ್‌ನಲ್ಲಿ ಒಂದು ದಿನದ ನಿವಾರಣಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಆಧುನಿಕ ಆಹಾರ ಪದ್ಧತಿ, ಜಂಕ್ ಫುಡ್ ಸೇವನೆ, ಗುಟ್ಕಾ ಹಾಗೂ ಮದ್ಯಪಾನ, ಧೂಮಪಾನ, ನಿದ್ರಾಹೀನತೆ ಮತ್ತು ಅತಿಯಾದ ಮಾನಸಿಕ ಒತ್ತಡಗಳು ಪುರುಷರಲ್ಲಿ ವೀರ್ಯಾಣುಗಳ ಪ್ರಮಾಣ ಹಾಗೂ ಗುಣಮಟ್ಟ ಕುಸಿಯಲು ಪ್ರಮುಖ ಕಾರಣಗಳಾಗಿವೆ. ಇದರ ಪರಿಣಾಮವಾಗಿ ಬಂಜೆತನ ಹಾಗೂ ಲೈಂಗಿಕ ಆಸಕ್ತಿಯ ಕೊರತೆ ಹೆಚ್ಚುತ್ತಿದೆ ಎಂದು ಅವರು ಹೇಳಿದರು.

ಮಹಿಳೆಯರಲ್ಲಿ ಹಾರ್ಮೋನಲ್ ಅಸಮತೋಲನ, ಪಿಸಿಓಎಸ್, ಥೈರಾಯ್ಡ್ ಸಮಸ್ಯೆ, ರಕ್ತಹೀನತೆ, ಅನಿಯಮಿತ ಮಾಸಿಕ ಚಕ್ರ ಹಾಗೂ ಮಾನಸಿಕ ಒತ್ತಡಗಳು ಗರ್ಭಧಾರಣೆಗೆ ಅಡ್ಡಿಯಾಗುತ್ತಿವೆ. ಆದರೆ ಸಾಮಾಜಿಕ ಸಂಕೋಚ ಮತ್ತು ಅರಿವಿನ ಕೊರತೆಯಿಂದಾಗಿ ಅನೇಕರು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯುತ್ತಿಲ್ಲ ಎಂಬುದಾಗಿ ಡಾ. ಮಾಗಿ ಆತಂಕ ವ್ಯಕ್ತಪಡಿಸಿದರು.

ಈ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡದೇ ಆರಂಭಿಕ ಹಂತದಲ್ಲೇ ತಜ್ಞ ವೈದ್ಯರ ಸಲಹೆ ಪಡೆಯುವುದು ಅಗತ್ಯವಾಗಿದೆ. ಸಮತೋಲಿತ ಆಹಾರ, ವ್ಯಸನಗಳಿಂದ ದೂರವಿರುವುದು, ನಿಯಮಿತ ವ್ಯಾಯಾಮ ಹಾಗೂ ಮಾನಸಿಕ ಸಮತೋಲನ ಕಾಪಾಡಿಕೊಳ್ಳುವುದರಿಂದ ಬಂಜೆತನ ಹಾಗೂ ಲೈಂಗಿಕ ನಿರಾಸಕ್ತಿಯಂತಹ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರ ಸಾಧ್ಯವೆಂದು ಅವರು ತಿಳಿಸಿದರು.

ಬಂಜೆತನ ಹಾಗೂ ಲೈಂಗಿಕ ಆರೋಗ್ಯ ಕುರಿತು ಸಮಾಜದಲ್ಲಿ ಮುಕ್ತ ಚರ್ಚೆ ಅಗತ್ಯವಿದ್ದು, ಇಂತಹ ಸಮಸ್ಯೆಗಳನ್ನು ಅಪಮಾನವಾಗಿ ನೋಡದೇ ಆರೋಗ್ಯ ಸಮಸ್ಯೆಗಳೆಂದು ಪರಿಗಣಿಸಿ ಚಿಕಿತ್ಸೆ ಪಡೆಯಬೇಕೆಂದು ಅವರು ಸಲಹೆ ನೀಡಿದರು.

ಹೆಚ್ಚಿನ ಮಾಹಿತಿಗಾಗಿ ವೈದ್ಯ ಡಾ. ಎ. ಎ. ಮಾಗಿ ಅವರನ್ನು 9448210446 ಸಂಖ್ಯೆಯಲ್ಲಿ ಸಂಪರ್ಕಿಸಬಹುದು.

ಪತ್ರಿಕಾಗೋಷ್ಠಿಯಲ್ಲಿ ಅನ್ವರ ಹುಸೇನ ಮಾಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *