ರಾಯಚೂರು ಫೆಬ್ರವರಿ 02 (ಕರ್ನಾಟಕ ವಾರ್ತೆ): ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ-2026ರ ಆಚರಣೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಫೆ.2 ಮತ್ತು ಫೆ.3ರಂದು ಎರಡು ದಿನಗಳ ಕಾಲ ಆಯೋಜನೆ ಮಾಡಿದ ಮಕ್ಕಳ ಹಬ್ಬಕ್ಕೆ ಮೊದಲನೇ ದಿನ ಫೆ.2ರಂದು ಯಶಸ್ವಿಯಾಗಿ ಚಾಲನೆ ಸಿಕ್ಕಿತು.
ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಮಕ್ಕಳ ಹಬ್ಬದ ನಿಮಿತ್ತ ಹಾಕಿದ್ದ ಬೇರೆ ಬೇರೆ ಬಗೆಯ ಪ್ರದರ್ಶನ ಕಾರ್ಯಕ್ರಮಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ಅಧ್ಯಕ್ಷರಾದ ಕೇಶವರೆಡ್ಡಿ ಅವರು ಚಾಲನೆ ನೀಡಿದರು.
ರಾಯಚೂರಿನ ಕವಿ ಲೇಖಕ ಈರಣ್ಣ ಬೆಂಗಾಲಿ ಅವರ ಫೋಟೊಗ್ರಫಿಯ ನಾನಾ ಹಕ್ಕಿಗಳ ಚಿತ್ರಗಳ ಮಳಿಗೆ, ವಿವಿಧ ಗಣ್ಯ ವ್ಯಕ್ತಿಗಳ ಕಾರ್ಟೂನ್ ಪ್ರದರ್ಶನ ಮಳಿಗೆ, ಮುಖವಾಡ ತಯಾರಿ ಮಳಿಗೆ, ಗೂಡುದೀಪ ತಯಾರಿ ಮಳಿಗೆ, ಗಾಳಿಪಟ ಮಳಿಗೆ, ಆರೋಗ್ಯಕರವಾಗಿ ತಿನ್ನಿರಿ, ಆರೋಗ್ಯವಾಗಿರಿ ಎಂಬ ಸಂದೇಶದ ನಾನಾ ಮಳಿಗಳಿಗೆ ಮತ್ತು ರೋಬ್ಯಾಟಿಕ್ ಚಿಟ್ಟೆಗಳ ಪ್ರದರ್ಶನದ ವೀಕ್ಷಣೆ ನಡೆಸಿ ಮಕ್ಕಳು ಖುಷಿ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳ ನೋಂದಣಿ: ಈ ಕಾರ್ಯಕ್ರಮದಲ್ಲಿ ರಾಯಚೂರು ಸಿಟಿ ಸೇರಿದಂತೆ ಬೇರೆ ಬೇರೆ ಕಡೆಯ ಸರ್ಕಾರಿ ಹಾಗೂ ಖಾಸಗಿ ಶಾಲೆಯ ಮಕ್ಕಳು ಭಾಗಿಯಾಗಿದ್ದರು. ಮೊದಲನೇ ದಿನ ಸುಮಾರು 3 ಸಾವಿರಕ್ಕೂ ಹೆಚ್ಚು ಮಕ್ಕಳನ್ನು ನೋಂದಣಿ ಮಾಡಿಕೊಳ್ಳಲಾಯಿತು.
ಬೆಳಿಗ್ಗೆ 9 ಗಂಟೆ ವೇಳೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ಜಿಲ್ಲೆಯ ವಿವಿಧ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಕ್ರೀಡಾಂಗಣದಲ್ಲಿ ವರದಿ ಮಾಡಿಕೊಂಡು ರೋಬೋಟಿಕ್ ಪ್ರಾಣಿಗಳು, ರೋಬೋಟ್ ಪ್ರದರ್ಶನ, ಗೊಂಬೆ ನೃತ್ಯ, ಗಾಳಿಪಟ, ಮುಖವಾಡ ತಯಾರಿಕೆ, ಜೇಡಿಮಣ್ಣು ಸೇರಿದಂತೆ ವಿವಿಧ ಮಳಿಗೆಗಳಿಗೆ ಭೇಟಿ ನೀಡಿ ಸಂಭ್ರಮಿಸಿದರು.
ಕುಮಾರಿ ತನ್ವಿ ನಾಯಕ ಅವರು ಮೊದಲಿಗೆ ಭರತನಾಟ್ಯ ನೃತ್ಯ ಗೈದಳು. ಕೋಳಿ ನೃತ್ಯ, ಜಾದೂ ಪ್ರದರ್ಶನ ನಂತರ ಮಾಣಿಕ ಪ್ರಭು ಅಕಾಡೆಮಿ ಫಾರ್ ದಿ ಬ್ಲೈಂಡ್ ರಾಯಚೂರು ವತಿಯಿಂದ ಸಮೂಹ ಗಾಯನ, ಕುಮಾರಿ ಭಕ್ತಿ ತಂದೆ ರಾಜಶೇಖರ ಅವರಿಂದ ವಚನ ಸಂಗೀತ, ಕುಮಾರ ವೆಂಕಟೇಶ ನಂಜಲದಿನ್ನಿ ಅವರಿಂದ ಹೆಜ್ಜೆಮೇಳ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.
ಮಧ್ಯಾಹ್ನ ವೇಳೆಯಲ್ಲಿ ರಾಘವ ನಾಟ್ಯಾಮೃತ ಶಾಲೆಯಿಂದ ಭರತನಾಟ್ಯ, ಸೇಂಟ್ ಮೇರಿ ಕಾನ್ವೆಂಟ್ ಶಾಲೆ ರಾಯಚೂರು ವತಿಯಿಂದ ಜಾನಪದ ನೃತ್ಯ, ಗಬ್ಬೂರಿನ ವಿದ್ಯಾಜ್ಯೋತಿ ಶಿಕ್ಷಣ ಸಂಸ್ಥೆಯಿಂದ ಜಂಪ್ ರೋಪ್ ಮತ್ತು ಮಲ್ಲಕಂಬ, ಮಲ್ಲಟ ಕೆ.ಜಿ.ಬಿ.ವಿ. ಶಾಲೆಯಿಂದ ಕರಾಟೆ ಪೀರಾಮೀಡ್, ರಾಯಚೂರಿನ ಜ್ಞಾನಗಂಗಾ ಶಾಲೆಯಿಂದ ಜಾನಪದ ನೃತ್ಯ, ರಾಯಚೂರಿನ ಮ್ಯಾಕ್ಸ್ವೆಲ್ ಶಾಲೆ ಇಂಟರ್ ನ್ಯಾಷನಲ್ ಸ್ಕೂಲ್‌ನಿಂದ ಭರತನಾಟ್ಯ, ರಾಯಚೂರಿನ ಸೇಂಟ್ ಜೇವಿಯರ್ ಶಾಲೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾಯಚೂರಿನ ಲಯನ್ಸ್ ಪ್ರೌಢಶಾಲೆಯಿಂದ ಸಾಮೂಹಿಕ ನೃತ್ಯ, ರಾಯಚೂರಿನ ಸೇಂಟ್ ಜೇವಿಯರ್ ಶಾಲೆಯಿಂದ ಸಿಂಧೂರ ಕಾರ್ಯಚರಣೆ ಕುರಿತು ಕಾರ್ಯಕ್ರಮಗಳು ನಡೆದವು.
ಶಿಕ್ಷಕರಲ್ಲಿ ಉತ್ಸಾಹ: ಮಕ್ಕಳ ಉತ್ಸವಕ್ಕೆ ತಮ್ಮ ತಮ್ಮ ಶಾಲಾ ಮಕ್ಕಳನ್ನು ಕರೆ ತಂದಿದ್ದ ಬೇರೆ ಬೇರೆ ಶಾಲೆಗಳ ಗುರುಗಳು ಮತ್ತು ಗುರುಮಾತೆಯರು ಸಹ ಮಕ್ಕಳ ಹಬ್ಬದ ಸವಿಯನ್ನು ಕಣ್ತುಂಬಿಕೊಂಡರು.

Leave a Reply

Your email address will not be published. Required fields are marked *