ಸಿಂಧನೂರು : ಕರ್ನಾಟಕದ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಪುನರ್ವಸತಿಗೊಂಡಿರುವ ಆರ್.ಎಚ್. ನಂಬರ್–1 ಗ್ರಾಮದಲ್ಲಿ ವಾಸಿಸುವ ತಮಿಳು ಸಮುದಾಯಗಳು ಕಳೆದ 55 ವರ್ಷಗಳಿಂದ ಸತತವಾಗಿ ಶಿಸ್ತು, ಸಂಪ್ರದಾಯ ಹಾಗೂ ಭಕ್ತಿಭಾವದಿಂದ ಹಬ್ಬಗಳನ್ನು ಆಚರಿಸಿಕೊಂಡು ಬರುತ್ತಿವೆ.
ತಮಿಳು ತ್ರಿವರ್ಧಿಯಲ್ಲೇ ಪ್ರಸಿದ್ಧಿಯಾಗಿರುವ ಗ್ರಾಮದ ಶ್ರೀ ಮುರುಗನ್ ದೇವಸ್ಥಾನದಲ್ಲಿ ಶ್ರೀ ಬಾಲ ಮುರುಗನ್ 55ನೇ ವಾರ್ಷಿಕ ಜಾತ್ರಾ ಮಹೋತ್ಸವವು ಈ ಬಾರಿ ಕೂಡ ಭಕ್ತರ ಅಪಾರ ಭಾಗವಹಿಸುವಿಕೆಯಿಂದ ಅದ್ದೂರಿಯಾಗಿ ನಡೆಯಿತು. ಜಾತ್ರಾ ಮಹೋತ್ಸವದ ಅಂಗವಾಗಿ ಹಲವು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಮಹೋತ್ಸವದ ಸಂದರ್ಭದಲ್ಲಿ ಪ್ರತಿದಿನವೂ ವಿಶೇಷ ಪೂಜೆ, ಅಭಿಷೇಕ, ಅಲಂಕಾರ ಸೇವೆ, ಭಜನೆ ಹಾಗೂ ದೇವರ ನಾಮಸ್ಮರಣೆ ನಡೆಯಿತು. ಜಾತ್ರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿ ಕಾವಡಿ ಸೇವೆ ಆಯೋಜಿಸಲಾಗಿದ್ದು, ವ್ರತಪಾಲನೆ ಮಾಡಿದ ಭಕ್ತರು ಪವಿತ್ರ ಕಾವಡಿಯನ್ನು ಹೊತ್ತು ಡೊಳ್ಳು–ವಾದ್ಯಗಳೊಂದಿಗೆ, ಭಕ್ತಿಗೀತೆಗಳನ್ನು ಹಾಡುತ್ತಾ ಪಾದಯಾತ್ರೆ ಮೂಲಕ ದೇವಸ್ಥಾನಕ್ಕೆ ಆಗಮಿಸಿದರು. ಈ ಕಾವಡಿ ಮೆರವಣಿಗೆ ಗ್ರಾಮದಲ್ಲಿ ಭಕ್ತಿಭಾವ ಹಾಗೂ ಆಧ್ಯಾತ್ಮಿಕ ವಾತಾವರಣವನ್ನು ಸೃಷ್ಟಿಸಿತು.
ಮುಖ್ಯ ದಿನದಂದು ಶ್ರೀ ಬಾಲ ಮುರುಗನ್ ದೇವರಿಗೆ ಮಹಾ ಅಭಿಷೇಕ, ಮಹಾ ಮಂಗಳಾರತಿ ಹಾಗೂ ವಿಶೇಷ ಅಲಂಕಾರ ನೆರವೇರಿತು. ನಂತರ ದೇವರ ಭವ್ಯ ಮೆರವಣಿಗೆ ನಡೆಯಿತು. ಬಳಿಕ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದ್ದು, ಗ್ರಾಮ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಿದರು.
ಈ ಜಾತ್ರಾ ಮಹೋತ್ಸವದ ಯಶಸ್ಸಿಗೆ ದೇವಸ್ಥಾನ ಸಮಿತಿ ಸದಸ್ಯರು, ಗ್ರಾಮದ ಹಿರಿಯರು, ಯುವಕರು, ಮಹಿಳೆಯರು ಹಾಗೂ ಸ್ವಯಂಸೇವಕರು ಒಗ್ಗಟ್ಟಿನಿಂದ ಶ್ರಮಿಸಿದರು. 55 ವರ್ಷಗಳ ನಿರಂತರ ಪರಂಪರೆಯೊಂದಿಗೆ ನಡೆಯುತ್ತಿರುವ ಈ ಜಾತ್ರಾ ಮಹೋತ್ಸವವು ತಮಿಳು ಸಮುದಾಯದ ಧಾರ್ಮಿಕ ನಂಬಿಕೆ, ಸಂಸ್ಕೃತಿ ಹಾಗೂ ಏಕತೆಯ ಜೀವಂತ ಪ್ರತೀಕವಾಗಿದ್ದು, ಗ್ರಾಮದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಭಕ್ತಿಭಾವವನ್ನು ಇನ್ನಷ್ಟು ಬಲಪಡಿಸಿದೆ.
ವರದಿಗಾರರು : ಲಾಜರ್ ಸಿರಿಲ್
