ಪಟ್ಟಣಕ್ಕೆ ಆಗಮಿಸಲಿರುವ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ಜ್ಯೋತಿ ರಥಯಾತ್ರೆಯನ್ನು ಅದ್ದೂರಿಯಾಗಿ ಸ್ವಾಗತಿಸಲಾಗುವುದು ಎಂದು ತಹಸೀಲ್ದಾರ್ ಅಮರೇಶ ಬಿರಾದಾರ್ ತಿಳಿಸಿದರು. ಪಟ್ಟಣದ ತಹಸಿಲ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಫೆ.5 ರಿಂದ 7ರವರೆಗೆ ನಡೆಯಲಿರುವ ರಾಯಚೂರು ಉತ್ಸವದಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಐತಿಹಾಸಿಕ ಪರಂಪರೆ ಸೇರಿ ಮಕ್ಕಳಿಂದ ವೃದ್ಧರವರೆಗೆ ಮನೋಲ್ಲಾಸವಾಗುವ ಕಾರ್ಯಕ್ರಮಗಳು ನಡೆಯಲಿವೆ.ಇದರ ಅಂಗವಾಗಿ ಈಗಾಗಲೇ ಜಿಲ್ಲಾ ಕೇಂದ್ರದಲ್ಲಿ ವಿವಿಧ ಕ್ರೀಡಾಕೂಟಗಳು, ಮ್ಯಾರಥಾನ್ ಹಾಗೂ ಸ್ಪರ್ಧೆಗಳು ನಡೆಯುತ್ತಿವೆ.
ಉತ್ಸವದ ಭಾಗವಾಗಿ ರಥಯಾತ್ರೆ ಫೆ.1ರಂದು ಸಂಜೆ 3.30ಕ್ಕೆ ಪಟ್ಟಣದ ಗ್ರಂಥಾಲಯದ ಬಳಿ ಸ್ವಾಗತಿಸಲ್ಪಡಲಿದ್ದು, ಗಾಂಧಿ ವೃತ್ತ ಮಾರ್ಗವಾಗಿ ಮಹರ್ಷಿ ವಾಲ್ಮೀಕಿ ವೃತ್ತದವರೆಗೆ ರಥಯಾತ್ರೆ ಸಾಗಲಿದೆ ಎಂದರು.
ಈ ಹಿನ್ನೆಲೆಯಲ್ಲಿ ತಾಲೂಕಿನ ಮುಖಂಡರು, ಪ್ರಗತಿಪರ ಸಂಘಟನೆಗಳು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಸಹಕಾರಿ ಸಂಘ ಸಂಸ್ಥೆಗಳು, ಗ್ರಾಪಂ ಪ್ರತಿನಿಧಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಥಯಾತ್ರೆ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

