ರಾಯಚೂರು ಜನವರಿ 29 (ಕರ್ನಾಟಕ ವಾರ್ತೆ):ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ-2026 ನಿಮತ್ತ ಜನವರಿ 28ರಂದು ರಾಯಚೂರನಲ್ಲಿ ನಡೆದ ರಾಜ್ಯ ಮಟ್ಟದ ಪುರುಷರ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಬೆಳಗಾವಿ ಜಿಲ್ಲೆಯ ದೇಹದಾರ್ಢ್ಯ ಪಟು ಪ್ರಶಾಂತ ಕನ್ನೂರಕರ ಅವರು ಮಿಸ್ಟರ್ ರಾಯಚೂರು ಉತ್ಸವ-2026ರ ಕಿರೀಟವನ್ನು ಮುಡಿಗೇರಿಸಿಕೊಂಡರು.
ಬೆಳಗಾವಿಯ ಮತ್ತೊಬ್ಬ ದೇಹದಾರ್ಢ್ಯ ಪಟು ಪ್ರತಾಪ ವಿಠ್ಠಲ್ ಕಲಕುಂದ್ರಿಕರ ಅವರು ರನರ್ ಆಫ್ ಆಗಿ ಹೊರಹೊಮ್ಮಿದರು.
ರಾಯಚೂರಿನ ವೃಷಭ್ ವಶಿಷ್ಠ ಅವರು ಬೆಸ್ಟ್ ಪೋಜರ್ ಸ್ಥಾನಕ್ಕೆ ತೃಪ್ತಿಪಟ್ಟರು.
ವಿಜೇತರಿಗೆ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ., ಜಿಲ್ಲಾ ಪಂಚಾಯತ್ ಸಿಇಓ ಈಶ್ವರ ಕಾಂದೂ, ಮಹಾನಗರ ಪಾಲಿಕೆ ಕಮಿಷನರ್ ಜುಬಿನ್ ಮೋಹಪಾತ್ರ, ರಾಯಚೂರು ಜಿಲ್ಲಾ ದೇಹದಾರ್ಢ್ಯ ಸಂಘದ ಅಧ್ಯಕ್ಷರಾದ ಮಂಜುನಾಥ ಹಾನಗಲ್, ಸಂಘದ ಫೌಂಡರ್ ಹಾಗೂ ಕಾರ್ಯದರ್ಶಿ ಸುಧಾಕರ ಕುರುಡಿ ಅವರು ವಿಜೇತರಿಗೆ ಟ್ರಾಫಿ, ಮೆಡಲ್, ಪ್ರಮಾಣ ಪತ್ರ ಮತ್ತು ಕ್ರಮವಾಗಿ ಪ್ರಥಮ ಬಹುಮಾನ 30,000 ರೂ, ದ್ವಿತೀಯ ಬಹುಮಾನ 10,000 ರೂ ಹಾಗೂ ತೃತೀಯ ಬಹುಮಾನ 5000 ರೂ.ಗಳನ್ನು ನೀಡಿ ಸನ್ಮಾನಿಸಿ ಗೌರವಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಯಚೂರು ಜಿಲ್ಲಾ ದೇಹದಾರ್ಢ್ಯ ಸಂಘ ಹಾಗೂ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳ ಸಹಯೋಗದಲ್ಲಿ ನಗರದ ಮಹಾತ್ಮ ಗಾಂಧೀ ಜಿಲ್ಲಾ ಕ್ರೀಡಾಂಗಣದಲ್ಲಿ ಈ ದೇಹದಾರ್ಢ್ಯ ಸ್ಪರ್ಧೆ ನಡೆಯಿತು.
ಗಂಗಾಧರ ಎಂ., ಶಂಕರ ಪಿಲ್ಲೆ, ಮೈಬೂಬ್, ಸುಧಾಕರ, ಸುನೀಲ್ ರಾವುತ್, ಕಿರಣಕುಮಾರ, ಸಬರುದ್ದೀನ್ ಪಾಶಾ ಸೇರಿದಂತೆ ಇನ್ನೀತರರು ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.
55 ಕೆ.ಜಿ., 60 ಕೆ.ಜಿ.,65 ಕೆ.ಜಿ.,70 ಕೆ.ಜಿ., 75 ಕೆ.ಜಿ.,80 ಕೆ.ಜಿ. ಮತ್ತು 80+ ಕೆ.ಜಿ ಸೇರಿದಂತೆ ಒಟ್ಟು ಏಳು
ವಿಭಾಗದಲ್ಲಿ ಸ್ಪರ್ಧೆ ನಡೆಯಿತು.
ಪ್ರತಿ ವಿಭಾಗದಲ್ಲಿ ವಿಜೇತರಾದ ತಲಾ ಐದು ಸ್ಪರ್ಧಾಳುಗಳಿಗೆ ಕ್ರಮವಾಗಿ 15,000, 5000, 4000, 3000 ಮತ್ತು 2000 ರೂ ನಗದು ಬಹುಮಾನ, ಪ್ರಮಾಣ ಪತ್ರ ಮತ್ತು ಮೆಡಲ್ ನೀಡಿ ಸತ್ಕರಿಸಲಾಯಿತು.
ಪೂರ್ಣಪಂದ್ಯ ವೀಕ್ಷಿಸಿದ ಜಿಲ್ಲಾಧಿಕಾರಿಗಳು, ಜಿಪಂ ಸಿಇಓ: ದೇಹದಾರ್ಢ್ಯ ಸ್ಪರ್ಧೆಯು ಜನವರಿ 28ರ ರಾತ್ರಿ 7.30ಕ್ಕೆ ಆರಂಭವಾಯಿತು.
ಜಿಪಂ ಸಿಇಓ ಮಹಾನಗರ ಪಾಲಿಕೆಯ ಆಯುಕ್ತರು, ಅಪರ ಜಿಲ್ಲಾಧಿಕಾರಿಗಳು ಹಾಗೂ ಇನ್ನೀತರ ಅಧಿಕಾರಿಗಳೊಂದಿಗೆ
ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು, ಪಂದ್ಯ ವೀಕ್ಷಕರ ಸಾಲಿನಲ್ಲಿ ಕುಳಿತು ಪಂದ್ಯ ಆರಂಭದಿಂದ ರಾತ್ರಿ 10.30ರವರೆಗೆ ಸತತ 3 ಗಂಟೆ ಸಮಯ ದೇಹದಾರ್ಢ್ಯ ಸ್ಪರ್ಧೆಯ ವೀಕ್ಷಣೆ ನಡೆಸಿ ಸ್ಪರ್ಧಾಳುಗಳಿಗೆ ಹುರಿದುಂಬಿಸಿದರು.
ರಾಯಚೂರು ಉತ್ಸವದ ಬಗ್ಗೆ ಸಲಹೆ ಕೇಳಲು ಜಿಲ್ಲಾಡಳಿತದಿಂದ ನಡೆಸಿದ ಸಂಘ ಸಂಸ್ಥೆಗಳ, ಗಣ್ಯರ, ನಾಗರಿಕರ, ಬುದ್ದಿ ಜೀವಿಗಳ, ಸಾಹಿತಿಗಳ, ಕಲಾವಿದರ ಮೊದಲ ಸಭೆಯಲ್ಲಿ ಕೇಳಿ ಬಂದ ಸಲಹೆಯಂತೆ ನಾವು ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ ಆಯೋಜನೆ ಮಾಡಿ ಕ್ರೀಡಾಸಕ್ತರಿಗೆ ಸ್ಪೂರ್ತಿ ನೀಡಿದ್ದೇವೆ ಎಂದು ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾಧಿಕಾರಿಗಳು ಅಭಿಪ್ರಾಯ ಹಂಚಿಕೊಂಡರು.
ಸಮಾರಂಭದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ, ಡಿವೈಎಸ್ಪಿ ಶಾಂತವೀರ, ಸಹಾಯಕ ಆಯುಕ್ತರಾದ ಡಾ.ಹಂಪಣ್ಣ ಸಜ್ಜನ, ತಹಸೀಲ್ದಾರ ಸುರೇಶ ವರ್ಮಾ, ಅಮರೇಶ ಬಿರಾದಾರ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಕೃಷ್ಣ ಶಾವಂತಗೇರಿ, ಡಿಎಚ್ ಒ ಡಾ.ಸುರೇಂದ್ರ ಬಾಬು, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ವೀರೇಶ ನಾಯಕ ಸೇರಿದಂತೆ ಇನ್ನೀತರರು ಇದ್ದರು.
ಡಾ.ದಂಡಪ್ಪ ಬಿರಾದಾರ ನಿರೂಪಿಸಿದರು.


