ರಾಯಚೂರು ಜನವರಿ 29 (ಕರ್ನಾಟಕ ವಾರ್ತೆ): ಜಿಲ್ಲಾ ಮಾನವ ಅಭಿವೃದ್ಧಿ-2025 ಮತ್ತು ಸಮಗ್ರ ಸುಸ್ಥಿರ ಜಿಲ್ಲಾ ಅಭಿವೃದ್ಧಿ ದೂರದೃಷ್ಟಿ ಯೋಜನೆ-2031ರವರೆಗೆ ವರದಿ ತಯಾರಿಕೆಗೆ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ವರದಿ ತಯಾರಿಕೆಗಾಗಿ ಜಿಲ್ಲೆಯ ಪ್ರತಿಯೊಂದು ಗ್ರಾಮ ಪಂಚಾಯತಿ ಮಟ್ಟದಿಂದ ಸರಿಯಾದ ಮಾಹಿತಿಯನ್ನು ನೀಡಬೇಕೆಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ್ ಕಾಂದೂ ಅವರು ಹೇಳಿದರು.
ಜನವರಿ 29ರ ಗುರುವಾರ ದಂದು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಾನವ ಅಭಿವೃದ್ಧಿ ವರದಿ-2025 ಹಾಗೂ ಸಮಗ್ರ ಮತ್ತು ಸುಸ್ಥಿರ ಜಿಲ್ಲಾ ಅಭಿವೃದ್ಧಿ ದೂರದೃಷ್ಟಿ ಯೋಜನೆ-2031 ವರದಿಗಳ ತಯಾರಿಕೆ ಕುರಿತು ಜಿಲ್ಲಾ ಮಟ್ಟದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಯಚೂರು ಜಿಲ್ಲೆಯು ಮಹತ್ವಾಕಾಂಕ್ಷೆ ಜಿಲ್ಲೆಯಾಗಿದೆ. ಅಲ್ಲದೆ ಇಲ್ಲಿನ ಎರಡು ತಾಲೂಕುಗಳು ಬ್ಲಾಕ್ ಮಹತ್ವಾಕಾಂಕ್ಷೆ ಜಿಲ್ಲೆಯಾಗಿದ್ದು, ಜಿಲ್ಲೆಯಲ್ಲಿನ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಫಲಿತಾಂಶ, ಆರೋಗ್ಯ, ಕೃಷಿ ಕ್ಷೇತ್ರ ಸೇರಿದಂತೆ ಇತರೆ ಕ್ಷೇತ್ರದಲ್ಲಿ ಹೇಗೆ ವರದಿಯನ್ನು ತಯಾರಿಸಬೇಕೆಂದು ತರಬೇತಿ ಕಾರ್ಯಾಗಾರದಲ್ಲಿ ಮಾಹಿತಿ ನೀಡಲಾಗುತ್ತದೆ. ಎಲ್ಲಾ ಅಧಿಕಾರಿಗಳು ಸರಿಯಾಗಿ ತಿಳಿದುಕೊಳ್ಳಬೇಕು ಎಂದರು.
ಮಾಹಿತಿ ನೀಡುವ ಸಂಬಂಧದಲ್ಲಿ ಕೆಳಮಟ್ಟದ ಅಧಿಕಾರಿ ನೀಡುವ ಮಾಹಿತಿಯನ್ನು ಕ್ರಾಸ್ ಚೆಕ್ ಮಾಡಬೇಕು. ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಜಿಲ್ಲೆಯ ಜನರ ಕಲ್ಯಾಣ, ಶಿಕ್ಷಣ, ಆರೋಗ್ಯ ಮತ್ತು ಆದಾಯದಂತಹ ಅಂಶಗಳನ್ನು ಅಳೆಯಲು ಬಹಳ ಮುಖ್ಯವಾದ ವರದಿಯಾಗಿದ್ದು, ಎಲ್ಲಾ ಇಲಾಖೆ ಅಧಿಕಾರಿಗಳು ವರದಿ ತಯಾರಿಕೆ ಪ್ರಕ್ರಿಯೆಗೆ ಸಂಬಂಧದಲ್ಲಿ ಮಾಹಿತಿಯನ್ನು ನೀಡುವ ಮೂಲಕ ಜಿಲ್ಲೆಯ ಅಭಿವೃದ್ದಿಗೆ ಸಹಕರಿಸಬೇಕೆಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸಂಬಂಧದಲ್ಲಿ ಅಧಿಕಾರಿಗಳಿಂದ ಸೂಚಿಸಿದರು.
ಈ ವೇಳೆ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಹಿರಿಯ ನಿರ್ದೇಶಕ ಹಾಗೂ ಸರ್ಕಾರದ ಪದನಿಮಿತ್ತ ಜಂಟಿ ನಿರ್ದೇಶಕ ಬಸವರಾಜು ಎಸ್. ಮಾತನಾಡಿ, ಜಿಲ್ಲೆಗಳ ಮಾನವ ಅಭಿವೃದ್ಧಿ 2025 ಸಿದ್ಧಪಡಿಸಲು ಎಲ್ಲಾ 31 ಜಿಲ್ಲೆಗಳಲ್ಲಿಯೂ ತರಬೇತಿ ನಡೆಸಲಾಗುವುದು. ಆರೋಗ್ಯ, ಶಿಕ್ಷಣ ಹಾಗೂ ಜನಗಳ ಜೀವನ ಮಟ್ಟದ ಮೇಲೆ ಅಭಿವೃದ್ಧಿಯ ಅಂಶಗಳು ಒಳಪಟ್ಟಿದೆ. 2015ರ ನಂತರ ಈ ಕುರಿತು ವರದಿ ಮಂಡನೆಯಾಗಿಲ್ಲ. ವಿವಿಧ ಮುಖ್ಯ ಇಲಾಖೆಗಳ ಜೊತೆಗೂಡಿ ಈ ವರದಿಯನ್ನು ತಯಾರಿಸಲು ಸಹಕರಿಸಬೇಕು ಎಂದು ಕೋರಿದರು.
ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳು ಜನಸಾಮಾನ್ಯರ ಮೇಲೆ ಬೀರಿರುವ ಪ್ರಭಾವ, ಜಿಲ್ಲೆ ಅಳವಡಿಸಿಕೊಂಡಿರುವ ಉತ್ತಮ ಅಭ್ಯಾಸಗಳು, ಇತರ ಜಿಲ್ಲೆಗಳಿಂದ ತೆಗೆದುಕೊಳ್ಳಬಹುದಾದ ಒಳ್ಳೆಯ ಮಾದರಿಗಳು ಸಹ ಅಭಿವೃದ್ಧಿ ದೃಷ್ಟಿಯಿಂದ ಮುಖ್ಯವೆನಿಸಿವೆ. ಆದ್ಯಾಗಿಯೂ ಲಿಂಗ ತಾರತಮ್ಯ, ನಿರುದ್ಯೋಗ, ಬಡತನ ಜನರನ್ನು ಕಾಡುತ್ತಿದೆ. ಈ ವರದಿ ಸಲ್ಲಿಸುವ ಕುರಿತು ಜಿಲ್ಲಾ ಮಟ್ಟದಲ್ಲಿಯೂ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತ ಸಿಇಒ ನೇತೃತ್ವದಲ್ಲಿ ಸಮಿತಿ ಸಹ ರಚಿಸಲಾಗಿದೆ. ಇದರಿಂದ ಅಭಿವೃದ್ಧಿ ಪೂರಕವಾದ ಅಂಶಗಳು ಬೆಳಕಿಗೆ ಬರುತ್ತದೆ ಎಂದರು.
ವಸ್ತುಸ್ಥಿತಿ ವರದಿಗೆ ಸಹಕಾರ ಅಗತ್ಯ: ಜಿಲ್ಲಾ ಮಾನವ ಅಭಿವೃದ್ಧಿ ವರದಿಗೆ ಅತ್ಯಂತ ಮಹ್ವತ್ವವಾದ ಮೌಲ್ಯವಿದೆ. ಇದು ದೀರ್ಘ, ಆರೋಗ್ಯಕರ ಮತ್ತು ಸೃಜನಾತ್ಮಕ ಜೀವನ ನಡೆಸಲು, ಶಿಕ್ಷಣ ಪಡೆಯಲು ಮತ್ತು ಯೋಗ್ಯ ಜೀವನ ಮಟ್ಟಕ್ಕೆ ಬೇಕಾದ ಸಂಪನ್ಮೂಲಗಳನ್ನು ಹೊಂದಲು ಅವಕಾಶ ನೀಡುತ್ತದೆ. ಹಾಗಾಗಿ ಅಧಿಕಾರಿಗಳು ತಾವು ತಯಾರಿಸುವ ವರದಿಯಿಂದ ಜಿಲ್ಲೆಯ ಅಭಿವೃದ್ಧಿ ಅವಲಂಬಿತವಾಗಿರುತ್ತದೆ. ವಸ್ತುಸ್ಥಿತಿ ವರದಿ ತಯಾರಿಕೆಗೆ ಅಧಿಕಾರಿಗಳ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿ ಡಾ.ಟಿ.ರೋಣಿ, ಕರ್ನಾಟಕ ವಿಶ್ವವಿದ್ಯಾಲಯದ ಲೀಡ್ ಏಜೆನ್ಸಿ ಡಾ.ಜಗದ್ದೀಶ್, ಡಾ.ಕುಮಾರ್, ಜಿಲ್ಲಾ ಪಂಚಾಯತ್ ಯೋಜನಾ ಅಂದಾಜು ಮತ್ತು ಮೌಲ್ಯ ಮಾಪನಾಧಿಕಾರಿ ರಾಘವೇಂದ್ರ ಕುಲಕರ್ಣಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.

Leave a Reply

Your email address will not be published. Required fields are marked *