ರಾಯಚೂರು ಜನವರಿ 28 (ಕರ್ನಾಟಕ ವಾರ್ತೆ): ಬೇಸಿಗೆ ಆರಂಭವಾಗುತ್ತಿದ್ದು, ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನಿಗಾ ವಹಿಸಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಈಶ್ವರ ಕಾಂದೂ ಅವರು ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಜನವರಿ 28ರಂದು ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಕೆರೆಗಳನ್ನು ಭರ್ತಿ ಮಾಡಬೇಕು. ಬೋರ್‌ವೆಲ್‌ಗಳ ಇಳುವರಿ ಪರಿಶೀಲಿಸಬೇಕು. ಅಗತ್ಯ ಬಿದ್ದಲ್ಲಿ ಹೊಸ ಬೋರ್‌ವೆಲ್‌ಗಳನ್ನು ಕೊರೆಯಿಸಬೇಕು. ನೀರಿನ ತೊಟ್ಟಿಗಳನ್ನು ಶುಚಿಗೊಳಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆಗೆ ಗಮನಹರಿಸಬೇಕು. ಜಲ ಮೂಲಗಳಿಂದ ಯಾವುದಾದರೂ ಅಹಿತಕರ ಘಟನೆ ನಡೆದರೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ತಾಲೂಕು ಪಂಚಾಯ್ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಬೋರ್‌ವೆಲ್‌ಗಳ ಮರು ಪೂರಣಕ್ಕೆ ನರೇಗಾ ಯೋಜನೆಯಡಿ 2026-27ನೇ ಸಾಲಿನ ಕ್ರಿಯಾ ಯೋಜನೆಯಲ್ಲಿ ಸೇರ್ಪಡೆ ಮಾಡಿಕೊಳ್ಳಬೇಕು. ಜೆಜೆಎಂ ಮತ್ತು ಜಲಧಾರೆ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಈ ಬಗ್ಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದರು.
ಸ್ವ-ಸಹಾಯ ಗುಂಪುಗಳನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಕುಕ್ಕುಟ ಸಂಜೀವಿನಿ ಯೋಜನೆ ಆರಂಭಿಸುತ್ತಿದ್ದು, ಶಾಲೆ, ಅಂಗನವಾಡಿ, ಹಾಸ್ಟೆಲ್‌ಗಳಿಗೆ ಮಹಿಳಾ ಒಕ್ಕೂಟದಿಂದ ಮೊಟ್ಟೆ ಪೂರೈಸಬೇಕು. ಪ್ರತಿಯೊಂದು ಗ್ರಾಮ ಪಂಚಾಯತಿ 2026-27ನೇ ಸಾಲಿನ ನರೇಗಾ ಕ್ರಿಯಾ ಯೋಜನೆಯಲ್ಲಿ ಕಡ್ಡಾಯವಾಗಿ ಕುಕ್ಕುಟ ಶೆಡ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ದಿನ ಬಳಕೆಯ ವಸ್ತುಗಳ ಮಾರಾಟಕ್ಕೆ ತಾಲೂಕು ಕೇಂದ್ರದಲ್ಲಿ ಸಂಜೀವಿನಿ ಮಾರ್ಟ್ ನಿರ್ಮಿಸುತ್ತಿದ್ದು, ಒಕ್ಕೂಟದವರು ನಿರ್ವಹಿಸಲಿದ್ದಾರೆ. ಇದೇ ಮಾದರಿಯಲ್ಲಿ ವಿವಿಧ ಚಟುವಟಿಕೆಗೆ ಅಗತ್ಯ ಸಹಕಾರ ಒದಗಿಸಿದರೆ, ಮಹಿಳೆಯರು ಆರ್ಥಿಕವಾಗಿ ಸದೃಢರಾಗಲಿದ್ದಾರೆ ಎಂದರು.
ಕುಡಿಯುವ ನೀರು ಪೂರೈಕೆ, ಗ್ರಂಥಾಲಯ, ಬೀದಿ ದೀಪಗಳ ನಿರ್ವಹಣೆ, ಜಲ ಮೂಲಗಳ ಸ್ವಚ್ಛತೆ ಸೇರಿ ಇನ್ನೀತರ ಮೂಲ ಸೌಕರ್ಯಗಳ ಒದಗಿಸುವಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮುತುವರ್ಜಿ ವಹಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಸಿಇಓ ಅವರು ಸೂಚನೆ ನೀಡಿದರು.
ಈ ವೇಳೆ ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಪೂಜೇರಿ, ಮುಖ್ಯ ಲೆಕ್ಕಾಧಿಕಾರಿ ವಿಜಯಶಂಕರ್, ತಾಲೂಕು ಪಂಚಾಯತ್‌ಗಳ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.

