ರಾಯಚೂರು ಜನವರಿ 28 (ಕರ್ನಾಟಕ ವಾರ್ತೆ): ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗಾಗಿ ರಾಜ್ಯ ಸರ್ಕಾರ ರೂಪಿಸಿರುವ ಕಾರ್ಯಕ್ರಮಗಳ ಕುರಿತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ರೂಪಿಸಿರುವ ಮಾಹಿತಿ ಪ್ರದರ್ಶನ ಮಳಿಗೆಗೆ ರಾಯಚೂರು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಪಾಮಯ್ಯ ಮುರಾರಿ ಅವರು ಚಾಲನೆ ನೀಡಿದರು.
ಲಿಂಗಸೂರು ಕೇಂದ್ರ ಬಸ್ ನಿಲ್ದಾಣದಲ್ಲಿ ಜನವರಿ 28ರಂದು ನಡೆದ ಕಾರ್ಯಕ್ರಮದಲ್ಲಿ ರಿಬ್ಬನ್ ಕತ್ತರಿಸುವ ಮೂಲಕ ಮಳಿಗೆಯನ್ನು ಉದ್ಘಾಟಿಸಿದರು. ಇದೆ ವೇಳೆ, ಸಾಂಪ್ರದಾಯಿಕ ಮಾದರಿಯಲ್ಲಿ ಸಿದ್ಧಪಡಿಸಿದ್ದ ದೀಪ ಪ್ರಜ್ವಲನೆ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಮಾತನಾಡಿದ ಪಾಮಯ್ಯ ಮುರಾರಿ ಅವರು, ಶಕ್ತಿ, ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜೊತೆಗೆ ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನರ ಕಲ್ಯಾಣಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನ ಮಾಡುತ್ತಿದೆ. ಎಸ್ಸಿಪಿ ಟಿಎಸ್ಪಿ ಪ್ರತಿಭಾವಂತರಿಗೆ ಪ್ರೋತ್ಸಾಹ ಧನ, ಲೀಡ್ಕರ್ ಅನುಷ್ಠಾನ ಕಾರ್ಯಕ್ರಮ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ವಿವಿಧ ನಿಗಮಗಳ ಅನುಷ್ಠಾನ ಸೇರಿದಂತೆ ನಾನಾ ಕಾರ್ಯಕ್ರಮಗಳನ್ನು ರಾಜ್ಯ ಸರ್ಕಾರವು ಅಚ್ಚುಕಟ್ಟಾಗಿ ಜಾರಿ ಮಾಡುತ್ತಿದೆ ಎಂದು ತಿಳಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಗವಿಸಿದ್ದಪ್ಪ ಹೊಸಮನಿ ಅವರು ಪ್ರಾಸ್ತಾವಿಕ ಮಾತನಾಡಿ, ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ 2025ರ ಆಗಸ್ಟ್ 16ರಂದು ನಡೆದ ಅನುಸೂಚಿತ ಜಾತಿ ಅನುಸೂಚಿತ ಪಂಗಡಗಳ ರಾಜ್ಯ ಅಭಿವೃದ್ಧಿ ಪರಿಷತ್ ಸಭೆಯಲ್ಲಿ ಅನುಮೋದಿಸಿದಂತೆ, 2025-26ನೇ ಸಾಲಿನ ಎಸ್ಸಿಪಿ ಟಿಎಸ್ಪಿ ಕ್ರಿಯಾಯೋಜನೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನರಿಗಾಗಿ ಸರ್ಕಾರ ರೂಪಿಸಿರುವ ಕಾರ್ಯಕ್ರಮಗಳ ಕುರಿತಂತೆ ರಾಜ್ಯದ ವಿವಿಧೆಡೆಯ ಆಯ್ದ ಬಸ್ ನಿಲ್ದಾಣಗಳಲ್ಲಿ ನಡೆದಂತೆ ಲಿಂಗಸೂರು ಬಸ್ ನಿಲ್ದಾಣದಲ್ಲಿ ಸಹ ಪ್ರಚಾರ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜನವರಿ 30ರವರೆಗೆ ಪ್ರಚಾರ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ರೂಪಿಸಿರುವ ಮಾಹಿತಿ ಪ್ರದರ್ಶನ ಮಳಿಗೆಯು ಲಿಂಗಸೂರು ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಜನವರಿ 28 ರಿಂದ ಜನವರಿ 30ರವರೆಗೆ ಇರುತ್ತದೆ. ಸಾರ್ವಜನಿಕರು ಜನಾಕರ್ಷಣೀಯ ಈ ಮಳಿಗೆಗೆ ಭೇಟಿ ನೀಡಿ ವಿವಿಧ ಗ್ಯಾರಂಟಿ ಯೋಜನೆಗಳು ಮತ್ತು ಎಸ್ಸಿಪಿ ಹಾಗೂ ಟಿಎಸ್ಪಿ ಯೋಜನೆಗಳ ಅನುಷ್ಠಾನದ ಯಶೋಗಾಥೆಯ ಚಿತ್ರಣವನ್ನು ವೀಕ್ಷಣೆ ಮಾಡಬಹುದಾಗಿದೆ ಎಂದು ಇದೆ ವೇಳೆ ಗವಿಸಿದ್ದಪ್ಪ ಅವರು ಲಿಂಗಸೂರು ತಾಲೂಕಿನ ಜನತೆಯಲ್ಲಿ ಮನವಿ ಮಾಡಿದರು.
ಫೆ.1ರಿಂದ ದೇವದುರ್ಗದಲ್ಲಿ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ರೂಪಿಸಿರುವ ಈ ಮಾಹಿತಿ ಪ್ರದರ್ಶನ ಮಳಿಗೆಯು ಫೆ.1ರಿಂದ ಫೆ.3ರವರೆಗೆ ದೇವದುರ್ಗ ಪಟ್ಟಣದ ಕೇಂದ್ರ ಬಸ್ ನಿಲ್ದಾಣದಲ್ಲಿ ಅಳವಡಿಸಲಾಗುವುದು ಎಂದು ಗವಿಸಿದ್ದಪ್ಪ ಅವರು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಭೂಪನಗೌಡ ಕರಡಕಲ್, ಟಿಎಪಿಸಿಎಂಎಸ್‌ನ ಅಧ್ಯಕ್ಷರಾದ ಶಶಿಧರ ಪಾಟೀಲ, ಲಿಂಗಸೂರ ಕೇಂದ್ರ ಬಸ್ ನಿಲ್ದಾಣದ ಸಂಚಾರಿ ನಿಯಂತ್ರಕರಾದ ಸಂಗಪ್ಪ, ಸಾರಿಗೆ ನಿಯಂತ್ರಕರಾದ ಮೆಹಬೂಬಿ, ಬಸವಂತಪ್ಪ, ಅಮರಪ್ಪ, ಬಸಣ್ಣ ಸೇರಿದಂತೆ ಸಾರ್ವಜನಿಕರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಇತರರು ಇದ್ದರು.



