ರಾಯಚೂರು ಜನವರಿ 28 (ಕರ್ನಾಟಕ ವಾರ್ತೆ): ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವವು ಯಶಸ್ವಿಯಾಗಿ ನಡೆಯುವ ನಿಟ್ಟಿನಲ್ಲಿ ರಾಯಚೂರು ಸಿಟಿಯು ಸುಂದರವಾಗಿ ಕಾಣಬೇಕು. ಈ ದಿಶೆಯಲ್ಲಿ ಯೋಚಿಸಿ ಪ್ರತಿಯೊಬ್ಬ ಪೌರ ಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ಸಕ್ರಿಯ ಭಾಗಿಯಾಗಬೇಕು ಎಂದು ರಾಯಚೂರು ಮಹಾನಗರ ಪಾಲಿಕೆ ಆಯುಕ್ತರಾದ ಜುಬಿನ್ ಮೋಹಪಾತ್ರ ಅವರು ಹೇಳಿದರು.
ನಗರದ ಜೈಲ್‌ಖಾನ್ ಬಳಿಯಲ್ಲಿರುವ ಮಹಿಳಾ ಸಮಾಜ ಮೈದಾನದಲ್ಲಿ ಜನವರಿ 28ರಂದು ಪೌರ ಕಾರ್ಮಿಕರ ಸಭೆ ನಡೆಸಿ ಅವರು ಮಾತನಾಡಿದರು.
ಶುಚಿತ್ವ ಇದ್ದಲ್ಲಿ, ಶಿಸ್ತು ಇದ್ದಲ್ಲಿ ಶಾಂತಿ ಇರುತ್ತದೆ. ಈ ದಿಶೆಯಲ್ಲಿ ನಾವೆಲ್ಲರೂ ಯೋಚಿಸಿ ಉತ್ಸವದ ನಿಗದಿಯಾದ ಈ ಸಂದರ್ಭದಲ್ಲಿ ನಮ್ಮ ನಮ್ಮ ಮನೆ, ಮನೆಯ ಸುತ್ತಲಿನ ಪರಿಸರ, ರಸ್ತೆ, ಗಟಾರು, ಸಾರ್ವಜನಿಕ ಸ್ಥಳಗಳು ಸೇರಿದಂತೆ ವಿವಿಧೆಡೆಯಲ್ಲಿ ಶುಚಿತ್ವಕ್ಕೆ ಒತ್ತು ಕೊಡಬೇಕು. ರಾಯಚೂರು ಜಿಲ್ಲಾ ಉತ್ಸವಕ್ಕೆ ಅತಿಥಿಗಳಾಗಿ ಆಮಿಸುವ ಜನತೆಗೆ ರಾಯಚೂರು ನಗರವು ಸುಂದರವಾಗಿ ಕಾಣುವಂತಾಗಬೇಕು. ಜನತೆಗೆ ಸ್ವಚ್ಛತೆಯ ಸಂದೇಶ ರವಾನೆಯಾಗಬೇಕು. ರಾಯಚೂರ ನಗರವನ್ನು ಸ್ವಚ್ಚ ನಗರವೆಂದು ಜನರು ಕೊಂಡಾಡುವಂತೆ ಮಾಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಆಯುಕ್ತರು ಪೌರ ಕಾರ್ಮಿಕರಿಗೆ ಸ್ವಚ್ಛತೆಯ ಪಾಠ ಮಾಡಿದರು.
ರಾಯಚೂರು ಉತ್ಸವಕ್ಕೆ ಇನ್ನು ಒಂದು ವಾರ ಮಾತ್ರ ಬಾಕಿ ಇದೆ. ಈಗಾಗಲೇ ನಗರದಲ್ಲಿ ಕಸ ಸಂಗ್ರಹ ಸ್ಥಳಗಳಲ್ಲಿ ನಿತ್ಯ ಕಸ ವಿಲೆವಾರಿ ನಡೆಯುತ್ತಿದೆ. ನಿತ್ಯ ಮನೆ ಮನೆ ಕಸ ಸಂಗ್ರಹ, ಕಾರ್ಖಾನೆ, ಆಸ್ಪತ್ರೆ ಸೇರಿದಂತೆ ಎಲ್ಲಾ ಕಡೆಗಳಲ್ಲಿ ಕಸ ವಿಲೇವಾರಿ ನಡೆಯುತ್ತಿದೆ. ಬೇರೆ ಬೇರೆ ಕಡೆಗಳಲ್ಲಿ ಸ್ವಚ್ಚತೆ ಕಾಣಲಾರಂಭಿಸಿದೆ. ಈ ಕೆಲಸ ನಿರಂತರ ಮುಂದುವರೆಯಬೇಕು ಎಂದು ಸೂಚನೆ ನೀಡಿದರು.
ಉತ್ಸವಕ್ಕೂ ಮುಂಚಿತವಾಗಿ ಪ್ರತಿಯೊಬ್ಬರು ಸ್ವಚ್ಚತೆಯ ಕಡೆಗೆ ಮೊದಲ ಆದ್ಯತೆ ನೀಡಬೇಕು. ರಾಜ್ಯ, ಅಂತಾರಾಜ್ಯ, ಮಟ್ಟದ ಕಲಾವಿದರು ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಲಿದ್ದಾರೆ. ಅವರಿಗೆ ರಾಯಚೂರು ಸ್ವಚ್ಚ ನಗರವೆಂದು ತೋರಿಸಿಕೊಡಬೇಕಾಗಿದೆ.
ಪ್ರಮುಖವಾಗಿ ಮುಖ್ಯ ರಸ್ತೆಗಳು, ಮುಖ್ಯ ರಸ್ತೆಗಳಲ್ಲಿರುವ ರಾಜ ಕಾಲುವೆಗಳಿಂದ ದುರ್ವಾಸನೆ ಬೀರದಂತೆ ಬೀಚಿಂಗ್ ಪೌಡರ್ ಸಿಂಪಡಣೆ ಮಾಡಬೇಕು. ಯಾವುದೇ ಕಡೆಗಳಲ್ಲಿ ಕಸ ಕಾಣಿಸಬಾರದು. ಉತ್ಸವ ಕಾರ್ಯಕ್ರಮಗಳು ನಿಗದಿಯಾದ ಶ್ರೀ ಪಂಡಿತ ಸಿದ್ಧರಾಮ ಜಂಬಲದಿನ್ನಿ ಜಿಲ್ಲಾ ರಂಗಮಂದಿರ, ಜೈಲ್ ಖಾನ್ ಬಳಿಯ ಮಹಿಳಾ ಸಮಾಜ ಆವರಣ, ಕೃಷಿ ವಿಜ್ಞಾನ ವಿಶ್ವವಿದ್ಯಾಲಯ, ವಾಲ್‌ಕಟ್ ಮೈದಾನ, ಜಿಲ್ಲಾ ಕ್ರೀಡಾಂಗಣದ ಒಳಾಂಗಣ ಮತ್ತು ಹೊರಾಂಗಣದಲ್ಲಿ ಈಗಿನಿಂದಲೇ ಶುಚಿತ್ವ ಕಾರ್ಯ ನಡೆಯಬೇಕು. ಈ ಎಲ್ಲ ಕಡೆಗೆ ಸಹ ಪ್ರತಿ ದಿನ ಶುಚಿತ್ವ ಕಾರ್ಯವಾಗಬೇಕು ಎಂದು ಆಯುಕ್ತರು ಸೂಚನೆ ನೀಡಿದರು. ಬೇರೆ ಬೇರೆ ಕಡೆಗಳಲ್ಲಿ ಫಾಗಿಂಗ್ ಮಾಡಬೇಕು. ಎಲ್ಲೆಂದರಲ್ಲಿ ಕಸ ಎಸೆಯದಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಮೈಸೂರು, ಮಂಗಳೂರು ಸೇರಿದಂತೆ ಕೆಲ ನಗರಗಳು ಸ್ವಚ್ಚತೆಗೆ ಹೆಸರುವಾಸಿಯಾಗಿದೆ. ಅವುಗಳ ಸಾಲಿನಲ್ಲಿ ರಾಯಚೂರು ಸಹ ಸೇರುವ ಹಾಗೆ ರಾಯಚೂರನ್ನು ಸ್ವಚ್ಚ ನಗರವೆಂದು ತೋರಿಸಿಕೊಡಲು ರಾಯಚೂರು ಉತ್ಸವ ಒಂದು ಅವಕಾಶವಾಗಿದ್ದು, ಇದನ್ನು ಸವಾಲಾಗಿ ಸ್ವೀಕರಿಸಿ ಕೆಲಸ ಮಾಡಬೇಕು. ಪ್ರತಿಯೊಬ್ಬರು ಸ್ವಚ್ಛತೆಯ ಕಾರ್ಯವನ್ನು ನಮ್ಮ ಮನೆಯ ಕೆಲಸವೆಂದು ಭಾವಿಸಿ ಜವಾಬ್ದಾರಿ ತೆಗೆದುಕೊಳ್ಳಬೇಕು. ಆಗ ಮಾತ್ರ ಸ್ವಚ್ಚ ನಗರ ಸಾಲಿನಲ್ಲಿ ನಮ್ಮ ಜಿಲ್ಲೆ ಗುರುತಿಸಲು ಸಾಧ್ಯವಾಗುತ್ತದೆ ಎಂದರು.
ಪೌರ ಕಾರ್ಮಿಕರ ಮೇಲೆ ಸರಿಯಾಗಿ ಮೇಲ್ವಿಚಾರಣೆ ಮಾಡಲು ಇದೆ ವೇಳೆ ಆಯುಕ್ತರು, ಪಾಲಿಕೆಯ ಪರಿಸರ ಅಭಿಯಂತರರು ಮತ್ತು ಪರಿಸರ ನಿರೀಕ್ಷರಿಗೆ ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಪರಿಸರ ವಿಭಾಗದ ಅಭಿಯಂತರರಾದ ಜೈಪಾಲ್ ರೆಡ್ಡಿ, ಉಪ ಆಯುಕ್ತರಾದ ಮಲ್ಲಿಕಾರ್ಜುನ ಸೇರಿದಂತೆ ಪೌರ ಕಾರ್ಮಿಕರು, ಪಾಲಿಕೆಯ ವಿವಿಧ ಅಧಿಕಾರಿಗಳು ಇದ್ದರು.


