ರಾಯಚೂರು ಜನವರಿ 28 (ಕರ್ನಾಟಕ ವಾರ್ತೆ): ರಾಯಚೂರು ಜಿಲ್ಲಾ ಉತ್ಸವದ ನೂತನ ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯ ಕಾರ್ಯದರ್ಶಿಗಳು ಮತ್ತು ಸದಸ್ಯರ ಹಾಗೂ ಸಮನ್ವಯ ಅಧಿಕಾರಿಗಳ ಸಭೆಯು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರ ಅಧ್ಯಕ್ಷತೆಯಲ್ಲಿ ನೂತನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜನವರಿ 28ರಂದು ನಡೆಯಿತು.
ಈ ಸಭೆಯಲ್ಲಿ ಭಾಗಿಯಾಗಿದ್ದ ಹಿರಿಯ ರೈತ ಮುಖಂಡರಾದ ಚಾಮರಸ ಪಾಟೀಲ, ಕರ್ನಾಟಕ ಸಂಘದ ಅಧ್ಯಕ್ಷರಾದ ಕೆ.ಶಾಂತಪ್ಪ, ಹೋರಾಟಗಾರರಾದ ಬಸವರಾಜ ಕಳಸ ಸೇರಿದಂತೆ ಇನ್ನೀತರರು ಮಾತನಾಡಿ, ರಾಯಚೂರು ಜಿಲ್ಲಾ ಉತ್ಸವದ ಮೊದಲನೇ ಸಾರ್ವಜನಿಕ ಸಭೆಯಲ್ಲಿ ಕೇಳಿ ಬಂದ ಬಲವಾದ ಅಭಿಪ್ರಾಯದಂತೆ ಜಿಲ್ಲಾಡಳಿತವು ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಗಣ್ಯರು ಮತ್ತು ಇನ್ನೀತರ ಮಹನಿಯರ ಒಳಗೊಂಡು ಹೊಸ ಸಮಿತಿಗಳನ್ನು ರಚಿಸಿದ್ದು ಅತ್ಯಂತ ಸ್ವಾಗತಾರ್ಹ ಕ್ರಮವಾಗಿದೆ. ಈ ಸಮಿತಿಯ ಸದಸ್ಯರಾದ ನಾವು ಉತ್ಸವದ ಕಾರ್ಯದಲ್ಲಿ ಭಾಗಿಯಾಗುತ್ತೇವೆ. ಈ ಸಮಿತಿಗಳಲ್ಲಿನ ಅಧಿಕಾರಿಗಳು ನಮ್ಮೆಲ್ಲರನ್ನು ವಿಶ್ವಾಸಕ್ಕೆ ಪಡೆದು ಕಾರ್ಯನಿರ್ವಹಿಸಬೇಕು ಎಂದು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಮೊದಲಿಗೆ ವಿವಿಧ ಸಮಿತಿಗಳಲ್ಲಿ ಸದಸ್ಯರು ಉತ್ಸವದ ಕುರಿತು ನಾನಾ ಸಲಹೆ ನೀಡಿದರು. ರಾಯಚೂರು ಉತ್ಸವದ ನಿಮಿತ್ತ ಜಿಲ್ಲಾಡಳಿತವು ಜ್ಯೋತಿ ರಥಯಾತ್ರೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಉತ್ತಮ ಪ್ರಯತ್ನವಾಗಿದೆ. ಈ ಕಾರ್ಯಕ್ರಮದಲ್ಲಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಬೇಕು ಎಂದು ಕರ್ನಾಟಕ ಸಂಘದ ಕೆ.ಶಾಂತಪ್ಪ ಅವರು ಸಲಹೆ ಮಾಡಿದರು.
ಉತ್ಸವದಲ್ಲಿ ಪ್ಲಾಸ್ಟಿಕ್ ಬಳಕೆ ಮಾಡಬಾರದು ಎಂದು ರೈತ ಸಂಘದ ಮುಖಂಡರದ ಅನಿತಾ ಅವರು ಸಲಹೆ ಮಾಡಿದರು. ರಸ್ತೆಗಳಲ್ಲಿ ಅಳವಡಿಸಿದ ಅಲಂಕೃತ ಬಟ್ಟೆಯನ್ನು ಸರಿಪಡಿಸಬೇಕು ಎಂದು ಕನ್ನಡಪರ ಸಂಘಟನೆಯ ಅಶೋಕ ಜೈನ್ ಅವರು ತಿಳಿಸಿದರು.
ಉತ್ಸವಕ್ಕೆ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳ ಸಹಕಾರ ಪಡೆದುಕೊಳ್ಳಲು ಹೊಸ ಸಮಿತಿಗಳನ್ನು ರಚಿಸಿದ್ದು ಅತ್ಯಂತ ಸ್ವಾಗತಾರ್ಹ ಕ್ರಮವಾಗಿದೆ. ಈ ಸಮಿತಿಗಳಲ್ಲಿನ ಅಧಿಕಾರಿಗಳು ನಮಗೆ ಸಂಪರ್ಕಿಸಿ ಆಯಾ ಸಮಿತಿಗಳ ಹಂತದಲ್ಲಿ ಮೇಲಿಂದ ಮೇಲೆ ಸಭೆಗಳು ನಡೆದು ಕೆಲಸ ಹಂಚಿಕೆ ಕಾರ್ಯವಾಗಬೇಕು ಎಂದು ಮಠಮಾರಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಹುಸೇನ್ ಅವರು ಸಲಹೆ ಮಾಡಿದರು.
ಉತ್ಸವದಲ್ಲಿ ಬಹಳಷ್ಟು ಜನರು ಸೇರಲಿದ್ದು ಸಾಮಾನ್ಯ ಜನರು ಸಹ ಖರೀದಿಸಿ ಉಪಹಾರ ಊಟ ಮಾಡಲು ಅನುಕೂಲವಾಗುವಂತೆ ಕಡಿಮೆ ದರವನ್ನು ನಿಗದಿಪಡಿಸಬೇಕು ಎಂದು ಮುಖಂಡರಾದ ವಸಂತಕುಮಾರ ಅವರು ಸಭೆಗೆ ಸಲಹೆ ಮಾಡಿದರು.
ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳ ಬ್ಯಾನರ್ ಸಹ ಉತ್ಸವದಲ್ಲಿ ಅಳವಡಿಸಿ ಜನತೆಗೆ ಸ್ವಾಗತ ಕೋರಲು ಅನುವು ಮಾಡಿಕೊಡಬೇಕು ಎಂದು ರವಿ ಜಲ್ದಾರ ಅವರು ತಿಳಿಸಿದರು.
ಉತ್ಸವದಲ್ಲಿ ಭಾಗಿಯಾಗುವ ಜನತೆಗೆ ಆರೋಗ್ಯದಲ್ಲಿ ಏನಾದರು ಏರುಪೇರುಗಳಾದಲ್ಲಿ ಕೂಡಲೇ ಚಿಕಿತ್ಸೆ ಸಿಗುವ ಹಾಗೆ ಉತ್ಸವದ ವಿವಿಧ ಸ್ಥಳದಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರಗಳನ್ನು ತೆರೆಯಬೇಕು ಎಂದು ಶಶಿಕಲಾ ಭೀಮರಾಯ ಅವರು ಸಲಹೆ ಮಾಡಿದರು.
ಗ್ರಾಮೀಣ ಭಾಗದಲ್ಲಿನ ಜನತೆಗೂ ಉತ್ಸವದ ಮಾಹಿತಿ ದೊರಕಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಗ್ರಾಮಗಳ ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಉತ್ಸವದ ಬ್ಯಾನರ್ ಅಳವಡಿಸಿ ಪ್ರಚಾರ ನಡೆಸಬೇಕು ಎಂದು ಶ್ರೀದೇವಿ ನಾಯಕ ಅವರು ಸಲಹೆ ಮಾಡಿದರು.
ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ಮಾತನಾಡಿ, ರಾಯಚೂರು ಜಿಲ್ಲಾ ಉತ್ಸವಕ್ಕೆ ಜಿಲ್ಲೆಯ ಎಲ್ಲ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಇನ್ನೀತರರು ಕೈಜೋಡಿಸಿ ಸಹಕಾರ ನೀಡಬೇಕು. ಉತ್ಸವದ ಸಿದ್ಧತೆಯು ಈಗಾಗಲೇ ಶೇ.80ರಷ್ಟು ಪೂರ್ಣವಾಗಿದೆ. ಸಾರ್ವಜನಿಕರೊಂದಿಗೆ ನಡೆಸಿದ ಮೊದಲನೇ ಸಭೆಯಲ್ಲಿ ಕೇಳಿ ಬಂದ ಎಲ್ಲ ಸಲಹೆಗಳನ್ನು ನಾವು ಪರಿಗಣಿಸಿ ಕಾರ್ಯಗತ ಮಾಡಿದ್ದೇವೆ. ಈಗ ಉತ್ಸವಕ್ಕೆ ವಾರದ ಸಮಯವಷ್ಟೇ ಉಳಿದಿದೆ. ಸಂಘ ಸಂಸ್ಥೆಗಳ ಪ್ರತಿನಿಧಿಗಳು, ನಾಗರಿಕರು, ಗಣ್ಯರು, ಬುದ್ಧಿ ಜೀವಿಗಳು, ಸಾಹಿತಿಗಳು, ಕಲಾವಿದರು ಮತ್ತು ಇನ್ನೀತರ ಬೇರೆ ಬೇರೆ ವರ್ಗದವನ್ನು ಉತ್ಸವದ ವಿವಿಧ ಸಮಿತಿಗೆ ಸೇರಿಸಿದ್ದೇವೆ. ಆಯಾ ಸಮಿತಿಗಳಲ್ಲಿನ ಅಧ್ಯಕ್ಷರು ಮತ್ತು ಸದಸ್ಯ ಕಾರ್ಯದರ್ಶಿಗಳು ಹಾಗೂ ಸಮನ್ವಯ ಅಧಿಕಾರಿಗಳು ತಮ್ಮ ಹಂತದಲ್ಲಿ ಸಭೆ ಕರೆದು ಚರ್ಚಿಸಿ ಉತ್ಸವದ ಬೇರೆ ಬೇರೆ ಕಾರ್ಯಗಳ ಹಂಚಿಕೆ ಮಾಡಿಕೊಂಡು ಉತ್ಸವದ ಯಶಸ್ವಿಗೆ ಸಹಕಾರ ನೀಡಬೇಕು ಎಂದು ಕೋರಿದರು.
ಜನರ ಸುರಕ್ಷತೆಗಾಗಿ ಕ್ರಮ: ಉತ್ಸವದಲ್ಲಿ ಯಾವುದೇ ರೀತಿಯಲ್ಲಿ ಕಳ್ಳತನಗಳು ಆಗದಂತೆ ಮತ್ತು ಅವಘಡಗಳು ನಡೆಯದಂತೆ ನೋಡಿಕೊಳ್ಳಲು ಮುಂಜಾಗ್ರತಾ ಕ್ರಮವಾಗಿ ನಗರದ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಕೆ ಕಾರ್ಯ ನಡೆದಿದೆ ಎಂದು ರಾಯಚೂರು ಡಿವೈಎಸ್ಪಿ ಶಾಂತಮೂರ್ತಿ ಅವರು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ, ಲಿಂಗಸುಗೂರು ಸಹಾಯಕ ಆಯುಕ್ತರಾದ ಬಸವಣೆಪ್ಪ ಕಲಶೆಟ್ಟಿ, ರಾಯಚೂರು ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಸಂತೋಷ ರಾಣಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಇದ್ದರು.

Leave a Reply

Your email address will not be published. Required fields are marked *