ರಾಯಚೂರು ಜನವರಿ 26 (ಕರ್ನಾಟಕ ವಾರ್ತೆ): ಭಾರತ ಸಂವಿಧಾನವು ವಿಶ್ವಕ್ಕೆ ಮಾದರಿಯಾದ ಸಂವಿಧಾನವಾಗಿದೆ. ಈ ಸಂವಿಧಾನ ಬದ್ದ ಒಕ್ಕೂಟ ವ್ಯವಸ್ಥೆಯನ್ನು ಉಳಿಸುವ ಕಾರ್ಯವಾಗಬೇಕಿದೆ ಎಂದು ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣಪ್ರಕಾಶ್ ರುದ್ರಪ್ಪ ಪಾಟೀಲ್ ಅವರು ಹೇಳಿದರು.
ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜನವರಿ 26ರಂದು ಜಿಲ್ಲಾಡಳಿತದಿಂದ ನಡೆದ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಸ್ವಾತಂತ್ರ‍್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ ದಿನಾಚರಣೆಗಳು ನಮ್ಮ ಮಹತ್ವದ ರಾಷ್ಟ್ರೀಯ ಹಬ್ಬಗಳಾಗಿವೆ. ಸ್ವಾತಂತ್ರ‍್ಯದ ಬಳಿಕ ನಮ್ಮ ದೇಶದಲ್ಲಿ, ಎಲ್ಲ ರಂಗದಲ್ಲಿ ಸಮಾನತೆ ಸಿಗಬೇಕು ಎಂಬುದು ಮಹಾತ್ಮ ಗಾಂಧೀಜಿ, ಸುಭಾಷಚಂದ್ರ ಬೋಸ್, ಸರ್ದಾರ್ ವಲ್ಲಭಭಾಯಿ ಪಟೇಲ್ ಸೇರಿದಂತೆ ನಮ್ಮ ಅನೇಕ ಮಹನಿಯರ ಸದಾಶಯವಾಗಿತ್ತು. ಆಗ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಂವಿಧಾನ ರಚನೆಯ ಜವಾಬ್ದಾರಿ ವಹಿಸಿದರು. ಬೇರೆ ಬೇರೆ ದೇಶಗಳ ಸುತ್ತಿ, ಸಾಕಷ್ಟು ಅಧ್ಯಯನ ನಡೆಸಿ ಅಂಬೇಡ್ಕರ್ ಅವರು ಸಂವಿಧಾನ ರಚಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು.
ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಈ ನಮ್ಮ ನೆಲದಲ್ಲಿ ಸಾವಿರಾರು ಭಾಷೆಗಳಿವೆ, ಸಂಸ್ಕೃತಿ, ಜನ ಜೀವನ ಪದ್ದತಿಗಳಿವೆ. ಇಂತಹ ಎಲ್ಲ ಜನತೆಗೂ ಸಮಾನ ನ್ಯಾಯ ಸಿಗುವ ಕಾರ್ಯವನ್ನು ಸಂವಿಧಾನ ಶಿಲ್ಪಿ, ಮುತ್ಸದ್ಧಿ ಡಾ.ಬಿ.ಆರ್.ಅಂಬೇಡ್ಕರ ಅವರು ಸಂವಿಧಾನದ ಮೂಲಕ ಮಾಡಿದರು.
ಸಂವಿಧಾನ ರಚನಾ ಸಭೆಯಲ್ಲಿ ಸಂವಿಧಾನದ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಪ್ರತಿ ಶಬ್ದದ ಬಗ್ಗೆಯೂ ಅವಲೋಕನ ನಡೆದಿದೆ. ಸಂವಿಧಾನದ ಪ್ರತಿ ವಿಚಾರಗಳ ಬಗ್ಗೆಯೂ ವರೆಗಲ್ಲಿಗೆ ಹಚ್ಚಿ, ಚರ್ಚಿಸಿ ಎಲ್ಲ ವಿಚಾರಗಳು ಜನಪರವಾಗಿವೆ ಎಂದು ನಿರ್ಧರಿಸಲಾಗಿದೆ. ಪ್ರತಿ ಶಬ್ದ, ಪ್ರತಿ ವಿಚಾರದ ಬಗ್ಗೆ ತಾಸುಗಟ್ಟಲೇ, ಇಡೀ ದಿನ ಚರ್ಚೆಯಾಗಿದೆ. ಅದಕ್ಕಾಗಿಯೇ ನಮ್ಮ ಸಂವಿಧಾನಕ್ಕೆ ದೊಡ್ಡ ಶಕ್ತಿ ಇದೆ. ಸಂವಿಧಾನವನ್ನು ನಾವೆಲ್ಲರೂ ಒಪ್ಪಿಕೊಂಡಿದ್ದೇವೆ. ಈ ಸಂವಿಧಾನ ಸೂಕ್ತ ಎಂದು ನಮಗೆ ನಾವೇ ಅರ್ಪಿಸಿ ಕೊಂಡಿದ್ದೇವೆ; ಸ್ಚೀಕರಿಸಿದ್ದೇವೆ. ಹಾಗಾಗಿ ನಾವೆಲ್ಲರೂ ಸಂವಿಧಾನ ಒಪ್ಪಿಕೊಳ್ಳಬೇಕು. ಈ ಸಂವಿಧಾನದ ಮುಂದೆ ಯಾರೂ ದೊಡ್ಡವರಲ್ಲ ಎಂದು ತಿಳಿಸಿದರು.
ಸಂವಿಧಾನದ ತಳಹದಿಯಲ್ಲಿ ರಚನೆಯಾದ ನಮ್ಮ ಸರ್ಕಾರಗಳು 77 ವರ್ಷ ಗಟ್ಟಿ ಬುನಾದಿ ಹಾಕಿವೆ. ಇದುವರೆಗೆ ನಡೆದ ಪ್ರಗತಿ ಅಪಾರವಾಗಿದೆ. ಸಂವಿಧಾನವು ನಮಗೆಲ್ಲರಿಗೂ ಸರಿಯಾದ ದಿಕ್ಕಿಗೆ ಒಯ್ಯುತ್ತಿದೆ ಎಂಬುದರ ಪ್ರಮಾಣವೇ ಈ ಗಣರಾಜ್ಯೋತ್ಸವ ದಿನಾಚರಣೆಯಾಗಿದೆ ಎಂದರು.
ಸಂವಿಧಾನವು ಹೇಳುವ ಈ ಒಕ್ಕೂಟ ವ್ಯವಸ್ಥೆಯನ್ನು ನಾವು ಉಳಿಸಲೇಬೇಕಿದೆ. ಹಾಗಾಗಿ ಈ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಂದಾಗಿ ಕೆಲಸ ಮಾಡಿದಾಗ ಅಭಿವೃದ್ದಿ ಸಾಧ್ಯವಾಗಲಿದೆ.
ಒಕ್ಕೂಟದ ವ್ಯವಸ್ಥೆಯನ್ನು ನಮ್ಮ ಕೇಂದ್ರ ಸರ್ಕಾರವು ಕಾಪಾಡಬೇಕು ಎಂಬುದು ನನ್ನ ಮನವಿಯಾಗಿದೆ ಎಂದು ತಿಳಿಸಿದ ಸಚಿವರು, ಈ ಒಕ್ಕೂಟದ ವ್ಯವಸ್ಥೆಗೆ ಧಕ್ಕೆ ತರುವ ಕೆಲಸವನ್ನು ಯಾರೂ ಮಾಡಬಾರದು ಎಂದರು.
ಸಂವಿಧಾನಕ್ಕಿಂತ ಯಾರೂ ದೊಡ್ಡವರಲ್ಲ; ಈ ಸಂವಿಧಾನದಡಿ ದೇಶ ಕಟ್ಟುವ ಕಾರ್ಯವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳದ್ದಾಗಿದೆ ಎಂದರು. ನಮ್ಮ ಭಾಗಕ್ಕೆ 371ಜೆ ಕೊಡುಗೆ ಅಪರವಾಗಿದೆ. ಇದರಿಂದಾಗಿ ಈ ಭಾಗದ ಲಕ್ಷಾಂತರ ಮಕ್ಕಳಿಗೆ ಉದ್ಯೋಗ ಲಭಿಸಿದೆ. ಇದುವರೆಗೆ ಕೆಕೆಆರ್ ಡಿಬಿಗೆ 18 ಸಾವಿರ ಕೋಟಿ ರೂ.ಹಣ ಹರಿದು ಬಂದಿದೆ. ಇದು ದೊಡ್ಡ ಸಾಧನೆಯಾಗಿದೆ. ಈ ದಿಶೆಯಲ್ಲಿ ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ ಜಿ ಅವರ ಕೊಡುಗೆ ಗಮನಾರ್ಹವಾಗಿದೆ. ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ ಅವರು ಜನಪರವಾಗಿ ಆಲೋಚಿಸಿ ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಪಂಚ ಗ್ಯಾರಂಟಿ ಯೋಜನೆಯಡಿ ಇದುವರೆಗೆ 1 ಲಕ್ಷ 20 ಸಾವಿರ ಕೋಟಿ ರೂ ಹಣವನ್ನು ನೇರವಾಗಿ ಜನತೆಗೆ ತಲುಪಿಸಿದ ಸಾಧನೆ ತೋರಿದ್ದೇವೆ. ಇಡೀ ದೇಶದಲ್ಲಿ ಸಮೃದ್ದಿ ಹೊಂದಿದ ರಾಜ್ಯ ನಮ್ಮದಾಗಿದೆ ಎಂದರು.
ರಾಯಚೂರು ಜಿಲ್ಲೆಯಲ್ಲಿ ಪಾರದರ್ಶಕ ಆಡಳಿತ ಕೊಡುತ್ತಿದ್ದೇವೆ. ಜನರ ಸದಾಶಯ ಅರಿತು ಕೆಲಸ ಮಾಡುತ್ತಿದ್ದೇವೆ. ವಿಮಾನ ನಿಲ್ದಾಣ ಕಾರ್ಯ ನಡೆಯುತ್ತಿದೆ. ಏಮ್ಸ್ ಸ್ಥಾಪನೆಯ ನಿರ್ಧಾರಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ಕೇಂದ್ರದ ಮೇಲೆ ಮೇಲಿಂದ ಮೇಲೆ ಒತ್ತಡ ಹಾಕುತ್ತಿದ್ದೇವೆ.
ಈ ವೇಳೆ ಶಾಸಕರಾದ ಡಾ.ಎಸ್ ಶಿವರಾಜ ಪಾಟೀಲ ಅವರು ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಬಸನಗೌಡ ದದ್ದಲ್, ಎ ವಸಂತಕುಮಾರ, ಎಪಿಎಂಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಗೌಡ, ಉಪಾಧ್ಯಕ್ಷರಾದ ಬಸೀರ್ ಅಹ್ಮದ್, ಗ್ಯಾರಂಟಿ ಯೋಜನೆಗಳ ಸಮಿತಿಯ ಅಧ್ಯಕ್ಷರಾದ ಪವನ ಕಿಶೋರ ಪಾಟೀಲ, ಜಿಲ್ಲಾಧಿಕಾರಿಗಳಾದ ನಿತೀಶ್ ಕೆ., ಜಿಪಂ ಸಿಇಓ ಈಶ್ವರ್ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ, ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ ಅಪರ ಜಿಲ್ಲಾಧಿಕಾರಿ ಶಿವಾನಂದ, ಸಹಾಯಕ ಆಯುಕ್ತರಾದ ಡಾ.ಹಂಪಣ್ಣ ಸಜ್ಜನ, ತಹಸೀಲ್ದಾರ ಸುರೇಶ ವರ್ಮಾ ಹಾಗೂ ಜಿಲ್ಲೆಯ ನಾಗರಿಕರು, ಸಂಘ ಸಂಸ್ಥೆಗಳ ಪ್ರಮುಖರು, ಇನ್ನೀತರ ಗಣ್ಯರು, ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಮತ್ತು ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳ ಪಾಲಕರು ಇದ್ದರು.
ಶಿಕ್ಷಕಿಯರಾದ ಯಶೋಧಾ ವೈ.ಬಿ. ಹಾಗೂ ಮಹೇಶ್ವರಿ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.
ಆಕರ್ಷಕ ಪಥ ಸಂಚಲನ: ಧ್ವಜಾರೋಹಣಕ್ಕೆ ಮೊದಲು ಸಚಿವರು, ಸಕಲ ತಂಡಗಳ ಪರಿವೀಕ್ಷಣೆ ಮಾಡಿದರು. ಬಳಿಕ 18 ತಂಡಗಳಿಂದ ಅತ್ಯಂತ ಸುಂದರವಾಗಿ, ಶಿಸ್ತಿನಿಂದ ಶೀಘ್ರ ನಡಿಗೆಯ ಆಕರ್ಷಕ ಪಥ ಸಂಚಲನ ನಡೆಯಿತು. ಬ್ಯಾಂಡ್ ಮಾಸ್ಟರ್ ಯಂಕಪ್ಪ ಹಾಗೂ ತಂಡದವರು ಇದೆ ವೇಳೆ ವಾದ್ಯ ನುಡಿಸಿದರು.
ವಿದ್ಯಾರ್ಥಿಗಳಿಂದ ಆಕರ್ಷಕ ನೃತ್ಯ: ಸಮಾರಂಭದಲ್ಲಿ ನಗರದ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಸುಗ್ಗಿ ಪದ ಸೇರಿದಂತೆ ದೇಶ ಭಕ್ತಿಗೀತೆಗಳಿಗೆ ನೃತ್ಯ ನಡೆಸಿ, ಸೇರಿದ್ದ ಜನಸ್ತೋಮದ ಚಪ್ಪಾಳೆ ಗಿಟ್ಟಿಸಿದರು.



