ಮುದ್ದೇಬಿಹಾಳ :- ತಾಲ್ಲೂಕಿನ ವಿವಿಧ ಇಲಾಖೆಗಳ ಕ್ರಿಯಾ ಯೋಜನೆಗಳನ್ನು ತಕ್ಷಣ ಸಿದ್ಧಪಡಿಸಿ, ಮಂಜೂರಾದ ಅನುದಾನವನ್ನು ಸಮರ್ಪಕವಾಗಿ ಬಳಸುವ ಮೂಲಕ ಬಜೆಟ್ ಲ್ಯಾಪ್ಸ್ ಆಗದಂತೆ ನೋಡಿಕೊಳ್ಳಬೇಕು. ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್ ಅನುದಾನದಡಿ ಕೈಗೊಂಡಿರುವ ಎಲ್ಲಾ ಕಾಮಗಾರಿಗಳ ಭೌತಿಕ ಪ್ರಗತಿಯನ್ನು ಇಲಾಖಾವಾರು ಪರಿಶೀಲಿಸಿ, ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಎಲ್ಲಾ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಾಲ್ಲೂಕು ಆಡಳಿತಾಧಿಕಾರಿಯೂ ಆಗಿರುವ ವಿಜಯಪುರ ಕೃಷಿ ಜಂಟಿ ನಿರ್ದೇಶಕ ಶಿವನಗೌಡ ಎಸ್. ಪಾಟೀಲ ತಿಳಿಸಿದ್ದಾರೆ.
ಪಟ್ಟಣದ ತಾಲ್ಲೂಕು ಪಂಚಾಯತ್ ಸಭಾಭವನದಲ್ಲಿ ಮಂಗಳವಾರ ನಡೆದ 2025–26ನೇ ಸಾಲಿನ ತಾಲ್ಲೂಕು ಪಂಚಾಯತ್ ಕೆಡಿಪಿ ಹಾಗೂ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಒಪ್ಪಿಗೆ ಪಡೆದುಕೊಂಡ ಕಾಮಗಾರಿಗಳನ್ನು ಏಕಾಏಕಿ ಬದಲಾವಣೆ ಮಾಡದೇ, ಅನಿವಾರ್ಯ ಕಾರಣಗಳಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಅನುಮತಿ ಪಡೆದು ಮಾತ್ರ ಬದಲಾವಣೆ ಮಾಡಬೇಕು. ಕಾಮಗಾರಿ ಕೈಗೊಂಡ ಬಳಿಕ ಯಾವುದೇ ಕಾರಣಕ್ಕೂ ವಿಳಂಬಕ್ಕೆ ಅವಕಾಶ ನೀಡಬಾರದು ಎಂದು ಕಟ್ಟುನಿಟ್ಟಾಗಿ ಹೇಳಿದರು.
ಅಧಿಕಾರಿಗಳು ಸಭೆಗೆ ಸಮರ್ಪಕ ಮಾಹಿತಿ ಒದಗಿಸಬೇಕು. ಕೇವಲ ಅಂಕಿ–ಅಂಶಗಳಲ್ಲದೆ ನೆಲಮಟ್ಟದ ವಾಸ್ತವ ಸ್ಥಿತಿಯನ್ನೂ ಸಭೆಗೆ ಸ್ಪಷ್ಟಪಡಿಸಬೇಕು ಎಂದು ಅವರು ಸೂಚಿಸಿದರು.

ಕೃಷಿ ಪರಿಸ್ಥಿತಿ ಮತ್ತು ಬೆಳೆ ಹಾನಿ.

ಸಭೆಯಲ್ಲಿ ಕೃಷಿ ಇಲಾಖೆ ಅಧಿಕಾರಿ ಎಸ್.ಡಿ. ಬಾವಿಕಟ್ಟಿ ಮಾಹಿತಿ ನೀಡುತ್ತಾ, ಮುದ್ದೇಬಿಹಾಳ, ನಾಲತವಾಡ, ಢವಳಗಿ ಹಾಗೂ ತಾಳಿಕೋಟಿ ಭಾಗಗಳಲ್ಲಿ ಗೋಧಿ, ಜೋಳ, ಕಡಲೆ ಸೇರಿದಂತೆ ಹಿಂಗಾರು ಬೆಳೆಗಳು ಉತ್ತಮವಾಗಿ ಬಂದಿವೆ. ಆದರೆ ಕೆಲವೆಡೆ ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸರ್ಕಾರ ಈಗಾಗಲೇ ಬೆಳೆ ವಿಮೆ ಜಮಾ ಮಾಡಿದೆ ಎಂದು ತಿಳಿಸಿದರು.
ತಾಲ್ಲೂಕಿನಲ್ಲಿ ಕಬ್ಬು ಬೆಳೆ ಹೆಚ್ಚಾಗಿದ್ದು, ರಸಗೊಬ್ಬರ ಹಾಗೂ ಬೀಜಗಳ ಕೊರತೆ ಇಲ್ಲ. ಬೇಸಿಗೆ ಹಂಗಾಮಿನಲ್ಲಿ ಶೇಂಗಾ ಬೆಳೆಯಲು ರೈತರು ಮುಂದಾಗಿದ್ದಾರೆ ಎಂದರು.

ನಾಯಿ ಕಡಿತ ಪ್ರಕರಣಗಳ ಏರಿಕೆ.

ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ತಾಲ್ಲೂಕಿನಲ್ಲಿ ನಾಯಿ ಕಡಿತ ಪ್ರಕರಣಗಳು ಆತಂಕಕಾರಿ ಮಟ್ಟ ತಲುಪಿದ್ದು, ಒಟ್ಟು 3,240 ಪ್ರಕರಣಗಳು ವರದಿಯಾಗಿವೆ. ಮುದ್ದೇಬಿಹಾಳದಲ್ಲಿ 1,200, ತಾಳಿಕೋಟಿಯಲ್ಲಿ 840 ಪ್ರಕರಣಗಳು ದಾಖಲಾಗಿದ್ದು, ಢವಳಗಿ, ಹಿರೂರ, ತಮದಡ್ಡಿ ಭಾಗಗಳಲ್ಲೂ ಪ್ರಕರಣಗಳು ಹೆಚ್ಚಿವೆ.
ಹಾವು ಕಡಿತ ಪ್ರಕರಣಗಳು 140ಕ್ಕೆ ಏರಿಕೆಯಾಗಿದೆ. ತಾಳಿಕೋಟಿ ತಾಲ್ಲೂಕಿನ ಶಿವಪುರ ಗ್ರಾಮದಲ್ಲಿ ಆನೆಕಾಲು ರೋಗ ಪತ್ತೆಯಾಗಿದ್ದು, ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಮಲೇರಿಯಾ, ಡೆಂಗ್ಯೂ, ಚಿಕನ್‌ಗುನ್ನಿಯಾ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಟಿಬಿ ಮುಕ್ತ ಗುರಿಯನ್ನೂ ಇಲಾಖೆ ಹಮ್ಮಿಕೊಂಡಿದೆ ಎಂದು ಡಾ. ಎಸ್.ಬಿ. ತಿವಾರಿ ಸಭೆಗೆ ಮಾಹಿತಿ ನೀಡಿದರು.
14–15 ವರ್ಷದ ಶಾಲಾ ಮಕ್ಕಳಿಗೆ ಮುಂಜಾಗ್ರತಾ ಕ್ರಮವಾಗಿ ಉಚಿತ ಕ್ಯಾನ್ಸರ್ ಲಸಿಕೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ನಾಯಿ ಕಡಿತ ಪ್ರಕರಣಗಳ ಹೆಚ್ಚಳದ ಕುರಿತು ಗಂಭೀರವಾಗಿ ಪ್ರತಿಕ್ರಿಯಿಸಿದ ತಾಲ್ಲೂಕು ಆಡಳಿತಾಧಿಕಾರಿ, ಹೈಕೋರ್ಟ್ ಸೂಚನೆಗಳಂತೆ ಬೀದಿ ನಾಯಿಗಳ ನಿಯಂತ್ರಣಕ್ಕೆ ತಕ್ಷಣ ಕ್ರಮ ಕೈಗೊಳ್ಳುವಂತೆ ಪುರಸಭೆ ಮುಖ್ಯಾಧಿಕಾರಿ ವಿನೋದ ಜಿಂಗಾಡೆ ಅವರಿಗೆ ಸೂಚಿಸಿದರು. ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ, ಟೆಂಡರ್ ಪ್ರಕ್ರಿಯೆ ಮೂಲಕ ಕ್ರಮ ಜರುಗಿಸಲಾಗುವುದು ಎಂದು ಸಭೆಗೆ ತಿಳಿಸಿದರು.

ಅಂಗನವಾಡಿ ಆಹಾರ ಅನುದಾನ ಸಮಸ್ಯೆ.

ಅಂಗನವಾಡಿ ಕೇಂದ್ರಗಳಿಗೆ ಸರ್ಕಾರದ ಎಲ್ಲಾ ಯೋಜನೆಗಳು ಜಾರಿಯಲ್ಲಿದ್ದರೂ, ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿ ಪ್ರಾರಂಭವಾದ ಕೆಲವು ಹೊಸ ಅಂಗನವಾಡಿ ಕೇಂದ್ರಗಳಿಗೆ ಆಹಾರ ಅನುದಾನ ಸಂಪೂರ್ಣವಾಗಿ ಬರುತ್ತಿಲ್ಲ ಎಂದು ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಶಿವಮೂರ್ತಿ ಕುಂಬಾರ ಸಭೆಗೆ ಮಾಹಿತಿ ನೀಡಿದರು.

ಕೃಷ್ಣಾ ನದಿಯಲ್ಲಿ ಅಕ್ರಮ ಮೀನುಗಾರಿಕೆ.

ಮದರಿ ಗ್ರಾಮದಿಂದ ಘಾಳಪೂಜಿ ಗ್ರಾಮದ ಕೃಷ್ಣಾ ನದಿ ತೀರದಲ್ಲಿ ಆಂಧ್ರ ಪ್ರದೇಶದಿಂದ ಬಂದಿರುವ ಕೆಲವರು ರಾತ್ರಿ ವೇಳೆ ಅಕ್ರಮ ಮೀನುಗಾರಿಕೆಯಲ್ಲಿ ತೊಡಗಿರುವ ಬಗ್ಗೆ ಮಾಹಿತಿ ಬಹಿರಂಗಪಡಿಸಲಾಯಿತು. ಕಳೆದ ಭಾನುವಾರ ದಿಢೀರ್ ದಾಳಿ ನಡೆಸಿ, ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಬಿರಾದಾರ ತಿಳಿಸಿದರು.
ಸಣ್ಣ ಮೀನುಗಳನ್ನು ಬಲೆ ಬೀಸಿ ಹಿಡಿದುಕೊಂಡು ಹೋಗುತ್ತಿರುವುದರಿಂದ ಮೀನುಗಳ ಸಂತತಿ ಗಣನೀಯವಾಗಿ ಕುಸಿಯುವ ಭೀತಿ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಬೆಳಗಾವಿಯ ಜಂಟಿ ನಿರ್ದೇಶಕರ ಸಹಕಾರದೊಂದಿಗೆ ಅಕ್ರಮ ಅಡ್ಡೆಗಳ ಮೇಲೆ ದಾಳಿ ನಡೆಸಲಾಗಿದೆ. ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದರು.
ನದಿ ತೀರದಲ್ಲಿ ಅನಧಿಕೃತ ಶೆಡ್ ಹಾಗೂ ಟೆಂಟ್‌ಗಳಿಗೆ ಕಡಿವಾಣ ಹಾಕಲು ಗ್ರಾಮ ಪಂಚಾಯತ್ ಪಿಡಿಒಗಳಿಗೆ ಸೂಚನೆ ನೀಡಬೇಕು ಎಂದು ಅವರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ತಾಪಂ ಇಒ ವೆಂಕಟೇಶ್ ವಂದಾಲ, ತಕ್ಷಣವೇ ಪಿಡಿಒಗಳಿಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.

ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಸೂಚನೆ.

ಶಿಕ್ಷಣ ಇಲಾಖೆಯ ಚರ್ಚೆಯಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಬಿಇಒಗೆ ಸೂಚಿಸಲಾಯಿತು. ಸರ್ಕಾರಿ ಶಾಲೆಗಳಲ್ಲಿ ನುರಿತ ಶಿಕ್ಷಕರು ಇದ್ದರೂ ಫಲಿತಾಂಶ ಕಳಪೆಯಾಗುತ್ತಿರುವುದು ಏಕೆ ಎಂಬ ಪ್ರಶ್ನೆ ಸಭೆಯಲ್ಲಿ ಕೇಳಿಬಂತು.
ಇದಕ್ಕೆ ಉತ್ತರಿಸಿದ ಬಿಇಒ ಬಿ.ಎಸ್. ಸಾವಳಗಿ, ಜಿಲ್ಲೆಯಲ್ಲಿ ತಾಲ್ಲೂಕು ಎರಡನೇ ಸ್ಥಾನದಲ್ಲಿದೆ. ಫಲಿತಾಂಶ ಸುಧಾರಣೆಗೆ ಫೋನ್-ಇನ್, ಪಾಸಿಂಗ್ ಪ್ಯಾಕೇಜ್, ಮನೆ ಸಂದರ್ಶನ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು. ಇಂಟರ್ನಲ್ ಅಂಕಗಳನ್ನು ಪೂರ್ಣವಾಗಿ ನೀಡುವಂತೆ ಸೂಚಿಸಲಾಗಿದೆ. ಥಿಯರಿ ಪರೀಕ್ಷೆಯಲ್ಲಿ 80ಕ್ಕೆ 13 ಅಂಕ ಪಡೆದರೂ ವಿದ್ಯಾರ್ಥಿ ಉತ್ತೀರ್ಣರಾಗುವ ಅವಕಾಶವಿದೆ. ಉತ್ತೀರ್ಣತೆಗೆ ಕನಿಷ್ಠ 33 ಅಂಕ ನಿಗದಿಯಾಗಿದೆ ಎಂದು ತಿಳಿಸಿದರು.
ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದ ಫಲಿತಾಂಶ ಕುಸಿತವಾಗಿದೆ ಎಂದು ಮಾಹಿತಿ ನೀಡಿದರು.
ತೋಟಗಾರಿಕೆ ಮಾಹಿತಿ
ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ದೇಶಪಾಂಡೆ ಮಾತನಾಡಿ, ದ್ರಾಕ್ಷಿ, ನಿಂಬೆ ಹಾಗೂ ಈರುಳ್ಳಿ ಕೋಲ್ಡ್ ಸ್ಟೋರೇಜ್‌ಗೆ ಪ್ರತಿ ಘಟಕಕ್ಕೆ 1 ಲಕ್ಷ ರೂ. ಸಹಾಯಧನ ನೀಡಲಾಗುತ್ತಿದೆ ಎಂದರು.
ತಾಲ್ಲೂಕಿನಲ್ಲಿ 250 ಹೆಕ್ಟೇರ್ ಪ್ರದೇಶದಲ್ಲಿ ಅಜವಾನ ಬೆಳೆ ಬೆಳೆಯಲಾಗುತ್ತಿದ್ದು, ಮಾರುಕಟ್ಟೆ ಕೊರತೆಯಿಂದ ರೈತರು ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಅಜವಾನವನ್ನು ಕರ್ನೂಲ್‌ಗೆ ರೈತರೇ ತೆಗೆದುಕೊಂಡು ಹೋಗಬೇಕಾದ ಸ್ಥಿತಿ ಇದೆ ಎಂದು ಸಭೆಗೆ ತಿಳಿಸಿದರು.
ಸಭೆಗೆ ಉಪಸ್ಥಿತಿ ಸಭೆಯಲ್ಲಿ ತಾಪಂ ಇಒ ವೆಂಕಟೇಶ್ ವಂದಾಲ, ತಾಳಿಕೋಟಿ ತಾಪಂ ಇಒ ಅನಸೂಯಾ ಚಲವಾದಿ, ಯೋಜನಾಧಿಕಾರಿ ಪಿ.ಎಸ್. ಕಸನಕ್ಕಿ, ಲೆಕ್ಕಾಧಿಕಾರಿ ವೀರೇಶ ಹೂಗಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಾದ ವಿ.ಎಸ್. ಉತ್ನಾಳ, ಬಸಂತಿ ಮಠ, ಸಿಡಿಪಿಒ ಶಿವಮೂರ್ತಿ ಕುಂಬಾರ, ಶಿವಾನಂದ ಮೇಟಿ ಹಾಗೂ ಇತರರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *