ತಾಳಿಕೋಟೆ:
ತಾಲ್ಲೂಕಿನ ಕಲಕೇರಿ ಗ್ರಾಮ ಪಂಚಾಯತಿ ವತಿಯಿಂದ ದುರಾಡಳಿತ ವಿರುದ್ಧ ಕಲಕೇರಿ ಗ್ರಾಮದ ಕರ್ನಾಟಕ ದಲಿತ ಸಂಘರ್ಷ ಸಮಿತಿ ವಿಜಯಪುರ ಹಾಗೂ ಕಲಕೇರಿ ವಲಯ ಮತ್ತು ಗ್ರಾಮ ಶಾಖೆ ಅಲ್ಪ ಸಂಖ್ಯಾತ ಘಟಕ ವತಿಯಿಂದ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಇರುವ ನೂತನ ಗ್ರಾಮ ಪಂಚಾಯತಿ ವಾಣಿಜ್ಯ ಮಳಿಗೆ ಎದುರು ಶುಕ್ರವಾರ ಅಹೋ ರಾತ್ರಿ ಧರಣಿ ಸತ್ಯಾಗ್ರಹ ಪ್ರಾರಂಭಿಸಿದ್ದರು.
ಹೋರಾಟಗಾರರ ಸ್ಥಳಕ್ಕೆ ತಹಶೀಲ್ದಾರ ಡಾ.ವಿನಯಾ ಹೂಗಾರ ಭೇಟಿ ನೀಡಿ ಚರ್ಚೆ ನಡೆಸಿದರು. ಕಲಕೇರಿ ಗ್ರಾಮ ಪಂಚಾಯತಿ ಅಧ್ಯಕ್ಷ ರಾಜ ಅಹ್ಮದ್ ಸಿರಸಗಿ ಅವರು ಏಳು ದಿನದಲ್ಲಿ ಹೋರಾಟಗಾರರ ಬೇಡಿಕೆಗಳ ಮಾಹಿತಿಯನ್ನು ಪೂರೈಸುವುದಾಗಿ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಹೋರಾಟಗಾರರು ಒಂದು ವಾರದಲ್ಲಿ ತಮಗೆ ಬೇಡಿಕೆ ಈಡೇರದಿದ್ದರೆ ನಾವು ಮತ್ತೆ ಧರಣಿ ಸತ್ಯಾಗ್ರಹ ಮುಂದುವರೆಸುತ್ತೇವೆ ಹಾಗೂ ಕಲಕೇರಿಯಿಂದ ವಿಜಯಪುರದವರೆಗೆ ಪಾದಯಾತ್ರೆ ಮಾಡುವುದಾಗಿ ತಿಳಿಸಿದರು. ನಂತರ ತಮ್ಮ ಧರಣಿಯನ್ನು ಒಂದು ವಾರಕ್ಕೆ ಮುಂದೂಡಿರುವುದಾಗಿ ತಿಳಿಸಿದರು.
ಈ ಸಮಯದಲ್ಲಿ ಡಿ.ಎಸ್.ಎಸ್ ವಿಜಯಪುರ ಜಿಲ್ಲಾ ಸಂಚಾಲಕ ವೈ.ಸಿ. ಮಯೂರ, ವಲಯ ಶಾಖೆ ಸಂಚಾಲಕ ಸೋಮಶೇಖರ ಬಡಿಗೇರ, ಸಂಚಾಲಕ ಯಮನೂರಿ ಸಿಂದಗಿರಿ, ಕಲಕೇರಿ ಅಲ್ಪ ಸಂಖ್ಯಾತರ ಘಟಕದ ಸಂಚಾಲಕ ಮಹಮ್ಮದ ಶಫೀಕ ಮನಿಯಾರ, ಸಮೀರ ಮದೇವಾಲಿ, ಸಮೀರ ಬಿಸನಾಲ, ಇಂತಿಯಾಜ ಹೊರಪೇಟ, ಮಹಿಬುಬ ಚೌಧರಿ, ಸದ್ದಾಮಹುಸೇನ ತುಂಬಗಿ, ಶರೀಫ ಕುರನಳ್ಳಿ, ಪಿರಮಹಮ್ಮದ ಮಲ್ಲಾಡ, ಮಹಿಬೂಬ ಮಲ್ಲಾಡ, ಮಕ್ತುಮಸಾಬ ನಾಯ್ಕೋಡಿ, , ಬಾಬಾ ಇನಾಮದಾರ, ಅಲ್ಲಾಭಕ್ಷ ಬಿಸನಾಳ, ದೇವೀಂದ್ರ ವಡ್ಡರ, ಪ್ರವೀಣಕುಮಾರ ಸೇರಿದಂತೆ ಹಲವು ಪದಾಧಿಕಾರಿಗಳಿದ್ದರು.
ಹೋರಾಟಗಾರರ ಬೇಡಿಕೆಗಳು: ಕಲಕೇರಿಯ ಐತಿಹಾಸಿಕ ದೇವಸ್ಥಾನ ಮಡಿವಾಳೇಶ್ವರ ದೇವಸ್ಥಾನದ ಆಸ್ತಿಯನ್ನು ಗ್ರಾಮ ಪಂಚಾಯತಿ ಅತಿಕ್ರಮಿಸಲು ಪ್ರಯತ್ನಿಸುತ್ತಿದ್ದು ಅದರ ಸರಿಯಾದ ದಾಖಲೆ ಒದಗಿಸಬೇಕು.
ಕಲಕೇರಿಯಲ್ಲಿರುವ ಗ್ರಾಮ ಠಾಣ ಆಸ್ತಿ ವಿವರ ನೀಡಬೇಕು. ಜೋಡು ಬಸವೇಶ್ವರ ದೇವಸ್ಥಾನ ದಿಂದ ಮಾದರಿ ಶಾಲೆಯವರೆಗೆ ಅತಿಕ್ರಮ ಕಟ್ಟಡ ತೆರವು ಮಾಡಬೇಕು.
ಗ್ರಾಮ ಪಂಚಾಯತಿ ಅನುದಾನ, ಖರ್ಚು-ವೆಚ್ಚದ ವಿವರ, ಮೊದಲಾದವುಗಳನ್ನು ನೀಡಲು ಒಂದು ತಿಂಗಳ ಅವಕಾಶ ನೀಡಲಾಗಿತ್ತು. ಆದರೂ ಬೇಡಿಕೆ ಈಡೇರಿಸಿಲ್ಲ.
ಪಂಚಾಯ್ತಿಯಿಂದ ಮಂಜೂರಾದ 450 ಮನೆಗಳ ಫಲಾನುಭವಿಗಳ ಪಟ್ಟಿ, ವಾಣಿಜ್ಯ ಮಳಿಗೆಗೆಳ ಖರ್ಚು ವೆಚ್ಚದ ವಿವರ ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಕೆಗಾಗಿ ಧರಣಿ ಸತ್ಯಾಗ್ರಹವನ್ನು ಆರಂಭಿಸಲಾಗಿತ್ತು.

