ಮುದ್ದೇಬಿಹಾಳ:- ತಾಲ್ಲೂಕಿನ ಚವನಭಾವಿ ಗ್ರಾಮದಲ್ಲಿ 2026–27ನೇ ಸಾಲಿನ ವಿಕಸಿತ ಗ್ಯಾರಂಟಿ ರೋಜಗಾರ ಹಾಗೂ ಅಜೀವಿಕಾ ಮಿಷನ್ (ಗ್ರಾಮೀಣ) ಯೋಜನೆಯಡಿ ಕೈಗೊಳ್ಳಲಿರುವ ವಿವಿಧ ಕಾಮಗಾರಿಗಳ ಪಟ್ಟಿ ತಯಾರಿಸುವ ಉದ್ದೇಶದಿಂದ ಶುಕ್ರವಾರ ಶ್ರೀ ಮಾರುತೇಶ್ವರ ದೇವಸ್ಥಾನ ಆವರಣದಲ್ಲಿ ವಿಶೇಷ ವಾರ್ಡ ಸಭೆ ನಡೆಸಲಾಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಡವಿ ಸೋಮನಾಳ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ನಿರ್ಮಲಾ ತೋಟದ, ರೈತರು ಹಾಗೂ ಕೂಲಿ ಕಾರ್ಮಿಕರಿಗೆ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ಜಿಎನ್‌ಆರ್‌ಇಜಿ) ಅಡಿಯಲ್ಲಿ ಕೃಷಿ ಹೊಂಡ ನಿರ್ಮಾಣ, ಬದು ನಿರ್ಮಾಣ, ಚೆಕ್ ಡ್ಯಾಮ್, ಧನದ ಕೊಟ್ಟಿಗೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ತಿಳಿಸಿದರು. ಸಾರ್ವಜನಿಕರು ಈ ಯೋಜನೆಗಳ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಚವನಭಾವಿ ಗ್ರಾಮದಲ್ಲಿ ಹಳೆಯ ಹಾಗೂ ಬಿದ್ದ ಮನೆಗಳಿಗೆ ವಿಧಿಸಲಾಗಿರುವ ಮನೆ ತೆರಿಗೆ ಕಡಿತಗೊಳಿಸುವ ಕುರಿತು ಅರ್ಜಿ ಸಲ್ಲಿಸಿದಲ್ಲಿ, ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ಮೇಲಾಧಿಕಾರಿಗಳಿಂದ ಅನುಮೋದನೆ ದೊರೆತ ತಕ್ಷಣವೇ ಮನೆ ತೆರಿಗೆ ಕಡಿತ ಸೌಲಭ್ಯವನ್ನು ಅರ್ಜಿದಾರರಿಗೆ ನೀಡಲಾಗುವುದು ಎಂದು ಹೇಳಿದರು.
ಗ್ರಾಮ ಪಂಚಾಯತಿ ಅಭಿವೃದ್ಧಿಗೆ ಸಾರ್ವಜನಿಕರು ಸಮಯಕ್ಕೆ ಸರಿಯಾಗಿ ತೆರಿಗೆ ಪಾವತಿಸುವುದು ಅತ್ಯಂತ ಅವಶ್ಯಕವಾಗಿದ್ದು, ಇದರಿಂದ ಗ್ರಾಮಕ್ಕೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಸಂಗಮ್ಮ ಹಂಚಿನಾಳ, ಸದಸ್ಯ ಆಂಜನೇಯ ಪವಾರ, ಕಾರ್ಯದರ್ಶಿ ಬಸನಗೌಡ ಬಿರಾದಾರ, ಸಿಬ್ಬಂದಿಗಳಾದ ಬಲವಂತ ಜೋಗಿನ, ಬಸಣ್ಣ ಬಿರಾದಾರ, ಗುರುರಾಜ ಗುಡಗುಂಟಿ, ಅಂಗನವಾಡಿ ಕಾರ್ಯಕರ್ತೆಯರಾದ ಇಂದಿರಾ ಕುಂಬಾರ, ಶಾಂತಾ ಈಳಗೇರ, ಸಾವಿತ್ರಿ ನಾಲತವಾಡ, ಬಸಮ್ಮ ಸೋಮನಾಳ ಸೇರಿದಂತೆ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

