ಮಸ್ಕಿ,ಜ,23:- ಮಸ್ಕಿ ಪಟ್ಟಣದ ಶಕ್ತಿ ದೇವತೆ ಶ್ರೀ ಕಾಳಿಕಾದೇವಿಯ 12ನೇ ವಾರ್ಷಿಕೋತ್ಸವ ಭಕ್ತಿಭಾವ,ಸಂಪ್ರದಾಯ ಹಾಗೂ ಸಂಭ್ರಮದಿಂದ ವಿಜೃಂಭಣೆಯಿ ಜರುಗಿತು.
ಶುಕ್ರವಾರ ಬೆಳಿಗ್ಗೆ ನಾನಾ ವಿಧದ ಪುಷ್ಪಾಲಂಕಾರಗಳಿಂದ ಶೃಂಗಾರಗೊಂಡ ಶ್ರೀ ಕಾಳಿಕಾದೇವಿಯ ಪಲ್ಲಕ್ಕಿ ಮೆರವಣಿಗೆ ದೇವಸ್ಥಾನದಿಂದ ಆರಂಭಗೊಂಡು ವಿಶ್ವಕರ್ಮ ವೃತ್ತ, ಅಶೋಕ ವೃತ್ತ ಮಾರ್ಗವಾಗಿ ಆಂಜನೇಯ ದೇವಸ್ಥಾನಕ್ಕೆ ತಲುಪಿತು.
ಅಲ್ಲಿ ಮಹಾಮಜ್ಜನ ಕಾರ್ಯಕ್ರಮ ನಡೆಯಿತು. ಮುತ್ತೈದೆಯರು ಗಂಗಾಜಲ ಪೂಜೆ ನೆರವೇರಿಸಿ, ಕುಂಭ ಹೊತ್ತು ಮಹಿಳೆಯರು ಭಕ್ತಿಯಿಂದ ಮೆರವಣಿಗೆಯಲ್ಲಿ ಭಾಗವಹಿಸಿದರು. ಪುರವಂತಿಕೆ ಕಲಾತಂಡದವರು ಒಡುಪು ಹೇಳುತ್ತ ಭಕ್ತರನ್ನು ಆನಂದದಲ್ಲಿ ತೊಡಗಿಸಿದರು.
ನಂತರ ಪುನಃ ಆಂಜನೇಯ ದೇವಸ್ಥಾನದಿಂದ ಪ್ರಾರಂಭವಾದ ಮೆರವಣಿಗೆ ಅಶೋಕ ವೃತ್ತ, ಅಗಸಿ, ಕಲೀಲ ವೃತ್ತ, ದೈವದ ಕಟ್ಟೆ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಸಂಚರಿಸಿ ಶ್ರೀ ಕಾಳಿಕಾದೇವಿ ದೇವಸ್ಥಾನಕ್ಕೆ ತಲುಪಿತು.
ದೇವಾಲಯದಲ್ಲಿ ಶ್ರೀ ಕಾಳಿಕಾದೇವಿಗೆ ಪಂಚಾಮೃತಾಭಿಷೇಕ, ನವಗ್ರಹ ಪೂಜೆ, ಹೋಮ, ಹವನ ಹಾಗೂ ಮಂಗಳಾರತಿ ವಿಧಿವಿಧಾನಗಳೊಂದಿಗೆ ನೆರವೇರಿಸಲಾಯಿತು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಮಸ್ಕಿ ಪಟ್ಟಣದ ವಿಶ್ವಕರ್ಮ ಸಮಾಜದವರು, ಶ್ರೀ ಕಾಳಿಕಾದೇವಿಯ ಭಕ್ತರು ಹಾಗೂ ನಾನಾ ಕಡೆಯಿಂದ ಆಗಮಿಸಿದ ವಿಶ್ವಕರ್ಮ ಸಮಾಜದ ಬಂಧುಗಳು ಭಕ್ತಿ ಸಮರ್ಪಿಸಿ ಕೃತಾರ್ಥರಾದರು.
ಒಟ್ಟಾರೆ ಶಕ್ತಿ ಆರಾಧನೆಯ ಮೂಲಕ ಧಾರ್ಮಿಕ ಶ್ರದ್ಧೆ ಹಾಗೂ ಸಾಮಾಜಿಕ ಏಕತೆಯನ್ನು ಸಾರಿದ ಕಾಳಿಕಾದೇವಿಯ ವಾರ್ಷಿಕೋತ್ಸವ ಮಸ್ಕಿಯಲ್ಲಿ ಭಕ್ತರ ಮನದಲ್ಲಿ ಆಳವಾದ ಭಕ್ತಿ ಮೂಡಿಸಿತು.

