ರಾಯಚೂರು ಜನವರಿ 22 (ಕರ್ನಾಟಕ ವಾರ್ತೆ): ಉತ್ತರ ಕರ್ನಾಟಕ ಭಾಗದ ಯುವನಿಧಿ ಫಲಾನುಭವಿಗಳಿಗೆ ಹಾಗೂ ವಿವಧ ಕ್ಷೇತ್ರಗಳಲ್ಲಿ ವಿದ್ಯಾರ್ಹತೆಯನ್ನು ಹೊಂದಿರುವ ನಿರುದ್ಯೋಗ ಯುವಕ-ಯುವತಿಯರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರು ಹಾಗೂ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖಾ ಸಚಿವರ ನೇತೃತ್ವದಲ್ಲಿ ವಿಜಯಪುರ ನಗರದ ಸ್ಟೇಷನ್ ರಸ್ತೆಯಲ್ಲಿನ ದರಬಾರ ಸ್ಕೂಲ್ ಆವರಣದಲ್ಲಿ ಫೆಬ್ರವರಿ 2ರ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆವರೆಗೆ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ.
ಈ ಯುವ ಸಮೃದ್ಧಿ ಹಾಗೂ ಉದ್ಯೋಗ ಮೇಳದಲ್ಲಿ ಕಲ್ಯಾಣ ಕರ್ನಾಟಕ ವಿಭಾಗೀಯ ಭಾಗದ ಜಿಲ್ಲೆಗಳ ಅಭ್ಯರ್ಥಿಗಳನ್ನು ಒಳಗೊಂಡಂತೆ ಇತರೆ ಜಿಲ್ಲೆಗಳಿಂದಲೂ ಸಹ ಅಂದಾಜು 20,000 ಕ್ಕೂ ಅಧಿಕ ಅಭ್ಯರ್ಥಿಗಳು, 150ಕ್ಕೂ ಹೆಚ್ಚು ಅಧಿಕ ಕಂಪನಿಗಳು ಭಾಗವಹಿಸುವ ನಿರೀಕ್ಷೆಯಿದ್ದು, ಈ ಉದ್ಯೋಗ ಮೇಳದಲ್ಲಿ ಎಸ್ಸೆಸ್ಸೆಲ್ಲಿ, ಪಿಯುಸಿ, ಐಟಿಐ, ಡಿಪ್ಲೋಮಾ, ಇಂಜಿನಿಯರಿಂಗ್ ಹಾಗೂ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರುವ ಜಿಲ್ಲೆಯ ನಿರುದ್ಯೋಗ ಯುವಕ/ ಯುವತಿಯರು ವಿಭಾಗೀಯ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು.
ಈ ಉದ್ಯೋಗ ಮೇಳವು ಉದ್ಯೋಗಾಕಾಂಕ್ಷಿಗಳನ್ನು ಹಾಗೂ ಉದ್ಯೋಗದಾತರನ್ನು ಒಂದೇ ವೇದಿಕೆಯಡಿ ತರುವ ಪ್ರಯತ್ನವಾಗಿದೆ. ಉದ್ಯೋಗದಾತರು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಿ ಅವರ ಸಂಸ್ಥೆಗಳಲ್ಲಿ ಖಾಲಿ ಇರುವ ವಿವಿಧ ಉದ್ಯೋಗಗಳಿಗೆ ಅರ್ಹ ಉದ್ಯೋಗಾಕಾಂಕ್ಷಿಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ ಹಾಗೆಯೇ ಉದ್ಯೋಗಾಕಾಂಕ್ಷಿ ಯುವಕ/ಯುವತಿಯರು ತಮ್ಮ ಕೌಶಲ್ಯಕ್ಕೆ ಅನುಗುಣವಾಗಿ ಉದ್ಯೋಗವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿರುತ್ತದೆ.
ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಇಚ್ಛಿಸುವ ಉದ್ಯೋಗಾಕಾಂಕ್ಷಿಗಳು ಜಾಲತಾಣ hhttps://udyogamela.ksdckarnataka.com ನಲ್ಲಿ ಆನ್‌ಲೈನ್ ಮೂಲಕ ನೊಂದಾಯಿಸಿಕೊಂಡು ಭಾಗವಹಿಸಬಹುದಾಗಿರುತ್ತದೆ. ಹಾಗೂ ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಇಚ್ಛಿಸುವ ಉದ್ಯೋಗದಾತರು/ಕಂಪನಿಗಳು ಸಹ ತಮ್ಮಲ್ಲಿ ಲಭ್ಯವಿರುವ ಖಾಲಿ ಹುದ್ದೆಗಳ ವಿವರಗಳೊಂದಿಗೆ hhttps://employer.ksdckarnataka.com/login ಈ ಜಾಲತಾಣದಲ್ಲಿ ನೊಂದಾಯಿಸಿಕೊಂಡು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ: 9606494308ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಕೌಶಲ್ಯಾಭವೃದ್ಧಿ ಅಧಿಕಾರಿ ಜಿ.ಯು.ಹುಡೇದ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *