ಸಮಾಜದಲ್ಲಿ ವಿವಾಹ ಅನ್ನುವುದು ಪರಮ ಪವಿತ್ರ ಬಂಧನವಾಗಿದೆ.
ಮುಕುಂದ ಗ್ರಾಮದ ಸಮಸ್ತ ಭಕ್ತರು ಪ್ರತಿವರ್ಷವು ನೇರವೇರಿಸುವ ಸಾಮೂಹಿಕ ವಿವಾಹಗಳು ಶ್ರೀಮಂತರಿಗೆ ಪ್ರೇರಣೆಯಾಗಬೇಕು ಎಂದು ವಶಿಷ್ಠಧಾಮ ಸೇವಾ ಟ್ರಸ್ಟ್ ಅಧ್ಯಕ್ಷ ಭೀಮಸೇನಾಚಾರ್ಯ ನವಲಿ ಹೇಳಿದರು.
ಅಸಹಾಯಕರು ಸಾಲಮಾಡಿ ವಿವಾಹ ಮಾಡಿಕೊಂಡು ಸಾಲದ ಸುಳಿಯಲ್ಲಿ ಜೀವನ ನಡೆಸುವುದು ಕಷ್ಟಸಾಧ್ಯವಾಗಿದೆ. ಆದ್ದರಿಂದ ಶ್ರೀಮಂತರು ಸಮಾಜದಲ್ಲಿ ಸಾಮೂಹಿಕ ವಿವಾಹ ಮಾಡುವ ಮೂಲಕ ಅಸಹಾಯಕರಿಗೆ ನೆರವು ನೀಡಬೇಕು ಎಂದು ಭೀಮಸೇನಾಚಾರ್ಯ ನವಲಿ ಹೇಳಿದರು.
ಶ್ರೀ ಮುರಹರಿ ದೇವಸ್ಥಾನ ಸೇವಾ ಸಮಿತಿಯಿಂದ ಇತಿಹಾಸ ಪ್ರಸಿದ್ಧವಾದ ಮುಕುಂದ ಗ್ರಾಮದ ಮುರಹರಿ ಸ್ವಾಮಿ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ, ಜಾತ್ರಾ ಮಹೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪುರೋಹಿತರಾಗಿ ಮಾತನಾಡಿದರು.
ಇತಿಹಾಸ ಪ್ರಸಿದ್ಧವಾದ ಮುಕ್ಕುಂದಾ ದೇವಸ್ಥಾನದಲ್ಲಿ ಸೇವಾ ಸಮಿತಿಯವರು ಹಾಗೂ ಗ್ರಾಮಸ್ಥರ ಸಹಕಾರದಿಂದ ಮಾಡುವ ಈ ಮಂಗಳ ಕಾರ್ಯಕ್ರಮಗಳು ಎಲ್ಲರಿಗೂ ಮಾದರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಸಮಿತಿಯ ಹನುಮಂತರಡ್ಡಿ, ರಾಜಶೇಖರ ರೆಡ್ಡಿ, ಪೂಜಾರಿ ರಾಘವೇಂದ್ರ, ರಾಘವೇಂದ್ರ ರೆಡ್ಡಿ ಮುಂತಾದವರು ಗ್ರಾಮದ ಗುರುಹಿರಿಯರು ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

