ಕೊಪ್ಪಳ: ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಮಿತಿಯಿಂದ ವಿವಿಧ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಕೊಪ್ಪಳ ಜಿಲ್ಲಾಧಿಕಾರಿ ಭವನದಲ್ಲಿನ ಸಂಸದರ ಕಚೇರಿಯಲ್ಲಿ ಸಂಸದ ರಾಜಶೇಖರ್ ಹಿಟ್ನಾಳ್ ಅವರಿಗೆ ಮನವಿ ಸಲ್ಲಿಸಲಾಯಿತು.ಆಶಾ ಕಾರ್ಯಕರ್ತೆಯರು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ತಳಮಟ್ಟದಲ್ಲಿ ಪ್ರಮುಖ ಸೇವೆ ಸಲ್ಲಿಸುತ್ತಿದ್ದು, ಸರ್ಕಾರದ ಅನೇಕ ಆರೋಗ್ಯ ಯೋಜನೆಗಳನ್ನು ನೆಲಮಟ್ಟದಲ್ಲಿ ಯಶಸ್ವಿಯಾಗಿ ಅನುಷ್ಠಾನಿಸುತ್ತಿದ್ದಾರೆ.ಅವರಿಗೆ ಸಮರ್ಪಕ ಗೌರವಧನ, ಸಾಮಾಜಿಕ ಭದ್ರತೆ ಹಾಗೂ ಮೂಲಭೂತ ಸೌಲಭ್ಯಗಳ ಕೊರತೆ ಇನ್ನೂ ಮುಂದುವರಿದಿದೆ ಎಂದು ಆಕ್ರೋಶಗೊಂಡರು.
ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ ಮಾಸಿಕ ಗೌರವಧನವನ್ನು ಹೆಚ್ಚಿಸಬೇಕು, ಬಾಕಿ ಉಳಿದಿರುವ ಗೌರವಧನ ಮತ್ತು ಪ್ರೋತ್ಸಾಹ ಧನವನ್ನು ತಕ್ಷಣ ಪಾವತಿಸಬೇಕು, ಕಾರ್ಯ ನಿರ್ವಹಣೆಗೆ ಅಗತ್ಯವಾದ ವೆಚ್ಚಗಳಿಗೆ ಪ್ರತ್ಯೇಕ ಭತ್ಯೆ ನೀಡಬೇಕು. ರೂ.5 ಲಕ್ಷ ಜೀವ ವಿಮಾ ಸೌಲಭ್ಯ ಕಲ್ಪಿಸಿ, ಅವರನ್ನು ಶಾಶ್ವತ ಆರೋಗ್ಯ ಕಾರ್ಯಕರ್ತೆಯರಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದಲ್ಲದೆ ಕೇಂದ್ರ ಆರೋಗ್ಯ ಸಚಿವರಾದ ಜೆ.ಪಿ. ನಡ್ಡಾ ಅವರು ಕೇಂದ್ರ ಬಜೆಟ್ನಲ್ಲಿ ಘೋಷಿಸಿದ ಆಶಾ ಕಾರ್ಯಕರ್ತೆಯರಿಗೆ ರೂ. 2,500 ರಿಂದ 3,000 ವರೆಗೆ ಪ್ರೋತ್ಸಾಹ ಧನ ನೀಡುವ ನಿರ್ಧಾರವನ್ನು ಕೂಡಲೇ ಜಾರಿಗೊಳಿಸಬೇಕು. ಈ ಘೋಷಣೆ ಕಾಗದದಲ್ಲೇ ಉಳಿಯದೆ ಕೂಡಲೇ ಅನುಷ್ಠಾನವಾಗಬೇಕೆಂದು ಆಗ್ರಹಿಸಿದರು.ಜಿಲ್ಲಾ ಅಧ್ಯಕ್ಷ ಶರಣು ಗಡ್ಡಿ, ಜಿಲ್ಲಾ ಕಾರ್ಯದರ್ಶಿ ಕೌಶಲ್ಯ ದೊಡ್ಡಗೌಡರ್, ಶೋಭಾ ಹೂಗಾರ್, ಅನ್ನಪೂರ್ಣ, ಸುನೀತಾ, ಶಾರದಾ, ಶಬನಾ, ಲಾಲ್ತಿಪ್ಪಮ್ಮ ಬಿ, ಸುಧಾ, ಶಿವಮ್ಮ, ಲಕ್ಷ್ಮ, ಲಲಿತಾ, ಶರಣಮ್ಮ ಸೇರಿದಂತೆ ನೂರಾರು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *