ಸಿಂಧನೂರು: “ಬದುಕಿನ ಪಯಣದಲ್ಲಿ ನಾವು ಎದುರಿಸುವ ಸವಾಲುಗಳಿಗಿಂತ ನಮ್ಮಲ್ಲಿರುವ ಆತ್ಮವಿಶ್ವಾಸ ದೊಡ್ಡದಾಗಿರಲಿ. ಸಮಯಪ್ರಜ್ಞೆ ಮತ್ತು ಕಠಿಣ ಪರಿಶ್ರಮವನ್ನು ಮೈಗೂಡಿಸಿಕೊಂಡರೆ ಜಗತ್ತನ್ನೇ ಗೆಲ್ಲಬಹುದು,” ಎಂದು ಗಂಗಾವತಿಯ ಎಸ್‌ಕೆಆರ್ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಶಿವಾನಂದ ಮೇಟಿ ಹೇಳಿದರು.
ನಗರದ ಜ್ಞಾನಜ್ಯೋತಿ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ಎಂಬುದು ಕೇವಲ ಅಂಕಗಳಿಕೆಗೆ ಸೀಮಿತವಾಗಬಾರದು. ಅದು ಬದುಕಿನ ಪ್ರತಿ ಹಂತದಲ್ಲೂ ದಾರಿ ತೋರುವ ಬೆಳಕಾಗಬೇಕು. ಸೋಲಿಗೆ ಎದೆಗುಂದದೆ, ಸಮಾಜದ ಏಳಿಗೆಗೆ ಪೂರಕವಾಗಿ ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಬಳಸಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಗಂಗಾವತಿಯ ನ್ಯಾಯವಾದಿ ನಾಗರಾಜ ಗುತ್ತೇದಾರ್ ಮಾತನಾಡಿ, “ವಿದ್ಯಾರ್ಥಿ ದೆಸೆಯಲ್ಲಿ ಶಿಸ್ತು ಮತ್ತು ಸಂಸ್ಕೃತಿ ಅತ್ಯಗತ್ಯ. ಪೋಷಕರನ್ನು ಗೌರವಿಸುವ ಮತ್ತು ದೇಶದ ಬಗ್ಗೆ ಹೆಮ್ಮೆ ಪಡುವ ಗುಣಗಳು ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತವೆ,” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎನ್.ಪಿ. ವಿಷ್ಣುವರ್ಧನ್ ರೆಡ್ಡಿ ಮಾತನಾಡಿ, ಕಠಿಣ ಪರಿಶ್ರಮದ ಜೊತೆಗೆ ಸಾಮಾಜಿಕ ಬದ್ಧತೆಯನ್ನು ಬೆಳೆಸಿಕೊಂಡಾಗ ಮಾತ್ರ ಶಿಕ್ಷಣ ಸಂಸ್ಥೆ ಹಾಗೂ ಪೋಷಕರಿಗೆ ನಿಜವಾದ ಕೀರ್ತಿ ಲಭಿಸಲು ಸಾಧ್ಯ ಎಂದು ಹಾರೈಸಿದರು.
ಕಾಲೇಜಿನ ಶೈಕ್ಷಣಿಕ ಸಾಧನೆಗಳ ಕುರಿತು ಹಿಂದಿ ಉಪನ್ಯಾಸಕ ಚಾಂದ್ ಪಾಷಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ನಡೆದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆದವು. ಸಮಾರಂಭದಲ್ಲಿ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು


