ಕೊಪ್ಪಳ : ನಗರಸಭೆ ವಾಣಿಜ್ಯ ಸಂಕೀರ್ಣ ಮುಂದೆ ಬಲ್ಡೋಟ ತೊಲಗಿಸಿ ಕೊಪ್ಪಳ ಉಳಿಸಿ ಸಹಿ ಜಾಗೃತಿ ಆಂದೋಲನ ಶನಿವಾರ ಆರಂಭವಾಯಿತು.ವಾಣಿಜ್ಯೋದ್ಯಮಿ ಬಸವರಾಜ ಬಳ್ಳೊಳ್ಳಿ ಅವರು ಪರಿಸರ ಜಾಗೃತಿ ಸಹಿ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿ ‘ಕೊಪ್ಪಳ ಹಾಗೂ ಸುತ್ತಲಿನ ಹಳ್ಳಿಗಳಿಗೆ ಕಾರ್ಖಾನೆ ವಿಷಾನಿಲ, ಕಂದು ದೂಳು ಹರಡಿ ಶುದ್ಧವಾಗಿದ್ದ ಪರಿಸರ ಮಾಲಿನ್ಯವಾಗಿದೆ.ಈ ದೂಳು ನಮ್ಮ ಮೇಲೆ ಬಿದ್ದಿರುವುದನ್ನು ಮಾತ್ರ ನೋಡುತ್ತೇವೆ. ಆದರೆ ನಮ್ಮ ದೇಹದೊಳಗೆ ಎಷ್ಟು ಸೇರುತ್ತದೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಗಂಭೀರ ರೋಗಗಳು ಕಾಡುವಾಗ ಎಚ್ಚರಾದರೆ ಏನು ಪ್ರಯೋಜನ. ಈಗ ಸರಿಯಾದ ಸಂದರ್ಭ ಬಂದಿದೆ. ಎಚ್ಚರಗೊಂಡು ಮಾಲಿನ್ಯದ ವಿಷಕಾರುವ ಕಾರ್ಖಾನೆಗಳನ್ನು ಇಲ್ಲಿಂದ ತೊಲಗಿಸೋಣ’ ಎಂದು ಕರೆ ನೀಡಿದರು.ಜಿಲ್ಲಾ ಬಚಾವೊ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ವೇದಿಕೆ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿಯ 79ನೇ ದಿನ ಪೂರ್ಣಗೊಳಿಸಿದ್ದು, ಬಲ್ಡೋಟ, ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದ ಸುಮಿ, ಎಕ್ಸ್ ಇಂಡಿಯಾ ಸೇರಿದಂತೆ ವಿವಿಧ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ಧರಣಿ ನಡೆಯುತ್ತಿದೆ. ಅನೇಕ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಹಿ ಸಂಗ್ರಹ ಅಭಿಯಾನದಲ್ಲಿ ಪಾಲ್ಗೊಂಡರು.ಶರಣಬಸವ ಬೆಟ್ಟದೂರು ಮಾತನಾಡಿ ‘ಗವಿಸಿದ್ದೇಶ್ವರ ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಣ ಪಡೆದು ಬಹುದಿನಗಳ ಕಾಲ ಇಲ್ಲಿಯೇ ಇದ್ದು ಈ ನಗರ, ಗ್ರಾಮೀಣ ಸೊಬಗು ಅನುಭವಿಸಿದ್ದೇನೆ. ಆದರೆ ಈಗ ಪರಿಸರ ಉಳಿದಿಲ್ಲ. ತುಂಗಭದ್ರಾ ನೀರು ಕಾರ್ಖಾನೆಗಳು ನಿಯಮಾವಳಿ ಮೀರಿ ಹರಿಸಿಕೊಳ್ಳುತ್ತಿದ್ದು ನನ್ನ ಸ್ವಗ್ರಾಮ ಬೆಟ್ಟದೂರು ಟೇಲೆಂಡ್ ಆಗಿ ಒಣಬೇಸಾಯಕ್ಕೆ ಸಿಮಿತಗೊಂಡಿದೆ’ ಎಂದರು.ಜಂಟಿ ಕ್ರಿಯಾ ವೇದಿಕೆ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಬಿ.ಜಿ. ಕರಿಗಾರ, ರವಿ ಕಾಂತನವರ, ಎಸ್.ಬಿ. ರಾಜೂರು, ಶಂಭುಲಿಂಗಪ್ಪ ಹರಗೇರಿ, ಗವಿಸಿದ್ದಪ್ಪ ಹಲಿಗಿ, ಮಹಾದೇವಪ್ಪ ಮಾವಿನಮಡು, ಅಮಿತ್ ಮಾಲಗಿತ್ತಿ, ವಿಜಯ ಮಹಾಂತೇಶ ಹಟ್ಟಿ, ಶಿವಪ್ಪ ಜಲ್ಲಿ, ಉದ್ಯಮಿ ಗವಿಸಿದ್ದಪ್ಪ ಮುದಗಲ್, ಪರಮೇಶ್ವರಪ್ಪ ಕೊಪ್ಪಳ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *