ಮಾನ್ವಿ: ಪಟ್ಟಣದ ಬಸವ ವೃತ್ತದ ಅಪೂರ್ಣ ಚಿತ್ರಮಂದಿರದ ಎದುರುಗಡೆ ಇರುವ ಬಿಚ್ಚಾಲಿ ವೀರೇಶ್ ಬಾಬು ಅವರ ಮಾಲೀಕತ್ವದ ಶ್ರೀ ಲಕ್ಷ್ಮಿ ವೆಂಕಟೇಶ್ವರ ಪೇಂಟ್ಸ್ ಮಳಿಗೆಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಭಾರೀ ಬೆಂಕಿ ಅವಘಡ ಸಂಭವಿಸಿದೆ.
ಇಂದು ಬೆಳಿಗ್ಗೆ ಸುಮಾರು 4 ಗಂಟೆಯ ವೇಳೆಗೆ ಮಳಿಗೆಯಿಂದ ಹೊಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯರು ಅಂಗಡಿ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಮಳಿಗೆಯಲ್ಲಿ ಪೇಂಟ್ ಸೇರಿದಂತೆ ರಾಸಾಯನಿಕ ವಸ್ತುಗಳು ಸಂಗ್ರಹವಾಗಿದ್ದ ಕಾರಣ ಬೆಂಕಿ ಕ್ಷಿಪ್ರವಾಗಿ ವ್ಯಾಪಿಸಿ ತೀವ್ರವಾಗಿ ಹೊತ್ತಿ ಉರಿದಿದೆ.
ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರೂ, ಅಷ್ಟರೊಳಗೆ ಮಳಿಗೆ ಸಂಪೂರ್ಣವಾಗಿ ಸುಟ್ಟು ಹೋಗಿದ್ದು ಒಳಗಿದ್ದ ಎಲ್ಲಾ ಸಾಮಗ್ರಿಗಳು ಕರಕಲಾಗಿವೆ. ಈ ಅವಘಡದಲ್ಲಿ ಅಂದಾಜು ರೂ. 60 ಲಕ್ಷ ನಷ್ಟ ಸಂಭವಿಸಿರುವುದಾಗಿ ತಿಳಿದುಬಂದಿದೆ.
ಮಳಿಗೆಯ ಅಕ್ಕಪಕ್ಕದಲ್ಲಿರುವ ಮಾರುತಿ ಬುಕ್ ಸ್ಟಾಲ್ ಹಾಗೂ ಶ್ರೀ ಜೈ ಹನುಮಾನ್ ಕಿರಾಣಿ ಸ್ಟೋರ್ಗಳಿಗೆ ಯಾವುದೇ ಹಾನಿ ಸಂಭವಿಸಿಲ್ಲ. ಹೆಚ್ಚಿನ ಅಪಾಯ ತಪ್ಪಿದ ಹಿನ್ನೆಲೆಯಲ್ಲಿ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.
ಘಟನೆಯ ಕುರಿತು ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.


