ರಾಯಚೂರು ಜನವರಿ 16 (ಕ.ವಾ.): ನಗರದ ಐತಿಹಾಸಿಕ ಮಾವಿನಕೆರೆಯ ನೀರು ಶುದ್ಧೀಕರಣ ಮತ್ತು ಕೆರೆ ಪ್ರದೇಶದ ಆವರಣದ ಸೌಂದರ್ಯಗೊಳಿಸುವ ಹಿನ್ನೆಲೆಯಲ್ಲಿ ರಾಯಚೂರು ಮಹಾನಗರ ಪಾಲಿಕೆಯು ಅಂದಾಜು 2.5 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡ ಮಾವಿನಕೆರೆ ಪ್ರವೇಶಿಸುವ ವಿವಿಧೆಡೆಯ ಒಳಚರಂಡಿ ಕಲುಷಿತ ನೀರು ತಿರುವು ಹಂತ-1ರ ಕಾಮಗಾರಿಗೆ ವೈದ್ಯಕೀಯ ಶಿಕ್ಷಣ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ಹಾಗೂ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು ಅವರು ಜನವರಿ 16ರಂದು ಭೂಮಿಪೂಜೆ ನೆರವೇರಿಸಿದರು.
ನಗರದ ಐತಿಹಾಸಿಕ ಕೋಟೆಯ ದೀಪಾಲಂಕಾರ ಕಾಮಗಾರಿ ಬಳಿಕ ನೇರವಾಗಿ ಮಾವಿನಕೆರೆ ಪ್ರದೇಶಕ್ಕೆ ತೆರಳಿದ ಸಚಿವರು, ರಾಯಚೂರು ಮಹಾಜನತೆಯ ಬಹುದಿನಗಳ ಆಶಯದ ಮಹತ್ವದ ಕಾಮಗಾರಿಗೆ ಚಾಲನೆ ನೀಡಿದರು.
ಈ ವೇಳೆ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ಮಾವಿನಕೆರೆಗೆ ರಾಯಚೂರು ಸಿಟಿಯ 15 ಕಡೆಗಳಲ್ಲಿನ ಒಳಚರಂಡಿಯ ಕಲುಷಿತ ನೀರು ಸೇರುತ್ತದೆ. ಮೊದಲ ಹಂತದಲ್ಲಿ 2.5 ಕೋಟಿ ರೂ ವೆಚ್ಚದಲ್ಲಿ ಕಾಮಗಾರಿ ಕೈಗೊಂಡು 7 ಕಡೆಗಳಲ್ಲಿನ ಚರಂಡಿ ನೀರನ್ನು ಬ್ಲಾಕ್ ಮಾಡಿ ಅದನ್ನು ಬೇರೆಡೆ ಸಾಗಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಬಾಕಿ ಕಾರ್ಯವನ್ನು ಅಮೃತ ಯೋಜನೆಯಡಿ ಕೈಗೊಳ್ಳಲು ಯೋಜಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಮಹರ್ಷಿ ವಾಲ್ಮೀಕಿ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರು ಗ್ರಾಮೀಣ ಶಾಸಕರಾದ ಬಸನಗೌಡ ದದ್ದಲ್, ನಗರ ಕ್ಷೇತ್ರದ ಶಾಸಕರಾದ ಡಾ.ಎಸ್.ಶಿವರಾಜ ಪಾಟೀಲ, ಮಾನ್ವಿ ಶಾಸಕರಾದ ಹಂಪಯ್ಯ ನಾಯಕ, ವಿಧಾನ ಪರಿಷತ್ ಶಾಸಕರಾದ ಎ.ವಸಂತಕುಮಾರ, ಜಿಲ್ಲಾಧಿಕಾರಿಗಳಾದ ನಿತೀಶ್ ಕೆ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಈಶ್ವರ ಕುಮಾರ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಕ್ಷಂ ಗಿರಿ ಹಾಗೂ ಇನ್ನೀತರ ಗಣ್ಯ ಮಹನಿಯರು ಇದ್ದರು.
