ರಾಯಚೂರು ಜನವರಿ 16 (ಕ.ವಾ.): ಈ ಮೊದಲು ನಿರ್ಧರಿಸಿದ್ದ ರಾಯಚೂರು ಜಿಲ್ಲಾ ಉತ್ಸವ-2026ರ ಎಲ್ಲ ಕಾರ್ಯಕ್ರಮಗಳು ಪರಿಷ್ಕೃತ ದಿನಾಂಕ 2026ರ ಫೆಬ್ರವರಿ 5, 6 ಮತ್ತು 7ರವರೆಗೆ ನಿರಂತರ ನಡೆಯುವಂತೆ ಕಾರ್ಯ ಯೋಜನೆ ರೂಪಿಸಿ ಕಾರ್ಯಪ್ರವೃತ್ತರಾಗಬೇಕು ಎಂದು ರಾಯಚೂರು ಉತ್ಸವ ಆಚರಣಾ ಸಮಿತಿಯ ಅಧ್ಯಕ್ಷರಾದ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ಆಯಾ ಸಮಿತಿಗಳ ಅಧ್ಯಕ್ಷರು ಮತ್ತು ಸದಸ್ಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿದರು. ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜನವರಿ 16ರಂದು ನಡೆದ ಮತ್ತೊಂದು ಸುತ್ತಿನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈಗಾಗಲೇ ಬೇರೆ ಬೇರೆ ದಿನಾಂಕದಿಂದ ನಿಗದಿಯಾದ ಕಾರ್ಯಕ್ರಮಗಳನ್ನು ಯತಾರೀತಿಯಲ್ಲಿ ನಡೆಸಬೇಕು.
ಉತ್ಸವದ ಸಿದ್ಧತೆಗೆ ಇದೀಗ ಸ್ವಲ್ಪ ದಿನಗಳ ಕಾಲಾವಕಾಶ ಲಭಿಸಿದೆ. ಕೆಲವು ಸ್ಪರ್ಧೆಗಳಲ್ಲಿ ಮಾತ್ರ ಸ್ವಲ್ಪ ಮಾರ್ಪಾಡುಗಳಾಗಲಿವೆ. ಇನ್ನುಳಿದಂತೆ ಯಾವುದೇ ಬದಲಾವಣೆಗಳು ಇರುವುದಿಲ್ಲ. ಅಧಿಕಾರಿಗಳು ಮತ್ತು ಸಿಬ್ಬಂದಿ ವಿರಮಿಸದೇ ನಿರಂತರವಾಗಿ ಉತ್ಸವದ ನಾನಾ ಕಾರ್ಯಚಟುವಟಿಕೆಗಳಲ್ಲಿ ಭಾಗಿಯಾಗಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಜನವರಿ 31 ರಿಂದ ಎರಡು ದಿನ ಮಕ್ಕಳ ಉತ್ಸವ: ಜನವರಿ 31 ಹಾಗೂ ಫೆಬ್ರವರಿ 1ರಂದು ಎರಡು ದಿನಗಳ ಕಾಲ ಮಕ್ಕಳ ಉತ್ಸವ ನಡೆಸಲು ತೀರ್ಮಾನಿಸಲಾಗಿದೆ. ಈ ಉತ್ಸವದಲ್ಲಿ ಜಿಲ್ಲೆಯ ಎಲ್ಲ ಪ್ರತಿಭಾನ್ವಿತ ಮಕ್ಕಳಿಗೆ ಅವಕಾಶ ಸಿಗಬೇಕು. ಈ ಉತ್ಸವದ ಬಗ್ಗೆ ವ್ಯಾಪಕ ಪ್ರಚಾರ ನಡೆಸಬೇಕು. ಸಣ್ಣ ವಯೋಮಾನದ ಮಕ್ಕಳಿಗು ಅವಕಾಶ ಸಿಗುವ ಹಾಗೆ ವಯಸ್ಸಿಗನುಸಾರ ಬೇರೆ ಬೇರೆ ಸ್ಪರ್ಧೆಗಳನ್ನು ನಡೆಸಲು ಕಾರ್ಯಯೋಜನೆ ರೂಪಿಸಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ನಿರಂತರ ಸಭೆ ನಡೆಸಿ: ಆಯಾ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯ ಕಾರ್ಯದರ್ಶಿಗಳು ತಮ್ಮ ತಮ್ಮ ಹಂತದಲ್ಲಿ ಸಭೆ ನಡೆಸಿ ಸಿದ್ಧತೆಗಳ ಬಗ್ಗೆ ಪರಿಶೀಲಿಸಬೇಕು. ಆಯಾ ಸಮಿತಿಗಳ ಕಾರ್ಯವನ್ನು ಒಪ್ಪಿಸಿದರೆ ನಾವು ಸಹ ಸೇವೆಗೆ ಸಿದ್ಧ ಎನ್ನುವ, ಸ್ಚಯಂಪ್ರೇರಿತರಾಗಿ ಕೆಲಸ ಮಾಡಲು ಇಚ್ಛಿಸುವಂತಹ ಸಂಘ ಸಂಸ್ಥೆಗಳ ಸದಸ್ಯರ ಮತ್ತು ಸ್ವಯಂ ಸೇವಕರನ್ನು ಗುರುತಿಸಿ ಅವರ ಸಹಾಯ, ಸಲಹೆ, ಸಹಕಾರ ಮತ್ತು ಸೇವೆ ಪಡೆಯಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸಲಹೆ ಮಾಡಿದರು.
ಸಮನ್ವಯ ಸಾಧಿಸಿ: ಯಾವುದೇ ಕಾರ್ಯ ಸಾಧನೆಗೆ ಸಮನ್ವಯ ಮುಖ್ಯ. ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಪರಸ್ಪರ ಸಮನ್ವಯ ಸಾಧಿಸಿ ಕಾರ್ಯ ನಿರ್ವಹಿಸಬೇಕು. ಪ್ರತಿಯೊಂದು ಇವೆಂಟಗೂ ಹೆಚ್ಚಿನ ಜನರು ಸೇರಿ ಯಶಸ್ವಿಯಾಗುವಂತೆ ಪ್ರಚಾರ ಕಾರ್ಯಕ್ಕೆ ಹೆಚ್ಚಿನ ಒತ್ತು ಕೊಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ, ಸಹಾಯಕ ಆಯುಕ್ತರಾದ ಡಾ.ಹಂಪಣ್ಣ ಸಜ್ಜನ, ಬಸವಣೆಪ್ಪ ಕಲಶೆಟ್ಟಿ ಹಾಗೂ ವಿವಿಧ ಸಮಿತಿಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಇದ್ದರು.

Leave a Reply

Your email address will not be published. Required fields are marked *