ಭೂರಹಿತರು ಸರ್ಕಾರದ ಆದೇಶದ ಪ್ರಕಾರ ಫಾರಂ 51,53,57 ಮತ್ತು 94 ಸಿ ಅರ್ಜಿಗಳನ್ನು ಈಗಾಗಲೇ
ಸಲ್ಲಿಸಿದ್ದಾರೆ. ಆದರೆ 627 ಅರ್ಜಿಗಳನ್ನು ತಿರಸ್ಕೃತ ಗೊಳಿಸಲಾಗಿದ್ದು, ಜೊತೆಗೆ ನಗರಸಭೆ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂ-14,15,17 ಮತ್ತು 19 ರಲ್ಲಿ 40 ಉಪಕಾಲುವೆಗೆ ಹೊಂದಿಕೊಂಡು ವಾಸವಾಗಿರುವ ವಸತಿ ರಹಿತರಿಗೆ ಹಕ್ಕು ಪತ್ರವನ್ನು ವಿತರಣೆ ಮಾಡದೆ ಇರುವುದು ಅತ್ಯಂತ ಖಂಡನಿಯ ಎಂದು ಕರ್ನಾಟಕ ರಾಜರತ್ನ ರಕ್ಷಣಾ ವೇದಿಕೆಯ ಕಲ್ಯಾಣ ಕರ್ನಾಟಕ ವಿಭಾಗೀಯ ಅಧ್ಯಕ್ಷ ಗುರುರಾಜ ಮುಕ್ಕಂದ ಹೇಳಿದರು.
ಕರ್ನಾಟಕ ರಾಜರತ್ನ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ಪ್ರತಿಭಟನೆಯು ನಗರದ ಪ್ರವಾಸಿ ಮಂದಿರದಿಂದ ತಹಶೀಲ್ ಕಚೇರಿವರೆಗೆ ಬೃಹತ್ ಪ್ರಮಾಣದಲ್ಲಿ ಹೋರಾಟವನ್ನು ನಡೆಸಿ, ಭೂ ರಹಿತರು ಹಾಗೂ ವಸತಿ ರಹಿತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿದರು.
ಸರ್ಕಾರದ ಆದೇಶದ ಅನ್ವಯ ಅರ್ಜಿ ಸಲ್ಲಿಸಿದ 627 ಭೂ ರಹಿತರಿಗೆ ಹಾಗೂ ನಗರಸಭೆ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂ 14,15,17 ಮತ್ತು 19 ರಲ್ಲಿ 40ರ ಉಪಕಾಲುವೆಗೆ ಹೊಂದಿಕೊಂಡು ವಾಸವಾಗಿರುವ ವಸತಿ ರಹಿತರಿಗೆ ಹಕ್ಕು ಪತ್ರವನ್ನು ವಿತರಣೆ ಮಾಡಬೇಕೆಂದು ಒತ್ತಾಯಿಸಿ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ: ಜಿಲ್ಲಾಧ್ಯಕ್ಷ ಸೋಮನಾಥ ಸೂಲಂಗಿ, ತಾಲೂಕು ಅಧ್ಯಕ್ಷ ಮಂಜುನಾಥ ಬಾದರ್ಲಿ, ಜಿಲ್ಲಾ ಕಾರ್ಮಿಕ ಘಟಕ ಅಧ್ಯಕ್ಷ ದುರುಗೇಶ ಬಾಲಿ, ಕಲ್ಯಾಣ ಕರ್ನಾಟಕ ಗೌರವ ಅಧ್ಯಕ್ಷ ಅಶೋಕ ಮೇಗಳಮನಿ, ಹಾಗೂ ಪಾಮಯ್ಯ ಹೊಸಳ್ಳಿ, ನಿಂಗಪ್ಪ, ಶಿವಮ್ಮ, ವಿಜಯಕುಮಾರ, ಮಹಾನಂದಮ್ಮ, ರೇಣುಕಮ್ಮ, ಸೋಮಣ್ಣ, ರಮೇಶ, ಬೇಗಂ, ಸೇರಿದಂತೆ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು.

