ಮಸ್ಕಿ : ರಾಯಚೂರು ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಆದ್ಯತೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಉತ್ಸವ ಜಾಗೃತಿ ಮೂಡಿಸಿ: ಆರ್. ಬಸನಗೌಡ

ಮಸ್ಕಿ: ನಮ್ಮ ಜಿಲ್ಲೆಯಲ್ಲಿ ಇದೆ ಮೊದಲ ಬಾರಿಗೆ ನಡೆಯುತ್ತಿರುವ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ 2026ರ ಬಗ್ಗೆ ಗ್ರಾಮ ಪಂಚಾಯಿತಿ ಪಟ್ಟದಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಖಾದಿ ಗ್ರಾಮೋದ್ಯೋಗ ನಿಗಮದ ಅಧ್ಯಕ್ಷ ಶಾಸಕ ಆರ್.ಬಸನಗೌಡ ತುರವಿಹಾಳ ಹೇಳಿದರು.
ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಶಾಸಕರ ನೇತೃತ್ವದಲ್ಲಿ ಬುಧವಾರ ನಡೆದ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಇದೇ ಮೊದಲು ಬಾರಿಗೆ ಜ. ೨೯ ರಿಂದ ೩೧ರ ವರೆಗೆ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಈ ಉತ್ಸವಕ್ಕೆ ಬೇರೆ ರಾಜ್ಯ ಮತ್ತು ಜಿಲ್ಲೆಗಳಿಂದ ಜನರು ಆಗಮಿಸಲಿದ್ದಾರೆ. ಆದ್ದರಿಂದ ಈ ಉತ್ಸವವನ್ನು ಅರ್ತಪೂರ್ಣವಾಗಿ ಮತ್ತು ಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕೆಂದರು. ಉತ್ಸವ ಬಗ್ಗೆ ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾ.ಪಂ ಅಧಿಕಾರಿಗಳು ಪ್ರಚಾರ ಮಾಡುವುದರ ಜತೆಗೆ ವಿವಿಧ ಕ್ರೀಡಾಕೂಟ ಸೇರಿದಂತೆ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರು ಭಾಗವಹಿಸಲು ಮಾಹಿತಿ ನೀಡಬೇಕೆಂದು ಹೇಳಿದರು.0ಪ್ರಾಸ್ತವಿಕವಾಗಿ ತಹಸೀಲ್ದಾರ್ ಮಂಜುನಾಥ ಭೋಗಾವತಿ ಮಾತನಾಡಿ ಎಡೆದೊರೆ ನಾಡುರಾಯಚೂರು ಜಿಲ್ಲಾ ಉತ್ಸವದಲ್ಲಿ ಕೃಷಿಮೇಳ, ಆಹಾರ ಮೇಳ, ಕೈಗಾರಿಕೆ , ಕರಕುಶಲ, ಪುಸ್ತಕ ಮಳಿಗೆಗಳ ಪ್ರದರ್ಶನ ಜತೆಗೆ ವಿವಿಧ ಗ್ರಾಮೀಣ ಕ್ರೀಡಾಕೂಟಗಳನ್ನು ಏರ್ಪಡಿಸಲಾಗಿದ್ದು, ಸ್ಥಳೀಯರು ಭಾಗವಹಿಸಬೇಕೆಂದರು.
ನಂತರ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ಯಾದವ, ಪುರಸಭೆ ಅಧ್ಯಕ್ಷ ಸುರೇಶ ಹರಸೂರು, ಸರಕಾರಿ ನೌಕರರ ಸಂಘದ ಅಧ್ಯಕ್ಷ ಪಂಪಾಪತಿ ಹೂಗಾರ ಮಾತನಾಡಿದರು.
ಸ್ಥಳೀಯ ಕಲಾವಿದ ವಿಠ್ಠಲ್ ಬಸ್ಸಾಪೂರು ಮಾತನಾಡಿ ರಾಯಚೂರು ಉತ್ಸವದಲ್ಲಿ ನಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯ ಅವಕಾಶ ಮಾಡಿಕೊಡಬೇಕೆಂದು ಕೇಳಿಕೊಂಡಾಗ ಶಾಸಕರು ಸ್ಥಳೀಯರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಯಾವ ವಿಭಾಗದಲ್ಲಿ ಕಲೆಯನ್ನು ಪ್ರದರ್ಶಿಸುತ್ತಿರಿ ಅಂತ ಹೆಸರು ನೊಂದಾಯಿಸಲು ತಿಳಿಸಿದರು. ನಂತರ ಅಶೋಕ ಮುರಾರಿ ಮಾತನಾಡಿ ಉತ್ಸವದಲ್ಲಿ ಎನ್‌ಕೆಆರ್‌ಟಿಸಿ ಲೋಗೊ ಹಾಕಿರುವುದು ಸಂತೋಷದ ವಿಷಯ ಅದರ ಜತೆಗೆ ಅಶೋಕ ಶಿಲಾಶಾಸನದ ಪೂರ್ಣ ಮಾಹಿತಿ ಇರುವ ಫಲಕವನ್ನು ಅಳವಡಿಸಬೇಕು ಮತ್ತು ಉತ್ಸವಕ್ಕೆ ತೆರಳಲು ಸಾರಿಗೆ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ತಾಲೂಕಾಧಿಕಾರಿಗಳು, ಗ್ಯಾರಂಟಿ ಸಮಿತಿಯ ಅಧ್ಯಕ್ಷ ಮೈಬುಸಾಬ ಮುದ್ದಾಪೂರು ಸೇರಿದಂತೆ ವಿವಿಧ ಪಕ್ಷದ ಮುಖಂಡರು, ನಾನಾ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರಿದ್ದರು.
ಗ್ರಂಥಾಲಯಕ್ಕೆ ಪುಸ್ತಕ ವಿತರಣೆ: ತಾಲೂಕಿನ ೨೧ ಗ್ರಾ.ಪಂ ವ್ಯಾಪ್ತಿಯ ಮತ್ತು ನೂತನ ೪ ಗ್ರಂಥಾಲಯಗಳಿಗೆ ತಾ.ಪಂ ವತಿಯಿಂದ ಗ್ರಾಮೀಣದ ಭಾಗದವರಿಗೆ ಸ್ಪರ್ಧಾತ್ಮಾಕ ಪರೀಕ್ಷೆ ಎದುರಿಸಲು ಪುಸ್ತಕಗಳನ್ನು ಗ್ರಂಥಾಪಾಲಕರಿಗೆ ನೀಡಿದರು.

ಮುಂದಿನ ದಿನಗಳಲ್ಲಿ ಅಶೋಕ ಉತ್ಸವ ಭರವಸೆ
ದೇಶಕ್ಕೆ ಮಸ್ಕಿಯ ಹೆಸರನ್ನು ಪರಿಚಯಸಿದ ಮತ್ತು ಸಾಮ್ರಾಟ್ ಅಶೋಕನೇ, ದೇವಾನಂಪ್ರಿಯಾ ಅಶೋಕ ಎಂದು ತಿಳಿಸಿದ ಶಿಲಾಶಾಸನ ಮಸ್ಕಿಯಲ್ಲಿರುವದರಿಂದ ಮುಂದಿನ ದಿನಗಳಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಮಸ್ಕಿಯಲ್ಲೇ ಅಶೋಕ ಉತ್ಸವವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಶಾಸಕ ಆರ್.ಬಸನಗೌಡ ತುರವಿಹಾಳ ಭರವಸೆ ನೀಡಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷೆಗೆ ಪುಸ್ತಕ ವಿತರಣೆ:
ಮಧ್ಯ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಆರ್ ಬಸನಗೌಡ ತುರುವಿಹಾಳವರು ಮಸ್ಕಿ ತಾಲೂಕಿನ 21 ಗ್ರಾಮ ಪಂಚಾಯಿತಿಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗಲೆಂದು ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿ ಪುಸ್ತಕಗಳನ್ನು ವಿತರಿಸಿದರು.

Leave a Reply

Your email address will not be published. Required fields are marked *