ಬರ್ಮಾ ಕ್ಯಾಂಪ್‌ನ ಆರೋಗ್ಯ ಮಾತೆ ದೇವಾಲಯದಲ್ಲಿ ಭಕ್ತಿಭಾವ, ಐಕ್ಯತೆ ಹಾಗೂ ಪರಸ್ಪರ ಸಹಬಾಳ್ವೆಯ ಸಂದೇಶವನ್ನು ಸಾರುವಂತೆ ಸಾಮೂಹಿಕ ಪೊಂಗಲ್ ಹಬ್ಬವನ್ನು ವೈಭವದಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ದೇವಾಲಯದಲ್ಲಿ ಬಲಿ ಪೂಜೆ ಅರ್ಪಿಸಿ, ಭಕ್ತರು ತಮ್ಮ ತಮ್ಮ ಮನೆಗಳಲ್ಲಿ ತಯಾರಿಸಿದ ಪೊಂಗಲ್ ಆಹಾರವನ್ನು ಬಲಿಪೀಠಕ್ಕೆ ಸಮರ್ಪಿಸಿದರು. ರೈತರ ಸಮೃದ್ಧಿಗಾಗಿ, ರೈತಮಿತ್ರ ದನ–ಕರುಗಳ ಆರೋಗ್ಯ ಹಾಗೂ ಹೊಲ–ಗದ್ದೆಗಳ ಫಲವತ್ತತೆಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ದಿವ್ಯ ಬಲಿ ಪೂಜೆಯನ್ನು ನೆರವೇರಿಸಲಾಯಿತು. ಎಲ್ಲಾ ಮನೆಗಳಿಂದ ತಂದ ಪೊಂಗಲ್ ಆಹಾರವನ್ನು ಒಂದೇ ಪಾತ್ರೆಯಲ್ಲಿ ಬೆರೆಸಿ ಹಂಚುವ ಮೂಲಕ ಎಲ್ಲರೂ ಭಾವೈಕ್ಯದಿಂದ ಬದುಕುವ ಸಹಬಾಳ್ವೆಯ ಪಾಠವನ್ನು ಈ ಆಚರಣೆ ಪ್ರತಿಬಿಂಬಿಸಿತು.
ಪೊಂಗಲ್ ಹಬ್ಬವನ್ನು ಮೂರು ದಿನಗಳ ಕಾಲ—ಭೋಗಿ ಪೊಂಗಲ್, ಮಾಟ್ ಪೊಂಗಲ್ (ದನ–ಕರುಗಳಿಗಾಗಿ ವಿಶೇಷ ಪೊಂಗಲ್) ಮತ್ತು ಕಾಣ ಪೊಂಗಲ್—ವಿಭಿನ್ನ ರೀತಿಯಲ್ಲಿ ಆಚರಿಸಲಾಯಿತು. ಈ ಗ್ರಾಮದಲ್ಲಿ ಸುಮಾರು 54 ವರ್ಷಗಳಿಂದ ಪುನರ್ವಸತಿಗೊಂಡ ತಮಿಳು ಸಮುದಾಯದವರು ಈ ವಿಶೇಷ ಸಂಪ್ರದಾಯವನ್ನು ನಿರಂತರವಾಗಿ ಉಳಿಸಿಕೊಂಡು ಬರುತ್ತಿರುವುದು ಗಮನಾರ್ಹ. ತಮಿಳು ಸಮುದಾಯದವರಷ್ಟೇ ಅಲ್ಲದೆ, ಗ್ರಾಮದಲ್ಲಿ ವಾಸಿಸುವ ಎಲ್ಲ ಸಮುದಾಯದ ಜನರೂ ಈ ಪೊಂಗಲ್ ಆಚರಣೆಯಲ್ಲಿ ಭಾಗವಹಿಸಿ ಏಕತೆಯನ್ನು ಬೆಳೆಸುತ್ತಿದ್ದಾರೆ.
ಪೊಂಗಲ್ ಹಬ್ಬದ ದಿವ್ಯ ಬಲಿ ಪೂಜೆಯನ್ನು ರೆವರೆಂಡ್ ಫಾದರ್ ಪೋಲ್ ರಾಜ್ ಪೌಲ್ ರಾಜ್ ಸಿಂಧನೂರು ವಲಯದ ಮುಖ್ಯ ಗುರುಗಳಾದ ಫಾದರ್ ಜ್ಞಾನಪ್ರಕಾಶ್ ಹಾಗೂ ಬರ್ಮಾ ಕ್ಯಾಂಪ್ ವಿಚಾರಣಾ ಗುರುಗಳಾದ ಫಾದರ್ ಪಿ.ಜೆ. ಹೃದಯ ರಾಜ್ ಫಾದರ್ ಸುಂದರ್ ರಾಜ್ ಅವರುಗಳು ಭಕ್ತರಿಗಾಗಿ ನೆರವೇರಿಸಿದರು.
ಆರೋಗ್ಯ ಮಾತೆ ದೇವಾಲಯದ ಪಾಲನಾ ಸಮಿತಿಯ ಸದಸ್ಯರು, ಭಕ್ತಾದಿಗಳು ಹಾಗೂ ಗ್ರಾಮಸ್ಥರು ಈ ಪೊಂಗಲ್ ಆಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಶಾಂತಿ, ಸಮೃದ್ಧಿ ಮತ್ತು ಸಹೋದರತ್ವಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

Leave a Reply

Your email address will not be published. Required fields are marked *