ತಾಳಿಕೋಟಿ: ಮತಕ್ಷೇತ್ರದ ವಿವಿಧ ಅಭಿವೃದ್ಧಿ ಕೆಲಸಗಳಿಗಾಗಿ ಕಳೆದ ಎರಡು ವರ್ಷಗಳಲ್ಲಿ ರೂ.200 ಕೋಟಿಗಿಂತಲೂ ಹೆಚ್ಚು ಅನುದಾನವನ್ನು ತಂದು ಕೆಲಸ ಮಾಡುತ್ತಿದ್ದೇನೆ. ಕೆಲವರು ಕೇವಲ ರಾಜಕಾರಣಕ್ಕಾಗಿ ಅನುದಾನದ ಕೊರತೆಯಿಂದಾಗಿ ಅಭಿವೃದ್ಧಿ ಕಾರ್ಯಗಳು ನಿಂತು ಹೋಗಿವೆ ಎಂಬ ಸುಳ್ಳು ಆರೋಪ ಮಾಡುತ್ತಿದ್ದಾರೆ ಇಂಥವರ ಮಾತುಗಳನ್ನು ನೀವು ನಂಬಬೇಡಿ ಎಂದು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ,ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಹೇಳಿದರು. ಗುರುವಾರ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ 2022-23ನೇ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಅಭಿವೃದ್ದಿ ಯೋಜನೆಯ ರೂ.210 ಲಕ್ಷ ಮೊತ್ತದ ಬಳಗಾನೂರದಿಂದ ಕೊಣ್ಣೂರ(ಕ್ಯಾನಲ್) ವರೆಗೆ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಇದು ಹಿಂದಿನ ಅವಧಿಯಲ್ಲಿ ಆಗಬೇಕಾದ ಕಾಮಗಾರಿ ಅನುದಾನ ಇಲ್ಲದೆ ಇರುವುದರಿಂದ ಬಹಳಷ್ಟು ವಿಳಂಬವಾಗಿದ್ದು ಇದೀಗ ಅನುದಾನವನ್ನು ಮಂಜೂರು ಮಾಡಿಸಿಕೊಂಡು ಚಾಲನೆ ಕೊಟ್ಟಿದ್ದೇನೆ, ಕ್ಷೇತ್ರದಲ್ಲಿ ಹಿಂದಿನ ಅವಧಿಯ ಇಂತಹ 9 ಕಾಮಗಾರಿಗಳು ಇವೆ ನಾನು ಅವುಗಳನ್ನು ರದ್ದುಗೊಳಿಸದೆ ಮುಂದುವರಿಸಿದ್ದೇನೆ ಅಭಿವೃದ್ಧಿ ಕಾರ್ಯಗಳು ಯಾರೇ ಮಾಡಿದರು ಅದನ್ನು ನಾನು ವಿರೋಧಿಸುವುದಿಲ್ಲ ಅಭಿವೃದ್ಧಿಯಲ್ಲಿ ರಾಜಕಾರಣ ನನಗೆ ಬೇಕಾಗಿಲ್ಲ ರಾಜಕಾರಣ ಚುನಾವಣೆಗೆ ಮಾತ್ರ ಸೀಮಿತವಾಗಿರಬೇಕೆಂಬುದು ನನ್ನ ಧೋರಣೆಯಾಗಿದೆ.ಬಳಗಾನೂರದಿಂದ ಮಿಣಜಗಿ ಕೂಡು ರಸ್ತೆ ಅಭಿವೃದ್ಧಿಯ ಅಗತ್ಯವಿದ್ದು ಇದಕ್ಕಾಗಿ ಈಗಾಗಲೇ ರೂ.2 ಕೋಟಿ ಕಾಯ್ದಿರಿಸಿದ್ದು ಟೆಂಡರ್ ಹಂತದಲ್ಲಿದೆ ಆದಷ್ಟು ಬೇಗ ಆರಂಭಿಸಲಾಗುವುದು. ಕ್ಷೇತ್ರದ ಜನರ ಸಾಕಷ್ಟು ಬೇಡಿಕೆಗಳಿವೆ ಆದರೆ ಎಲ್ಲಾ ಕೆಲಸಗಳನ್ನು ಹಂತ ಹಂತವಾಗಿ ಮಾಡಲಾಗುವುದು ಇದಕ್ಕೆ ನಿಮ್ಮೆಲ್ಲರ ಸಹಕಾರ ನನಗೆ ಬೇಕು ಎಂದರು. ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ ಪ್ರಾಸ್ತಾವಿಕವಾಗಿ ಮಾತನಾಡಿ ಶಾಸಕ ಅಪ್ಪಾಜಿ ನಾಡಗೌಡರು ಮಾತು ಕಡಿಮೆ ಕೆಲಸ ಹೆಚ್ಚು ಎಂಬ ಮಾತಿನಲ್ಲಿ ವಿಶ್ವಾಸ ಇಟ್ಟಂತವರು, ದ್ವೇಷ ರಾಜಕಾರಣ ಮಾಡದ ಪ್ರಚಾರ ಬಯಸದ ವ್ಯಕ್ತಿಗಳಾಗಿದ್ದಾರೆ ಬೇರೆಯವರಂತೆ ಸುಳ್ಳು ಆಶ್ವಾಸನೆಗಳನ್ನು ಅವರು ಕೊಡುವುದಿಲ್ಲ ಕೊಟ್ಟ ಮಾತಿನಂತೆ ಅವರು ನಡೆದುಕೊಳ್ಳುತ್ತಾರೆ ಈಗಾಗಲೇ ಕ್ಷೇತ್ರದಲ್ಲಿ 200 ಕೋಟಿಯಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ ಇದರ ಸಂಪೂರ್ಣ ಮಾಹಿತಿಯನ್ನು ನಾನು ಕೊಡಬಲ್ಲೆ, ಸುಳ್ಳು ಹೇಳುವರನ್ನು ನಂಬದೇ ಶಾಸಕರೊಂದಿಗೆ ನಾವೆಲ್ಲರೂ ಸಹಕರಿಸೋಣ ಎಂದರು.ಇದೇ ಸಂದರ್ಭದಲ್ಲಿ ಶಾಸಕ ಅಪ್ಪಾಜಿ ನಾಡಗೌಡರನ್ನು ಗ್ರಾಮಸ್ಥರಿಂದ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ವೇ.ಮೂ. ಶಾಂತಯ್ಯ ಹಿರೇಮಠ, ಮುಖಂಡರಾದ ನಿಂಗನಗೌಡ ಪಾಟೀಲ, ಪ್ರಭುಗೌಡ ಮದರಕಲ್ಲ, ಶಿವಣ್ಣ ಕಡಕೋಳ, ಬಸನಗೌಡ ಬಗಲಿ,ಮಲ್ಲಣ್ಣ ದೋರನಹಳ್ಳಿ,ಚೆನ್ನಣ್ಣ ಅಲದಿ, ನಿವೃತ್ತ ಶಿಕ್ಷಕ ಹೂಗಾರ, ಪಿಕೆಪಿಎಸ್ ಅಧ್ಯಕ್ಷ ನೀಲಪ್ಪ ನರಸಣಗಿ, ಮಲ್ಲನಗೌಡ ಬಿರಾದಾರ, ಸಂಗನಗೌಡ ಅಸ್ಕಿ, ಗುತ್ತಿಗೆದಾರ ಬಿಎಸ್ ಪಾಟೀಲ (ವಣಕಿಹಾಳ), ಎಇಇ ಜ್ಞಾನೇಶ ಮುರಾಳ ಹಾಗೂ ಗ್ರಾಮಸ್ಥರು ಇದ್ದರು.

