ಬಳಗಾನೂರು, ಜ.14:
ಪಟ್ಟಣದ ಪೊಲೀಸ್ ಠಾಣೆಗೆ ಸಿಂಧನೂರು ಗ್ರಾಮೀಣ ವೃತ್ತದ ಸಿಪಿಐ ವಿನಾಯಕ ಅವರು ಭೇಟಿ ನೀಡಿ, ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿರುವ ರೌಡಿ ಶೀಟರ್‌ಗಳು ಹಾಗೂ ಎಂಓಬಿ (MO-B) ಪಟ್ಟಿಯಲ್ಲಿರುವವರ ಪರೇಡ್ ನಡೆಸಿದರು.
ಪರೇಡ್ ಸಂದರ್ಭದಲ್ಲಿ ಪಟ್ಟಣ ಹಾಗೂ ಠಾಣಾ ವ್ಯಾಪ್ತಿಯ ವಿವಿಧ ಗ್ರಾಮಗಳಿಂದ ಹಾಜರಿದ್ದ ರೌಡಿ ಶೀಟರ್‌ಗಳು ಮತ್ತು ಎಂಓಬಿದಾರರನ್ನು ಉದ್ದೇಶಿಸಿ ಮಾತನಾಡಿದ ಸಿಪಿಐ ವಿನಾಯಕ ಅವರು, ಕಾನೂನು ಪಾಲನೆ ಕುರಿತು ಸವಿಸ್ತಾರವಾಗಿ ತಿಳುವಳಿಕೆ ನೀಡಿದರು. ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಯಾವುದೇ ರೀತಿಯ ಗಲಾಟೆ, ಹಲ್ಲೆ, ಅಕ್ರಮ ಚಟುವಟಿಕೆಗಳು, ಬೆದರಿಕೆ, ಜೂಜು, ಮದ್ಯಪಾನ, ಅಕ್ರಮ ವಹಿವಾಟು ಹಾಗೂ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಾರದೆಂದು ಕಟ್ಟುನಿಟ್ಟಾಗಿ ಸೂಚಿಸಿದರು.
ಮುಂದಿನ ದಿನಮಾನಗಳಲ್ಲಿ ಕಾನೂನು ಮೀರಿದರೆ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಲಿದ್ದು, ಯಾವುದೇ ರೀತಿಯ ಸಡಿಲಿಕೆ ನೀಡಲಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಉತ್ತಮ ಜೀವನ ನಡೆಸಿ ಸಮಾಜದ ಮುಖ್ಯಧಾರೆಯಲ್ಲಿ ಸೇರಿಕೊಳ್ಳುವಂತೆ ಸಲಹೆ ನೀಡಿದ ಅವರು, ಪೊಲೀಸರೊಂದಿಗೆ ಸಹಕರಿಸಿದರೆ ಕಾನೂನುಬದ್ಧವಾಗಿ ಬದುಕಲು ಎಲ್ಲಾ ರೀತಿಯ ಮಾರ್ಗದರ್ಶನ ನೀಡಲಾಗುವುದು ಎಂದು ಹೇಳಿದರು.
ಈ ಕ್ರಮದಿಂದ ಪಟ್ಟಣದಲ್ಲಿ ಶಾಂತಿ, ಭದ್ರತೆ ಹಾಗೂ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸುವ ಉದ್ದೇಶವಿದ್ದು, ಅಪರಾಧ ಚಟುವಟಿಕೆಗಳನ್ನು ತಡೆಗಟ್ಟಲು ಇಂತಹ ಪರೇಡ್‌ಗಳು ನಿರಂತರವಾಗಿ ನಡೆಸಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಎಸ್‌ಐ ಸಿದ್ದಪ್ಪ, ಸಿಬ್ಬಂದಿಗಳಾದ ವೆಂಕಟೇಶ್, ರೇವಣ್ಣಸಿದ್ದಪ್ಪ, ಹನುಮಂತ, ಪ್ರಕಾಶ್ ಸೇರಿದಂತೆ ಇತರ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.

