ಲಿಂಗಸಗೂರು : ಜ 3 ಜ 07 ರಂದು ರಾಯಚೂರು ಜಿಲ್ಲೆಗೆ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಲಿರುವ ಹಿನ್ನೆಲೆ ತಾಲೂಕಡಳಿತ ಹಾಗೂ ವಿವಿಧ ಸರ್ಕಾರಿ ಇಲಾಖೆಗಳು ಅಲರ್ಟ್ ಆಗಿರುವ ಮಧ್ಯೆ, ಲೋಕಾಯುಕ್ತ ಅಧಿಕಾರಿಗಳು ದಿಢೀರಾಗಿ ತಾಲೂಕಿನ ವಿವಿಧ ಇಲಾಖೆಯಲ್ಲಿ ಪರಿಶೀಲನೆ ನಡೆಸಿದ್ದಾರೆ.
ತಾಲೂಕಿನ ತಹಸೀಲ್ದಾರ್ ಕಚೇರಿ, ಉಪ ನೋಂದಣಿ ಕಚೇರಿ , ಹಾಗೂ ಪುರಸಭೆ ಕಚೇರಿಗಳಿಗೆ ಲೋಕಾಯುಕ್ತ ಅಧಿಕಾರಿಗಳ ತಂಡಗಳು ಏಕಾಏಕಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಧಿಕಾರಿಗಳು ಹಾಗೂ ಸಿಬ್ಬಂದಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಪಟ್ಟಣದ ಎಲ್ಲಾ ಸರಕಾರಿ ಕಚೇರಿಗಳಲ್ಲಿ ಲಂಚ ಹಾಗೂ ಮಧ್ಯವರ್ತಿಗಳ ಆಕ್ರಮ ಹಾವಳಿ ಕುರಿತಾಗಿ ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ಲೋಕಾಯುಕ್ತ ಅಧಿಕಾರಿಗಳ ತಂಡ ಮಿನಿ ವಿಧಾನಸೌಧದ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ. ಪಟ್ಟಣದ ತಹಶೀಲ್ದಾರ ಕಚೇರಿ, ಉಪ ನೋಂದಣಿ ಅಧಿಕಾರಿಗಳ ಕಚೇರಿ ಹಾಗೂ ಪುರಸಭೆ ಕಾರ್ಯಾಲಯಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ ಲೋಕಾಯುಕ್ತ ತಂಡ, ಕಡತ ಹಾಗೂ ದಾಖಲೆಗಳ ಹಾಗೂ ವ್ಯವಹಾರ ಸಂಬಂಧಿತ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಸಾರ್ವಜನಿಕರ ಕೆಲಸಗಳನ್ನು ಎಲ್ಲಾ ಸರಕಾರಿ ಕಚೇರಿ ಗಳಲ್ಲಿ ನೇರವಾಗಿ ಮಾಡಿಸಿ ಕೊಳ್ಳಲು ಸಾಧ್ಯ ವಾಗದೇ ಮಧ್ಯವರ್ತಿಗಳ ಮೂಲಕವೇ ಕೆಲಸ ಮಾಡಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು .
ವಿವಿಧ ಕೆಲಸಗಳಿಗೆ ಲಂಚ ಬೇಡಿಕೆ ಮಾಡಲಾಗುತ್ತಿದೆ ಎಂಬ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎಂದು ತಿಳಿದುಬಂದಿದೆ. ದಾಳಿಯ ವೇಳೆ ಅಧಿಕಾರಿಗಳ ಕಚೇರಿಗಳಲ್ಲಿ ಹಾಜರಿದ್ದ ಸಿಬ್ಬಂದಿಯನ್ನು ವಿಚಾರಣೆಗೊಳ ಪಡಿಸಲಾಗಿದ್ದು, ಕಡತಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಲೋಕಾಯುಕ್ತ ದಾಳಿಯಿಂದಾಗಿ ಮಿನಿ ವಿಧಾನಸೌಧದಲ್ಲಿ ಕೆಲಕಾಲ ಅಧಿಕೃತ ಕೆಲಸಗಳು ಸ್ಥಗಿತಗೊಂಡು, ಸಾರ್ವಜನಿಕರಲ್ಲಿ ಆತಂಕ ಮೂಡಿತು. ಕಚೇರಿಯಲ್ಲಿ ಕಡತಗಳ ಪರಿಶೀಲನೆ ಇನ್ನು ಮುಂದುವರಿದಿದೆ .

