ರಾಯಚೂರು: ಗುರು ರಾಯರ ವಾರ ಗುರುವಾರವೇ ವರ್ಷದ ಮೊದಲ ದಿನ ಬಂದ ಪ್ರಯುಕ್ತ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಮಠದ ಆವರಣ ಸಾವಿರಾರು ಸಂಖ್ಯೆಯ ಭಕ್ತರಿಂದ ತುಂಬಿಕೊಂಡಿದೆ.
ಬೆಳಗಿನ ಜಾವ ಐದು ಗಂಟೆಯಿಂದಲೇ ರಾಯರ ವೃಂದಾವನ ದರ್ಶನಕ್ಕೆ ಅನುವು ಮಾಡಿಕೊಡಲಾಗಿತ್ತು.
ಮಠದೊಳಗೆ ಬರಲು ಎಲ್ಲ ದ್ವಾರಗಳ ಮೂಲಕ ಅವಕಾಶ ಕಲ್ಪಿಸಲಾಗಿತ್ತು.
ಬಹುತೇಕ ಭಕ್ತರು ಕುಟುಂಬದ ಸದಸ್ಯರೊಂದಿಗೆ ಮಂತ್ರಾಲಯಕ್ಕೆ ಬಂದು ಸರತಿ ಸಾಲಿನಲ್ಲಿ ನಿಂತು ರಾಯರ ದರ್ಶನ ಪಡೆದರು. ಹೊಸ ವರ್ಷ ಶುಭವನ್ನೇ ತರಲಿ ಎಂದು ಪ್ರಾರ್ಥನೆ ಸಲ್ಲಿಸಿದರು.
ಬೆಂಗಳೂರು, ಮೈಸೂರು, ಶಿವಮೊಗ್ಗ ಹಾಗೂ ದಾವಣಗೆರೆಯಿಂದ ಬಂದಿದ್ದ ಭಕ್ತರಿಗೆ ಮಠದ ಕೊಠಡಿ ಲಭ್ಯವಾಗದೇ ತೊಂದರೆ ಅನುಭವಿಸಿದರು. ಕಿಕ್ಕಿರಿದ ಭಕ್ತರಿಂದಾಗಿ ಪ್ರಸಾದ ವಿತರಣೆ ವ್ಯವಸ್ಥೆಯಲ್ಲಿ ವ್ಯತ್ಯಯವಾಯಿತು.

