ಮಸ್ಕಿ : ಇತಿಹಾಸವನ್ನು ನೋಡುವ ಕ್ರಮ ಬದಲಾಗಿ,ಇತಿಹಾಸವನ್ನು ವಿವಿಧ ಆಯಾಮಗಳಿಂದ ಅಧ್ಯಯನ ಮಾಡಬೇಕು, ಮಸ್ಕಿಯಲ್ಲಿ ಇವುಗಳಿಗೆ ಸಂಬಂಧಿಸಿದ ಎಲ್ಲಾ ಯುಗಗಳ ಐತಿಹಾಸಿಕ ಆಕರಗಳಿವೆ ಎಂದು ಪ್ರೊ.ಶಿವಾನಂದ ಕೆಳಗಿನಮನಿ ಹೇಳಿದರು.

ಪಟ್ಟಣದ ದೇವಾನಂಪ್ರಿಯ ಅಶೋಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ರಾಯಚೂರು,ಇವರ ಸಹಯೋಗದಲ್ಲಿ “ಮಸ್ಕಿ ಪರಿಸರ : ಪುರಾತತ್ವ,ಇತಿಹಾಸ ಮತ್ತು ಸಂಸ್ಕೃತಿ” ಎಂಬ ವಿಷಯದ ಕುರಿತು ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿ,
ಇಲ್ಲಿಯ ಬೆಟ್ಟಗಳಲ್ಲಿ ನಾಗರಿಕ,ಸಾಂಸ್ಕೃತಿಕ ಕುರುಹುಗಳು ಯಥೇಚ್ಛ ಪ್ರಮಾಣದಲ್ಲಿ ದೊರಕಿವೆ,ವಿವಿಧ ಧಾರ್ಮಿಕ ಪಂಥಗಳಾದ ಬೌದ್ಧ,ಜೈನ,ವೈಷ್ಣವ,ವೀರಶೈವ,ಸಿದ್ದ,ನಾಥ,ಯೋಗಿ, ಜೋಗಿ,ತಾಣಗಳು ಕಂಡು ಬರುತ್ತವೆ ಎಂದರು.
ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷ ಡಾ.ದೇವರಕೊಂಡಾರೆಡ್ಡಿ ಯವರು ಮಾತನಾಡಿ,ಈ ಸ್ಥಳವು ಐತಿಹಾಸಿಕ ಮಹತ್ವದ ಸ್ಥಾನ ಪಡೆದುಕೊಂಡಿದ್ದು,ಇಲ್ಲಿನ ಅಶೋಕನ ಶಾಸನಗಳಿಂದ ಮಸ್ಕಿಯು ಭಾರತೀಯ ಇತಿಹಾಸದಲ್ಲಿ ಅಷ್ಟೇ ಅಲ್ಲದೆ ಪ್ರಪಂಚದ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿದೆ ಎಂದರು.
ಡಾ.ರಮೇಶ ನಾಯಕ ಕನ್ನಡ ವಿಶ್ವವಿದ್ಯಾಲಯ,ಹಂಪಿ ಇತಿಹಾಸ ಮುಖ್ಯಸ್ಥರು ಇವರು” ಮಸ್ಕಿ ಪರಿಸರದ ಪ್ರಾಗೈತಿಹಾಸಿಕ” ಕುರಿತು ವಿಷಯ ಮಾತನಾಡಿ, ಸುಮಾರು 3500 ವರ್ಷಗಳ ಹಿಂದೆ ಬೃಹತ್ ಶಿಲಾಯುಗ ಸಂಸ್ಕೃತಿ ಕಾಲದಲ್ಲಿ ಕಬ್ಬಿಣ ಬಳಕೆಯಿಂದ ಕೃಷಿ ವಿಕಸನಗೊಂಡು,ವ್ಯಾಪಾರ ಅಧಿಕವಾಗಿ ರೋಮ್,ಗ್ರೀಕ್ ನೊಂದಿಗೆ ವ್ಯಾಪಾರ ಸಂಪರ್ಕಗಳು ಬೆಳೆದವು.ಇಲ್ಲಿನ ಮಡಿಕೆಗಳ ಮೇಲೆ ರೋಮ್ ನ ಪ್ರಭಾವ ಕಾಣಬಹುದು ಇಲ್ಲಿನ ಕೆಲವು ಕುರುಹುಗಳು ಸಿಂಧೂ ನಾಗರಿಕತೆಯೊಂದಿಗೆ ಸಾಮ್ಯತೆ ಹೊಂದಿವೆ ಎಂದರು.
ಡಾ.ಎಲ್.ಪಿ.ಮಾರುತಿ,ಕರ್ನಾಟಕ ವಿಶ್ವವಿದ್ಯಾಲಯ,ಧಾರವಾಡ ಇವರು “ಮಸ್ಕಿ ಪರಿಸರದ ಇತಿಹಾಸ ಮತ್ತು ಸಂಸ್ಕೃತಿ” ಬಗ್ಗೆ ವಿಷಯ ಮಂಡನೆ ಮಾಡಿ ಇಲ್ಲಿನ ಹೊಸ ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದರು.
ಡಾ.ಮಹಾಂತಗೌಡ ಪಾಟೀಲ್ ರವರು ಮಾತನಾಡಿ “ವಿಶ್ವವಿದ್ಯಾನಿಲಯದ ನಡೆ ವಿದ್ಯಾರ್ಥಿಗಳ ಕಡೆಗೆ” ಎಂಬ ವಿನೂತನ ಕಾರ್ಯಕ್ರಮ ಮೊದಲ ಬಾರಿಗೆ ನಮ್ಮ ಕಾಲೇಜ್ ನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಧನ್ಯವಾದ ಹೇಳಿ, ವಿದ್ಯಾರ್ಥಿಗಳಿಗೆ ಹಾಗೂ ಇತಿಹಾಸ ಆಸಕ್ತರಿಗೆ ಜ್ಞಾನದ ಉಪಯುಕ್ತವಾದ ಮಾಹಿತಿ ನೀಡುವ ಯಾವುದೇ ಕಾರ್ಯಕ್ರಮಗಳು ಮಾಡುವುದಾದರೆ ಅದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು.
ಈ ವೇಳೆ, ಡಾ.ಕೆ.ವೆಂಕಟೇಶ್ ಮುಖ್ಯಸ್ಥರು,ಇತಿಹಾಸ ವಿಭಾಗ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯ,ರಾಯಚೂರು,
ಶ್ರೀನಿವಾಸ ಯಾಳಗಿ, ಸಣ್ಣಪ್ಪ ನಾಯಕ, ಡಾ.ಪರಮಾನಂದ ಹಂಗರಗಿ,ಶಿವಶರಣಪ್ಪ ಇತ್ಲಿ, ಡಾ.ಮಂಜುನಾಥ ಕೆ ಆಶಾ.ಸಿ,ಸಣ್ಣಪ್ಪ ನಾಯಕ, ರೋಹಿಣಿ ಮೂರ್ತಿ,ಡಾ.ರಾಮಣ್ಣ ಎ. ಜುಮ್ಮಾ,ಬಸವರಾಜ ತಡಕಲ್,
ಶಿವಗ್ಯಾನಪ್ಪ ಎ.ಲಕ್ಕುಂದಿ,ಹಾಜಿಬಾಬಾ, ಡಾ.ಪರಮಾನಂದ ಹಂಗರಗಿಹಾಗೆ
ಸೇರಿದಂತೆ ವಿವಿಧ ವಿಶ್ವವಿದ್ಯಾಲಯಗಳ ಇತಿಹಾಸ ತಜ್ಞರು,ಪ್ರಾಧ್ಯಾಪಕರು, ಮುಖ್ಯಸ್ಥರು,ವಿದ್ಯಾರ್ಥಿಗಳು,ಇತಿಹಾಸ ಆಸಕ್ತರು ಇದ್ದರು.

Leave a Reply

Your email address will not be published. Required fields are marked *